



ವಿಟ್ಲ: ಸಂಘಟನಾತ್ಮಕವಾಗಿ ವ್ಯವಹರಿಸಿದಾಗ ವೃತ್ತಿ ಭದ್ರತೆಯನ್ನು ಕಾಣಬಹುದು. ಕಾನೂನು ನೀತಿನಿಯಮಗಳನ್ನು ಪಾಲಿಸಿಕೊಂಡು ಕೆಂಪುಕಲ್ಲು ಉದ್ಯಮ ನಡೆಸಲು ಕೆಂಪುಕಲ್ಲು ಪಾಯ ಮಾಲಕರ ಹಾಗೂ ಕೆಂಪು ಕಲ್ಲು ಲಾರಿ ಮಾಲಕರ ಸಂಘ ಪೂರಕವಾಗಿದೆ. ಈಗಾಗಲೇ ಜಿಲ್ಲಾ ಮಟ್ಟದ ಸಂಘ ನೋಂದಾವಣೆಗೊಂಡಿದ್ದು, ರಾಜ್ಯದಲ್ಲಿ ಕೆಂಪುಕಲ್ಲುಗಳಿಗೆ ವಿಧಿಸುವ ತೆರಿಗೆ ಸರಳೀಕರಣಗೊಳಿಸಲು ನಿರಂತರ ಪ್ರಯತ್ನ ನಡೆದಿದ್ದು, ಗಣಿ ಸಚಿವರು ಭರವಸೆ ನೀಡಿದ್ದಾರೆ ಎಂದು ದ.ಕ ಜಿಲ್ಲಾ ಕೆಂಪು ಕಲ್ಲು ಪಾಯ ಮಾಲಕರ ಮತ್ತು ಲಾರಿ ಮಾಲಕರ ಸಂಘದ ಕಾರ್ಯದರ್ಶಿ ರವಿ ರೈ ತಿಳಿಸಿದರು.
ಅವರು ವಿಟ್ಲ ಗಜಾನನ ಸಭಾ ಭವನದಲ್ಲಿ ಮಂಗಳವಾರ ನಡೆದ ವಿಟ್ಲ ವಲಯ ಕೆಂಪುಕಲ್ಲು ಪಾಯ ಮಾಲಕರ ಹಾಗೂ ಕೆಂಪು ಕಲ್ಲು ಲಾರಿ ಮಾಲಕರ ಸಂಘದ ೧೦ನೇ ವರ್ಷದ ವಾರ್ಷಿಕ ಮಹಾಸಭೆ, ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಇಲಾಖೆಯ ಅಧಿಕೃತ ಪರವಾನಿಗೆ ಪಡೆದು ಉದ್ಯಮ ನಡೆಸಿಕೊಂಡು ಹೋಗಬೇಕೆಂದು ತಿಳಿಸಿದ ಅವರು ವಿಟ್ಲ ವಲಯ ಅತ್ಯುತ್ತಮ ಶಿಸ್ತುಬದ್ಧ ಸಂಘ ಎಂದು ಗುರುತಿಸಿಕೊಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ ಸುನಿಲ್ರಾಜ್ ಮಾತನಾಡಿ ಸಂಘದ ಸದಸ್ಯರು ಸಕ್ರಿಯರಾದಷ್ಟು ಬೆಳವಣಿಗೆ ಕಾಣಬಹುದು. ಸಂಘದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವಂತ ಚರ್ಚೆ ಸಭೆಯಲ್ಲಿ ನಡೆಯಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಮಂಜೇಶ್ವರ ವಲಯದ ಅಧ್ಯಕ್ಷ ಸುಧಾಕರ ಕೆ. ವಿಟ್ಲ ವಲಯದ ಕಾರ್ಯದರ್ಶಿ ಇಸ್ಮಾಯಿಲ್ ಕೊಡಂಗಾಯಿ, ಕೋಶಾಧಿಕಾರಿ ಸುಧೀರ್ ಯು.ಬಿ. ಭಾಗವಹಿಸಿದ್ದರು.
ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಅಧ್ಯಕ್ಷರಾಗಿ ಉದಯ ಕುಮಾರ್ ದಂಬೆ, ಉಪಾಧ್ಯಕ್ಷರಾಗಿ ರಹೀಂ ಎನ್.ಎಸ್, ಸಿರಿಲ್ ಡಿಸೋಜ, ಕಾರ್ಯದರ್ಶಿಯಾಗಿ ಹರೀಶ್ ಎಸ್.ಪಿ, ಕೋಶಾಧಿಕಾರಿಯಾಗಿ ಜಯಪ್ರಕಾಶ್, ಜತೆ ಕಾರ್ಯದರ್ಶಿಯಾಗಿ ಸಂಜೀವ ಎಂ.ಎಸ್ ಅವರನ್ನು ಆಯ್ಕೆಗೊಳಿಸಲಾಯಿತು.
ಹರೀಶ್.ಎಸ್.ಪಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಜೀವ ಎಂ.ಎಸ್ ವಂದಿಸಿದರು.






