ಬಂಟ್ವಾಳ: ಮಾತೃಭಾಷೆ ಅಥವಾ ಮನೆಭಾಷೆಯನ್ನು ಗೌರವಿಸಿ ಆದರಿಸುವುದು ಎಲ್ಲರ ಕರ್ತವ್ಯ; ತುಳುನಾಡಿನಲ್ಲಿ ತುಳುಭಾಷೆಯನ್ನು ಕಡೆಗಣಿಸಿದರೆ ತಾಯಿಯನ್ನು ಕಡೆಗಣಿಸಿದಂತೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ ಸಾರ್ ಹೇಳಿದರು. ಬಂಟ್ವಾಳ ಕಾಮಾಜೆ ಸರಕಾರಿ ಕಾಲೇಜಿನಲ್ಲಿ ನಡೆದ ತುಳು ಜನಪದ ನೃತ್ಯತರಬೇತಿ ಕಮ್ಮಟವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅತ್ಯಂತ ಪ್ರಾಚೀನವಾದ, ಪ್ರತ್ಯೇಕಕಾಲಗಣನೆ ವ್ಯವಸ್ಥೆಯನ್ನು ಹೊಂದಿದ ಹಾಗೂ ತುಳುನಾಡಿನಲ್ಲಿ ಸಂಸ್ಕೃತ ಭಾಷೆಗೂ ಲಿಪಿಯನ್ನು ಒದಗಿಸಿದ ತುಳುಭಾಷೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಬೇಕು ಹಾಗೂ ರಾಜ್ಯಭಾಷೆಯಾಗಿ ಮನ್ನಣೆ ಪಡೆಯಬೇಕು ಎಂದು ಅವರು ಪ್ರತಿಪಾದಿಸಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಅಜಕ್ಕಳ ಗಿರೀಶ ಭಟ್ ಮಾತನಾಡಿ, ಸ್ಥಳೀಯ ಬಾಷೆಗಳನ್ನು ಉಳಿಸಿ ಬೆಳೆಸಿದರೆ ಸಂಸ್ಕತಿ ಶ್ರೀಮಂತವಾಗುತ್ತದೆ ಹಾಗೂ ತುಳು ಜನಪದ ನೃತ್ಯದಂಥ ಕಲಾಪ್ರಕಾರಗಳೂ ಉಳಿದು ಬೆಳೆಯುತ್ತವೆ ಎಂದು ಹೇಳಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ.ಸತೀಶ್ ‌ಗಟ್ಟಿ ಅವರು ಪ್ರಾಚೀನ ಗ್ರಂಥಗಳಲ್ಲಿ ಹಾಗೂ ಪ್ರವಾಸಕಥನಗಳಲ್ಲಿ ತುಳುನಾಡು ಎಂಬ ಉಲ್ಲೇಖ ಕಾಣಸಿಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಯೋಜಕ ಪ್ರೊ.ನಂದಕಿಶೋರ್‌ ಎಸ್‌ ಅವರು ಸ್ವಾಗತಿಸಿದರು. ಸಾಂಸ್ಕೃತಿಕ ಸಂಘದ ಸಂಚಾಲಕಿ ಪ್ರೊ.ಶಶಿಕಲಾ ಕೆ ವಂದಿಸಿದರು. ಮಮಿತಾ ಕಾರ್ಯಕ್ರಮ ನಿರೂಪಿಸಿದರು.ನೃತ್ಯ ತರಬೇತುದಾರರಾದ ಮುಕುಂದರಾಜ್ ಮತ್ತು ಮಿಥುನ್ ಉಪಸ್ಥಿತರಿದ್ದರು.

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here