ಹೂವು ಹೊರಳುವವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನ ಕಡೆಗೆ ಎಂದು ಹೂವುಗಳೆಲ್ಲ ಸೂರ್ಯನ ಕಡೆಗೆ ಮುಖಮಾಡಿ ನಕ್ಕರೆ ಹಕ್ಕಿಗಳೆಲ್ಲ ಚಂದ್ರನೆಡೆಗೆ ನೆಗೆದು ಬರುತ್ತಿದ್ದವು.

ಈ ದೃಶ್ಯ ಕಂಡು ಬಂದಿದ್ದು ಫೆ.22 ರಂದು ನಡೆದ ಹಕ್ಕಿಗಳಿಗಾಗಿ ಆಹಾರದ ಸಂಚಿ ,ತೃಷೆ ಇಂಗಿಸಲು ಜಲಬಿಂದು-ಉದ್ಘಾಟನಾ ಸಮಾರಂಭದಲ್ಲಿ. ಶ್ರೀ.ಧರ್ಮಸ್ಥಳ ಆಂಗ್ಲಮಾಧ್ಯಮ ಶಾಲೆಯಲ್ಲಿ.

ಬಿಳಿಯುಡುಗೆ ಉಟ್ಟು ಬಣ್ಣ ಬಣ್ಣದ ಗರಿಗಳ ಹೊತ್ತ ಹಕ್ಕಿಗಳಾದ , ಸೂರ್ಯಕಾಂತಿ ಹೂಗಳಾದ, ಸೂರ್ಯ ಚಂದ್ರ,ಗಡಿಯಾರಗಳಾದ ಮಕ್ಕಳು ಹಕ್ಕಿಯನ್ನು ಉಳಿಸಿ ಪರಿಸರವನ್ನು ಉಳಿಸುವ ಜಾಗೃತಿಯನ್ನು ಬಿಂಬಿಸುವ ನಾಟಕದೊಂದಿಗೆ ಅತಿಥಿಗಳನ್ನು ಸ್ವಾಗತಿಸುವ ವಿನೂತನ ವಿಧಾನದ ಮೂಲಕ ಹಕ್ಕಿಗಳಿಗೆ ಆಹಾರ ಒದಗಿಸುವ ಅನ್ನದ ಸಂಚಿ ಹಾಗೂ ನೀರು ಪೂರೈಸುವ ಸಲುವಾಗಿ ಇರುವ ಜಲಬಿಂದುವಿನ ಉದ್ಘಾಟನಾ ಸಮಾರಂಭ ಜರುಗಿತು.ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿ ತಾಲೂಕಿನ ಖ್ಯಾತ ವಕೀಲರು ಹಾಗೂ ರೋಟರಿ ಕ್ಲಬ್ ಇದರ ಪ್ರಸ್ತುತ ಅಧ್ಯಕ್ಷರೂ ಆಗಿರುವ ಶ್ರೀಯುತ ಧನಂಜಯ ರಾವ್ ಇವರು ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ನಾಡಿನಲ್ಲಿ ಎಲ್ಲೆಡೆ ಇದು ಜರುಗಬೇಕು ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.ನಾಲ್ಕುಗೋಡೆಯ ಮಧ್ಯ ಈ ಕಾರ್ಯಕ್ರಮ ನಡೆಸದೆ ಪ್ರಕೃತಿಯ ಮಡಿಲಲ್ಲಿ ಆಯೋಜಿಸಿದ್ದಕ್ಕೆ ಸಂತಸ ಪಟ್ಟರು. ಮಾತ್ರವಲ್ಲದೆ ಪ್ರತೀದಿನ ನಿಮ್ಮ ಮನೆಗಳಿಗೆ ಬರುವ ಹಕ್ಕಿಗಳ ಛಾಯಾಚಿತ್ರ ತೆಗೆದು ಸಂಗ್ರಹಿಸಿ ಅದರ ಹೆಸರನ್ನು ಹೆತ್ತವರಲ್ಲಿ ಕೇಳಬೇಕು.ಯಾರು ಹೆಚ್ಚು ಸಂಗ್ರಹಿಸುತ್ತಾರೋ ಅವರಿಗೆ ಇಂನ್ಟರಾಕ್ಟ್ ಕ್ಲಬ್ ಮುಖಾಂತರ ಬಹುಮಾನ ನೀಡಲಾಗುವುದು ಎಂದು ಸ್ಥಳದಲ್ಲಿಯೇ ಅದಕ್ಕೆ ತಗಲುವ ವೆಚ್ಚವನ್ನು ನೀಡಿದರು.

ಹಕ್ಕಿಗಳ ನಾಶಕ್ಕೆ ಆಗುವ ನಾಶ ಹಾಗು ಅದನ್ನು ಸಂರಕ್ಷಿಸಲು ನಾವು ಮಾಡಬೇಕಾದ ಕ್ರಮಗಳ ಕುರಿತು ಮಾಹಿತಿನೀಡಿದರು.ಇದಕ್ಕೂ ಮೊದಲು ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಈ ಕಾರ್ಯಕ್ರಮದ ರೂಪುರೇಷೆಯ ಕುರಿತು ಸಹಕರಿಸಿದ ವ್ಯಕ್ತಿಗಳ ಕುರಿತು,ಮುಂದಿನ ಯೋಜನೆ ಯೋಚನೆ ಕನಸುಗಳ ಕುರಿತು ವಿಚಾರ ಹಂಚಿಕೊಂಡರು.

ನಂತರ ಮಾತನಾಡಿದ ಧರ್ಮಸ್ಥಳದ ಡಿಎಂಸಿಯ ಶ್ರೀಯುತ ಯಶೋಧರ ಅವರು ಪ್ರಥಮತವಾಗಿ ನಮ್ಮಲ್ಲಿ ಬಂದು ಕೆಲವು ತಂತಿ ಮರದ ತುಂಡು ಇತ್ಯಾದಿ ಪರಿಕರಗಳನ್ನು ಈ ಶಾಲಾ ಮುಖ್ಯೋಪಾಧ್ಯಾಯಿನಿ ಕೇಳಿದಾಗ ಅಚ್ಚರಿಯಾಗಿತ್ತು ಇದೇಕಿರಬಹುದು ಎಂದು. ಆದರೆ ಇಂದು ಅರಿವಾಯಿತು ಉತ್ತಮ ಕೆಲಸಗಳಿಗೆ ಉಪಯೋಗವಾಗಿದೆ ಎಂದು.ಇನ್ನಷ್ಟು ಉತ್ತಮ ಕೆಲಸಗಳು ನಡೆಯುವಂತಾಗಲಿ ಎಂದು ನುಡಿದರು.

ಈ ಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿಗಳಾದ ಶ್ರಿ.ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವಿಧ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಶ್ರೀಯುತ ಸೋಮಶೇಖರ್ ಶೆಟ್ಟಿಯವರು ಮಾತನಾಡುತ್ತಾ ವಿಧ್ಯಾರ್ಥಿಗಳಿಗೆ ಪರಿಸರದೊಂದಿಗೆ ಬದುಕಲು ಕಲಿಯಿರಿ ಎಂದು ನುಡಿದು ಶುಭಹಾರೈಸಿದರು.ಅಚ್ಚುಕಟ್ಟಾಗಿ ಪ್ರಕೃತಿಯ ಮಡಿಲಲ್ಲಿ ನಡೆದ ಕಾರ್ಯಕ್ರಮಕ್ಕೆ ಆಕಾಶವೇ ಚಪ್ಪರವಾಗಿತ್ತು ಭೂಮಿಯೇ ಸಾಕ್ಷಿಯಾದಂತಿತ್ತು.ಅತಿಥಿಗಳಿಗೆ ತೆಂಗಿನ ಗರಿಯಿಂದ ತಯಾರಿಸಿದ ಹಕ್ಕಿಯೇ ಸ್ವಾಗತಿಸಲು ಬಳಸಿದ ವಸ್ತುವಾಗಿತ್ತು ಹಾಗೂ ಶಾಲೆಯಲ್ಲಿ ತಯಾರಿಸಿದ ಉಪಯೋಗವಿಲ್ಲವೆಂದು ಬಿಸಾಡಲು ಹೊರಟ ಕ್ಯಾನ್ ಗಳನ್ನು ‍ಚೌಕಾಕಾರಕ್ಕೆ ಕತ್ತರಿಸಿ ಅದಕ್ಕೆ ಅಂದದ ಬಣ್ಣಹಚ್ಚಿ ಅದರಲ್ಲಿ ಹಕ್ಕಿಗಳಿಗೆ ನೀರು ಹಾಗೂ ಆಹಾರ ನೀಡಲು ಸಾಧ್ಯವಾಗುವಂತಹ ಅನ್ನದ ಸಂಚಿ ಹಾಗೂ ಜಲ ನೀಡುವ ಜಲಬಿಂದುವನ್ನು ಉದ್ಘಾಟನೆ ಗೆ ಬಳಸಲಾಗಿತ್ತು ಹಾಗೂ ಅಂತಹುದೇ ಕ್ಯಾನ್ ಗಳನ್ನು ನೀಡಿ ಅತಿಥಿಗಳ ಮನೆಗಳಲ್ಲೂ ಹಕ್ಕಿಗಳಿಗೆ ಆಹಾರ ,ನೀರು ನೀಡಿ ಆ ಮೂಲಕ ಶಾಲೆಯ ನೆನಪು ಹಸಿರಾಗಿರಲಿ ಎಂದು ನೆನಪಿನ ಕಾಣಿಕೆಯಾಗಿ ನೀಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.ತೋಟದ ತುಂಬೆಲ್ಲಾ ಮರಕ್ಕೆ ಅಲ್ಲಲ್ಲಿ ಸುಂದರ ಬಣ್ಣ ಹೊಂದಿದ, ಒಂದರಲ್ಲಿ ಆಹಾರ ಹಾಗೂ ಮತ್ತೊಂದರಲ್ಲಿ ನೀರು ಹಾಕಿಟ್ಟ ಅಂದದ ತಕ್ಕಡಿಯಂತೆ ಕಾಣುವ ಕ್ಯಾನ್ ಗಳು ಹಕ್ಕಿಗಳ ಹಸಿವು ತಣಿಸಲು ಕಾದ ಜಾತಕ ಪಕ್ಷಿಯಂತೆ ಕಾಣುತ್ತಿದ್ದವು.ಬೇಸಗೆಯಲ್ಲಿ ಈ ಬಾರಿ ಹಕ್ಕಿಗಳು ಹಸಿವು ಬಾಯಾರಿಕೆಯಿಂದ ಕಂಗೆಡಬಾರದು ಎಂಬುದೇ ಇದರ ಗುರಿ.

ಈ ಕಾರ್ಯಕ್ರಮದ ಮುಖಾಂತರ ಪ್ರಕೃತಿ ಹಾಗೂ ಅದರೊಂದಿಗಿನ ಒಡನಾಡಿಗಳನ್ನು ಉಳಿಸುವ ಇನ್ನಷ್ಟು ನೂತನ ವಿಧಾನಗಳನ್ನು ಆವಿಷ್ಕರಿಸುವ ಕನಸುಹೊತ್ತು ಕಾರ್ಯಕ್ರಮ ಕೊನೆಗೊಂಡಿತು. ಶಾಲೆಯ ಸಂವಹನ ಸಂಘ ಹಾಗೂ ಸಾಂಸ್ಕ್ರತಿಕ ಸಂಘದ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಇದರ ಕಾರ್ಯದರ್ಶಿಯಾದ ಶೀಯುತ ಶ್ರೀಧರ್,ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here