Wednesday, October 18, 2023

ಶಿಕ್ಷಕರ ಬಗ್ಗೆ ವಿದ್ಯಾರ್ಥಿ ಮನಸ್ಸು

Must read

ಲೇ: ರಮೇಶ ಎಂ ಬಾಯಾರು ಎಂ.ಎ; ಬಿ.ಇಡಿ

ಶಿಕ್ಷಕರ ಬಗ್ಗೆ ಅತ್ಯಂತ ಭಾವುಕರಾಗುವ ಬೃಹತ್ತಾದ ಪಡೆಯೆಂದರೆ ಅದು ಅವರ ವಿದ್ಯಾರ್ಥಿಗಳದ್ದೇ ಆಗಿದೆ. ಪ್ರತಿಯೊಬ್ಬ ಶಿಕ್ಷಕನೂ ಅಭಿಮಾನಿಸಬೇಕಾದ ಸಂಗತಿಯಿದು. ಶಿಕ್ಷಕರ ಕುರಿತಾಗಿ ವಿದ್ಯಾರ್ಥಿಗಳ ಮನದೊಳಗೆ ತುಂಬಿಕೊಂಡಿರುವ ಆದರಾಭಿಮಾನಗಳ ಪ್ರಮಾಣವು ಅಳತೆಗೋಲಿಗೆ ಅಥವಾ ಯಾವುದೇ ಮಾನದಂಡಕ್ಕೆ ನಿಲುಕದು. ವಿದ್ಯಾರ್ಥಿಗಳ ಮನದೊಳಗಿನ ಭಾವನಾತ್ಮಕ ಸಂಬಂಧದ ಕೊಂಡಿಯ ತಳ ಮತ್ತು ಹರವು ಆಕಾಶದಷ್ಟು ಎತ್ತರ ಮತ್ತು ಸಾಗರದಷ್ಟು ಆಳ.
ವಿದ್ಯಾರ್ಥಿಗಳು ತಾವು ಓದುವ ಶಾಲೆಯಿಂದ ವಿದಾಯ ಪಡೆಯುವ ದಿನ ಅಧ್ಯಾಪಕರ ಬಗ್ಗೆ ಅವರಿಗಿರುವ ಅಭಿಮಾನ ವ್ಯಕ್ತವಾಗುತ್ತದೆ. ಸಾಮಾನ್ಯವಾಗಿ ಏಳನೇ ತರಗತಿ, ಹತ್ತನೇ ತರಗತಿ ಮತ್ತು ದ್ವಿತೀಯ ಪಿ.ಯೂ. ತರಗತಿಗಳಿಂದ ಕಲಿತು ವಿದ್ಯಾ ಸಂಸ್ಥೆಯಿಂದ ಹೊರ ಬರುವ ಸಂದರ್ಭದಲ್ಲಿ ನಡೆಯುವ ಬೀಳ್ಕೊಡುಗೆಯಂದು ಮಕ್ಕಳು ತಮ್ಮ ಮನಸ್ಸನ್ನು ಮುಕ್ತವಾಗಿ ತೆರೆದಿಡುತ್ತಾರೆ. ಪದವಿ ಮತ್ತು ನಂತರದ ತರಗತಿಗಳ ವಿದ್ಯಾರ್ಥಿಗಳು ಅಷ್ಟೊಂದು ಭಾವುಕತೆಯನ್ನು ತೋರುವುದಿಲ್ಲ. ಆದರೆ ಕೆಳ ಹಂತದ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಪರಸ್ಪರ ಭಾವನಾತ್ಮಕವಾಗಿ ಬೆಸೆದು ಕೊಂಡಿರುತ್ತಾರೆ. ಅದಕ್ಕಾಗಿಯೇ ಅಂದು ವಿದ್ಯಾರ್ಥಿಗಳ ಅಳುಕು ಮುಖ, ಜೋಲು ಮುಖ, ದುಃಖಿತ ಮುಖ, ಜಲಧಾರೆಯುಕ್ಕುವ ಕಣ್ಣು, ಗದ್ಗದಿತ ಮಾತುಗಳು ಇವೆಲ್ಲವೂ ಗಮನೀಯವಾಗುತ್ತವೆ.
ಅದೆಷ್ಟೋ ಜನರು ತಮ್ಮ ಗುರುಗಳಿಂದಾಗಿ ನಾವು ಉತ್ತಮ ಸ್ಥಾನವನ್ನು ಪಡೆಯಲು ಸಾಧ್ಯವಾಗಿದೆಯೆಂಬುದನ್ನು ಆಗಾಗ ನೆನಪಿಸಿ ಮಾತನಾಡುತ್ತಾರೆ. ತಮ್ಮ ಅಧ್ಯಾಪಕರನ್ನು ಮರೆಯಲಾಗದ ಹಾಗೂ ಮರೆಯಬಾರದ ಪ್ರಭಾವ ಅವರಲ್ಲಿ ಬೇರು ಬಿಟ್ಟಿರುತ್ತದೆ. ಕೆಲವರು ಹೀಗೂ ಹೇಳುತ್ತಾರೆ, ನಮ್ಮ ಮಾಸ್ಟ್ಟರು ಒಂದೆರಡು ಪೆಟ್ಟು ಕೊಟ್ಟದ್ದರಿಂದ ನಾನು ಇವತ್ತು ಸರಿಯಾಗಿದ್ದೇನೆ. ಎಂದು. ಅವರಿಗೆ ಪೆಟ್ಟು ಕಹಿಯಾಗದೇ ಸಿಹಿಯಾಯಿತೆಂದಾದರೆ ವಿಶೇಷ ಕಾರಣವಿದೆ. ಪೆಟ್ಟಿನ ಜೊತೆಗೆ ತಮ್ಮ ಶಿಕ್ಷಕರು ನೀಡಿದ ತಾಯಿಯ ಪ್ರೀತಿಗಿಂತಲೂ ಮಿಗಿಲಾದ ಪ್ರೀತಿಯನ್ನು ಮಕ್ಕಳನುಭವಿಸಿರುವುದೇ ಪ್ರಬಲ ಕಾರಣವಾಗಿರುತ್ತದೆ.
ನಮ್ಮ ಟೀಚರ್ ನಮ್ಮನ್ನೆಷ್ಟು ಕುಣಿಸುತ್ತಿದ್ದರು! ಆಟ ಆಡಿಸುತ್ತಿದ್ದರು! ಆ ಮಾಸ್ಟ್ಟರು ಹೇಳುತ್ತಿದ್ದ ಕಥಾ ಶೈಲಿ ಇನ್ನೂ ಕಣ್ಣ ಮುಂದೆ ಕಟ್ಟಿ ನಿಲ್ಲುತ್ತದೆ. ನಮ್ಮ ಮುಖ್ಯೋಪಾಧ್ಯಾಯರು ನಮ್ಮನ್ನು ಎಷ್ಟೋ ಸ್ಥಳಗಳಿಗೆ ಪ್ರವಾಸ ಒಯ್ದು ನೀಡಿದ ಸಂತೋಷದ ಕ್ಷಣಗಳನ್ನು ಮರೆಯಲಾರೆವು, ನಮ್ಮ ಸ್ಕೂಲ್‌ಡೇಯಂದು ಪ್ರದರ್ಶಿಸಿದ ನಾಟಕದಲ್ಲಿ ನನ್ನ ಪಾತ್ರಕ್ಕೆ ಜೀವ ತುಂಬಿದ ಆ ಮಾಸ್ಟ್ರನ್ನು ಈಗಲೂ ನೆನಪಿಸುತ್ತೇನೆ, ನಾವು ಕ್ರೀಡೆ ಮತ್ತು ಆಟಗಳಲ್ಲಿ ಮಿಂಚಲು ನಮ್ಮ ಪಿ.ಇ.ಟಿ.ಯವರೇ ಕಾರಣ, ನಾನು ಮಾಡಿದ ಚಿತ್ರ ಪತ್ರಿಕೆಯಲ್ಲಿ ಬಂದಾಗ ಆ ಚಿತ್ರ ಬಿಡಿಸಲು ಕಾರಣರಾದ ಡ್ರಾಯಿಂಗ್ ಮಾಸ್ಟ್ರು ನೆನಪಿಗೆ ಬರುತ್ತಾರೆ, ನಾನು ಬರೆದ ಕಥೆಗೆ ಬಹುಮಾನ ಬಂದಾಗ ನಾನೂ ನಮ್ಮ ಭಾಷಾ ಶಿಕ್ಷಕರನ್ನು ನೆನಪಿಸಿ ಕಣ್ಣೀರು ತುಂಬಿಕೊಂಡೆ- ಇಂತಹ ಭಾವನಾತ್ಮಕ ಮಾತುಗಳನ್ನು ಆಲಿಸುತ್ತಿದ್ದಂತೆ ಎಲ್ಲರ ಕಾಣ್ಣಾಲಿಗಳೂ ಮಂಜಿನಂತೆ ಮಬ್ಬಾಗುತ್ತವೆ.
ಸರಕಾರಿ ಶಾಲೆಗಳ ಶಿಕ್ಷಕರಿಗೆ ವರ್ಗಾವಣೆಗಳಿರುತ್ತವೆ. ಭಡ್ತಿಯಿಂದಾಗುವ ವರ್ಗಾವಣೆಗಳಾಗಿರಲಿ, ಅಥವಾ ಸ್ಥಳ ಪಲ್ಲಟದ ವರ್ಗಾವಣೆಗಳಾಗಿರಲಿ ಬಹಳ ಬೇಗನೆ ಬೇಗುದಿಗೊಳಗಾಗುವವರು ವಿದ್ಯಾರ್ಥಿಗಳು. ಭಾವನೆ ಆಪ್ತವಾದಂತೆ ಮಾತು ಹೊರಳದು. ಮಕ್ಕಳೂ ಆ ಅಧ್ಯಾಪಕ ಅಥವಾ ಅಧ್ಯಾಪಕಿಯರನ್ನು ಬೀಳ್ಕೊಡುವಾಗ ಗದ್ಗತಿತರಾಗಿ ಬಾಯಿಯಲ್ಲಿ ಮಾತು ಉರುಳದೆ ಅತ್ತು ಬಿಡುತ್ತಾರೆ, ಅವರು ಹೋದ ನಂತರವೂ ಅದಷ್ಟೋ ಬಾರಿ ಆ ಶಿಕ್ಷಕರನ್ನು ನೆನಪಿಸುತ್ತಲೇ ಇರುತ್ತಾರೆ. ಪತ್ರವ್ಯವಹಾರಗಳು, ದೂರವಾಣಿ ಸಂಭಾಷಣೆಗಳು ಬಹಳ ದೀರ್ಘ ಕಾಲ ನಡೆಯುತ್ತಿರುತ್ತವೆ. ಇವುಗಳಿಗೆಲ್ಲ ಕಾರಣ ವಿದ್ಯಾರ್ಥಿಗಳು ಅವರ ಅಧ್ಯಾಪಕರಿಗಾಗಿ ತಮ್ಮ ಮನಸ್ಸಿನೊಳಗೆ ಕಲ್ಪಿಸಿರುವ ಅತೀ ಉನ್ನತವಾದ ಪೂಜನೀಯ ಸ್ಥಾನವಾಗಿರುತ್ತದೆ.
ವಿದ್ಯಾರ್ಥಿಗಳಲ್ಲಿ ಅವರಿಗೆ ಕಲಿಸಿದ ಅಧ್ಯಾಪಕರ ಬಗ್ಗೆ ಏನಾದರೂ ಪ್ರಶ್ನೆ ಕೇಳಿದರೆ ಯಾವುದೇ ವಿದ್ಯಾರ್ಥಿಯೂ ಅಧ್ಯಾಪಕರನ್ನು ಹೀಗಳೆದು ಅನಿಸಿಕೆ ಹೇಳುವುದಿಲ್ಲ, ಎಂದರೆ ಅವರಲ್ಲಿ ಕಹಿ ಅನುಭವಗಳು ಉಳಿದಿರುವುದಿಲ್ಲ. ಒಂದೊಮ್ಮೆ ಇದ್ದರೂ ಅವೆಲ್ಲವೂ ಅಧ್ಯಾಪಕರು ನೀಡಿದ ಪ್ರೀತಿಯಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಿರುತ್ತವೆ.
ಅನೇಕ ವಿದ್ಯಾರ್ಥಿಗಳಿಂದ ನಾನು ಕೇಳಿ ತಿಳಿಯಲೆತ್ನಿಸಿದಾಗ ಅವರೆಲ್ಲರೂ ನೀಡಿದ ಅಭಿಪ್ರಾಯಗಳನ್ನು ತಮಗೆ ಉಣಿಸದಿದ್ದರೆ ಸಮಂಜಸವಾಗದು.
ನಮ್ಮ ಟೀಚರಿಗೆ, ಮಾಸ್ಟ್ರಿಗೆ ನಾನೆಂದರೆ ಬಹಳ ಪ್ರೀತಿ
ನಮ್ಮ ಮುಖ್ಯೋಪಾಧ್ಯಾಯರು ಬಹಳ ಸ್ಟ್ರಿಕ್ಟ್. ಆದರೆ ಅವರೇ ನನಗೆ ಮಾದರಿ ನಾಯಕ
ಅವರ ಪಾಠ ಬಹಳ ರುಚಿ, ಕೇಳಲು ಇಂಪು, ಅರ್ಥವಾಗುವಂತೆ ಇದೆ.
ನಾವು ಮೇಲೇರ ಬೇಕು ಎಂಬುದು ನಮ್ಮ ಅಧ್ಯಾಪಕರ ಆಸೆ
ನಾನು ಕಲಿಸಿದವರು ಸೋಲಬಾರದು ಎಂದು ಬಯಸುತ್ತಾರೆ
ನನ್ನ ಅಕ್ಷರ ಚಂದವಾಗಿರ ಬೇಕೆಂಬುದು ಅವರ ಆಸೆ
ನಾನು ತಪ್ಪು ಬರೆದರೆ ಅವರು ಬೇಸರಿಸುವರು
ಅವರು ತಂದ ತಿಂಡಿ ನಮಗೂ ಕೊಡುತ್ತಾರೆ
ನನ್ನನ್ನು ಮನೆಗೆ ಊಟಕ್ಕೆ ಕರೆದಿದ್ದಾರೆ, ನನಗೆ ಹೋಗಲು ಆಗಲಿಲ್ಲವಲ್ಲ ಎಂದು ಬೇಸರವಾಯಿತು.
ಅವರು ಬಹಳ ಸರಳ ಸ್ವಭಾವದವರು
ಅವರ ಮನಸ್ಸು ಬೆಣ್ಣೆಯ ಹಾಗೆ
ನೋಡುವಾಗ ಭಯ ಆಗ್ತದೆ ಆದರೆ ನಿಜವಾಗಿಯೂ ಸಾಧು
ನಾನು ಮಾರ್ಗದ ಬದಿಯಲ್ಲಿ ಹೋಗುತ್ತಿದ್ದಾಗ ಕೆಸರು ರಟ್ಟಿತು. ಆಗ ಎರಡನೇಯಲ್ಲಿದ್ದೆ. ನನ್ನನ್ನವರು ಸ್ನಾನ ಮಾಡಿಸಿದ್ದಾರೆ
ಮಳೆಯಿಂದ ಒದ್ದೆಯಾದ ತಲೆಯನ್ನು ಅವರು ಬಟ್ಟೆಯಿಂದ ಒರೆಸುತ್ತಿದ್ದರು.
ಬರೆಯುವ ಪೆನ್ಸಿಲು ಚೂಪು ಮಾಡಿ ಕೊಡುತ್ತಿದ್ದರು, ಪೆನ್ನು, ಕಡ್ಡಿ, ಪುಸ್ತಕ ಕೊಡುತ್ತಿದ್ದರು. ಹೀಗೆ ಅವರ ನೆನಪಿನಂಗಳಗಳು ತೆರೆಯುತ್ತವೆ
ಮಕ್ಕಳ ಮನಸ್ಸು ಶಿಕ್ಷಕರ ಪರವಾಗಿಯೇ ಇದೆ. ತಮ್ಮ ಶಿಕ್ಷಕರು ನೀಡಿದ ಮಾಹಿತಿಯೇ ನಿತ್ಯ ಸತ್ಯ. ಬೇರೆಯವರು ನೀಡುವ ಯಾವುದೇ ಮಾಹಿತಿಗಳನ್ನು ನಮ್ಮ ಮಕ್ಕಳು ಸ್ವೀಕರಿಸುವುದೇ ಇಲ್ಲ. ಮಕ್ಕಳಿಗೆ ಶಿಕ್ಷಕರಲ್ಲಿ ಅಷ್ಟೊಂದು ವಿಶ್ವಾಸ. ಮಕ್ಕಳ ಮನದೊಳಗೆ ಶಾಶ್ವತ ಅಭಿಮಾನದ ಸ್ಥಾನಾಂಕಿತರು ಆಧ್ಯಾಪಕರು. ಮಕ್ಕಳು ನೀಡುವ ಪೂಜನೀಯ ಸ್ಥಾನಕ್ಕೆ ಸಂವಾದಿಯಾಗಿ ಶಿಕ್ಷಕರೂ ನಿರಂತರವಾಗಿ ತಮ್ಮ ಹೊಣೆಗಾರಿಕೆಗಳಿಂದ ಜಾರುವಂತಿಲ್ಲ. ಮಕ್ಕಳ ಗೌರವದ ಭಾವನೆಗಳಗೆ ಧಕ್ಕೆಯಾಗದ ರೀತಿಯಲ್ಲಿ ನಮ್ಮ ಶಿಕ್ಷಕರ ತ್ಯಾಗ ಮಕ್ಕಳಿಗಾಗಿ ಮುಡಿಪಾಗಿರಲಿ.

More articles

Latest article