


ಬಂಟ್ವಾಳ: ಋಣ ಮುಕ್ತಕ್ಕಾಗಿ ಹೋರಾಟ ಸಮಿತಿ ಕರ್ನಾಟಕ ಸಿ.ಐ.ಟಿ.ಯು ಬಂಟ್ವಾಳ ತಾಲ್ಲೂಕು ಸಮಿತಿ, ಮತ್ತು ಜನವಾದಿ ಮಹಿಳಾ ಸಂಘಟನೆ (ಜೆ.ಎಂ.ಎಸ್.) ಜಂಟಿಯಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆ ಮಹಿಳೆಯರಿಗೆ ಕಿರುಕುಳ ನೀಡುವ ವಿರುದ್ಧ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಲು ಮತ್ತು ಇತರೆ ಬೇಡಿಕೆ ಈಡೇರಿಸಲು ಒತ್ತಾಯಿಸಿ ಇಂದು ಬಿ.ಸಿ.ರೋಡ್ ನ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆಯನ್ನು ನಡೆಸಿ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿಯನ್ನು ನೀಡಲಾಯಿತು.
ಪ್ರತಿಭಟನೆಯನ್ನುದ್ದೇಶಿ ಮಾತನಾಡಿದ ಸಿಐಟಿಯು ನ ರಾಮಣ್ಣ ವಿಟ್ಲ ಬಂಟ್ವಾಳ ತಾಲೂಕಿನ ಹಾಗೂ ಜಿಲ್ಲೆಯ ಇತರ ಕೆಲವು ತಾಲೂಕುಗಳ ಗ್ರಾಮ ಗ್ರಾಮಗಳಲ್ಲಿ ಖಾಸಗಿ ಫೈನಾನ್ಸ್ಗಳಾದ ಎಲ್ ಟಿ, ಮುತ್ತೂಟ್ , ಎಸ್.ಕೆ.ಎಸ್, ಸಮಸ್ತ, ಗ್ರಾಮೀಣ ಕೂಟ , ಸ್ಪಂದನ ಸ್ಪೂರ್ತಿ, ಆಶೀರ್ವಾದ , ಭಾರತ್ ಆಕ್ಸಿಸ್ ಮೊದಲಾದ ಹಲವು ಖಾಸಗಿ ಫೈನಾನ್ಸ್ಗಳಿಂದ ಹಳ್ಳಿಯ ಮನೆ ಮನೆಗಳಿಗೆ ತೆರಳಿ ಬಡ ಮಹಿಳೆಯರನ್ನೇ ಗುರಿಯಾಗಿ ಇಟ್ಟುಕೊಂಡು ದುಬಾರಿ ಬಡ್ಡಿಯಲ್ಲಿ ಸಾಲ ನೀಡುತ್ತಾ ಬಡ ಜನರನ್ನು ಸುಲಿಗೆ ಮಾಡುತ್ತಾರೆ. ಶ್ರೀಮಂತ ವ್ಯಕ್ತಿಗಳ ಭ್ರಷ್ಟಾಚಾರದ ಮೂಲಕ ಗಳಿಸಿದ ಹಣವನ್ನು ಬಡ ಮಹಿಳೆಯರಿಗೆ ದುಬಾರಿ ಬಡ್ಡಿ ವಿಧಿಸಿ ಸಾಲ ನೀಡಿ ನಂತರ ಪ್ರತಿವಾರ ಅವರಿಂದ ಬಲತ್ಕಾರದ ವಸೂಲಿ ನಡೆಸುತ್ತದೆ. ಸಾಲ ವಸೂಲಿಗಾರರು ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಸಾಲ ಪಡೆದು ಸಾಲದ ಮೂರು ಪಟ್ಟು ಹಣ ಕಟ್ಟಿದರೂ ಸಾಲ ಭಾದೆ ಮುಗಿಯುವುದಿಲ್ಲ.
ಈ ಹಣಕಾಸು ಸಂಸ್ಥೆಗಳು ಅವರ ಮಿತಿಯನ್ನು ಮಿರಿ ಕೆಲಸ ಮಾಡುತ್ತಾರೆ. ಅವರ ಪ್ರರ್ವತ್ತಿಗಳು ಕಾನೂನು ಬಾಹಿರವಾಗಿದ್ದರೂ ಅವರನ್ನು ಯಾರೂ ಕೇಳುವವರೇ ಇಲ್ಲವಾಗಿದೆ. ಇವರ ವಿರುದ್ಧ ಆಡಳಿತ ವ್ಯವಸ್ತೆ ಸಂಪೂರ್ಣ ನಿಷ್ಕ್ರೀಯವಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತದಿಂದ, ಪ್ರಕೃತಿ ವಿಕೋಪದಿಂದ ಬೀಡಿ ಉದ್ಯಮದ ಕುಂಟಿತದಿಂದ ಬಡ ಗ್ರಾಮೀಣ ಮಹಿಳೆಯರಿಗೆ ಕೆಲಸವೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ಅವರ ಮೇಲೆ ಈ ಮೈಕ್ರೋ/ ಫೈನಾನ್ಸ್ಗಳ ಹಾಗೂ ಇತರ ಫೈನಾನ್ಸ್ಗಳ ಸಾಲ ವಸೂಲಿಗಾರರು ದೌರ್ಜನ್ಯ ನಡೆಸುತ್ತಾರೆ .ಇವರ ವರ್ತನೆ ಮಿತಿ ಮೀರಿದೆ. ಅವರು ಬಡ ಮಹಿಳೆಯರಿಗೆ ಜೀವ ಬೆದರಿಕೆ ಉಂಟು ಮಾಡಿ ಜೀವಕ್ಕೆ ಅಪಾಯ ತರುವ ರೀತಿಯಲ್ಲಿ ವರ್ತಿಸುತ್ತಾರೆ. ಮಹಿಳೆಯರು ಹೆದರಿ ಮನೆ ಬಿಡುವ ದುಸ್ತಿಗೆ ಈ ಫೈನಾನ್ಸ್ ಮಾಲಕರು ಕಾರಣರಾಗುತ್ತಾರೆ.
ಸಮಿತಿಯ ರಾಜ್ಯ ಕಾರ್ಯದರ್ಶಿ ಶಿವಕುಮಾರ್ ನ್ಯಾಯವಾದಿ , ಜನವಾದಿ ಮಹಿಳಾ ಸಂಘಟನೆಯ ಜಯಂತಿ ಶೆಟ್ಟಿ , ಶೋಭಾ ಕೊಲ, ಶೇಖರ ಲಾಯಿಲ , ಪ್ರತಿಭಟನೆಯ ನೇತೃತ್ವವನ್ನು ಮಹಮ್ಮದ್ ಅಲ್ತಾಫ್ ತುಂಬೆ, ಶ್ರೀನಿವಾಸ ಪೂಜಾರಿ , ರಮಣಿ ನಾಟೆಕಲ್ಲು, ಹೊನ್ನಮ್ಮ , ಪೂಜಾ, ಲೋಲಾಕ್ಷಿ ಬಂಟ್ವಾಳ, ರಹಮತ್ ರಝೀಯಾ ಕಂಬಳಬೆಟ್ಟು ಮೊದಲಾದವರು ವಹಿಸಿದ್ದರು. ಮಹಮ್ಮದ್ ಇಕ್ಬಾಲ್ ಹಳೇಮನೆ ಧನ್ಯವಾದ ಸಲ್ಲಿಸಿದರು.
ಬೇಡಿಕೆಗಳು:-
೧. ಮೈಕ್ರೋ ಫೈನಾನ್ಸ್ಗಳು ಹಾಗೂ ಖಾಸಗಿ ಫೈನಾನ್ಸ್ಗಳು ಕಾನೂನು ಬಾಹಿರವಾಗಿ ನೀಡಿದ ಸಾಲವನ್ನು ಸಂಪೂರ್ಣ ಮನ್ನ ಮಾಡಬೇಕು.
೨. ಬಡ ಮಹಿಳೆಯರ ಮನೆ ಮನೆಗೆ ಬಂದು ದುಬಾರಿ ಬಡ್ಡಿ ವಿಧಿಸಿ ಸಾಲ ನೀಡಿ ಇದೀಗ ದೌರ್ಜನ್ಯವೆಸಗುವ ಹಣಕಾಸು ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
೩. ಈ ಹಣಕಾಸು ಸಂಸ್ಥೆಗಳ ಬಲತ್ಕಾರದ ಸಾಲ ವಸೂಲಿ, ಬೈಗುಳ, ಬೆದರಿಕೆಗಳನ್ನು ತಡೆಯಬೇಕು, ಹಾಗೂ ಮನೆಗೆ ಬಂದು ಸಾಲ ವಸೂಲಿ ಪದ್ದತಿಯನ್ನು ನಿಲ್ಲಿಸಬೇಕು.
೪. ರಾಷ್ಟ್ರೀಕೃತ ಬ್ಯಾಂಕುಗಳಿಂದ ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಆಧಾರ್ಕಾರ್ಡಿನ ಆಧಾರದಲ್ಲಿ ಸಾಲ ನೀಡಬೇಕು.
೫. ಮೈಕ್ರೋ ಪೈನಾನ್ಸ್ಗಳ (ಹಣಕಾಸು ಸಂಸ್ಥೆಗಳು) ಸಾಲ ವಸೂಲಾತಿ ಗೂಂಡಾಗಳಿಂದ ರಕ್ಷಣೆ ನೀಡಬೇಕು.





