ಬಂಟ್ವಾಳ: ಸಾಕಷ್ಟು ಕಡೆ ಗುಡ್ಡ ಕುಸಿತದ ಘಟನೆಗಳು ನಡೆದು ಜೀವ ಹಾನಿ, ಆಸ್ತಿಪಾಸ್ತಿ ಹಾನಿಯ ಘಟನೆಗಳು ನಮ್ಮ ಕಣ್ಣ ಮುಂದಿದೆ. ಕೆಲವೊಂದಕ್ಕೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೇ ಹಾಗಾಗುತ್ತದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯ ಗೂಡಿನಬಳಿಯಲ್ಲೂ ಇಂತಹ ಗುಡ್ಡವೊಂದು ಅಪಾಯದ ಸ್ಥಿತಿಯಲ್ಲಿದ್ದು, ಸಂಬಂಧಪಟ್ಟವರು ಈಗಲೇ ಎಚ್ಚೆತ್ತುಕೊಳ್ಳಬೇಕಿದೆ.

ಗೂಡಿನಬಳಿಯ ಈ ಪ್ರದೇಶದಲ್ಲಿ ಗುಡ್ಡ ಕುಸಿತ ಉಂಟಾದಲ್ಲಿ ಸ್ಥಳೀಯ ಮನೆಗಳಿಗೆ ಹಾನಿಯಾಗುವ ಜತೆಗೆ ರಸ್ತೆ ಸಂಪರ್ಕವೂ ಕಡಿತಗೊಳ್ಳುತ್ತದೆ. ಜತೆಗೆ ಪುರಸಭೆ ಹಲವು ವಾರ್ಡ್ ಗಳ ನೂರಾರು ಮನೆಗಳಿಗೆ ನೀರಿನ ಸಂಪರ್ಕವೂ ಕಡಿತಗೊಳ್ಳುತ್ತದೆ. ಹೀಗಾಗಿ ಅಪಾಯ ಸಂಭವಿಸುವ ಮೊದಲು ಬೃಹತ್ ತಡೆಗೋಡೆ ನಿರ್ಮಾಣದ ಅಗತ್ಯವಿದೆ.

ಗುರುಪುರ ಘಟನೆ ನೆನಪು.!

ಗೂಡಿನಬಳಿಯ ಅಪಾಯದ ಸ್ಥಿತಿ ಕಳೆದ ಮಳೆಗಾಲದಲ್ಲಿ ಗುರುಪುರ ಮಠದಗುಡ್ಡೆ (ಬಂಗ್ಲೆಗುಡ್ಡೆ) ಯಲ್ಲಿ ನಡೆದ ಘಟನೆಯನ್ನು ನೆನಪಿಸುತ್ತದೆ. ಗೂಡಿನಬಳಿಯ ಪ್ರದೇಶವೂ ಅದೇ ರೀತಿಯ ಜನ ವಸತಿಯ ಪ್ರದೇಶವಾಗಿದ್ದು, ಗುಡ್ಡದ ತಳಭಾಗದಲ್ಲಿ ಹತ್ತಾರು ಮನೆಗಳಿವೆ.

ಗುಡ್ಡೆ ಕುಸಿತ: ಗೋಣಿಚೀಲ ಪರಿಹಾರ

ಗೂಡಿನಬಳಿಯಿಂದ ಎತ್ತರ ಪ್ರದೇಶದಲ್ಲಿರುವ ಮನೆಗಳು ಹಾಗೂ ಟ್ಯಾಂಕ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯ ಬದಿಯಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ಪಕ್ಕದಲ್ಲೇ ಹತ್ತಾರು ಮನೆಗಳಿದ್ದು, ಒಂದು ವೇಳೆ ಈ ಗುಡ್ಡ ಕುಸಿದಲ್ಲಿ ಹತ್ತಾರು ಮನೆಗಳಿಗೆ ಹಾನಿಯಾಗಲಿದೆ. ಕಳೆದ ಕೆಲ ತಿಂಗಳ ಹಿಂದೆ ಇಲ್ಲಿ ಗುಡ್ಡ ಕುಸಿತ ಉಂಟಾದಾಗ ತಹಶೀಲ್ದಾರ್ ಸೂಚನೆಯಂತೆ ಎಂಜಿನಿಯರ್ ಪರಿಶೀಲನೆ ನಡೆಸಿ ಮರಳು ತುಂಬಿದ ಗೋಣಿ ಚೀಲಗಳನ್ನು ಇಡಲಾಗಿತ್ತು. ಸಾವಿರಾರು ಗೋಣಿಗಳನ್ನು ಒಂದರ ಮೇಲೊಂದರಂತೆ ಇಡಲಾಗಿದ್ದು, ಆದರೆ ಇದೀಗ ಬಿಸಿಲಿನ ತೀವ್ರತೆಗೆ ಗೋಣಿಗಳು ಹರಿದು ಮರಳು ಕೆಳಗೆ ಬೀಳುತ್ತಿದೆ.

ಒಂದು ವೇಳೆ ಜೋರಾಗಿ ಮಳೆ ಬಂದು ನೀರು ಒಳ ನುಗ್ಗಿದರೆ ಗೋಣಿ ಚೀಲಗಳು ಕೂಡ ಕೆಳಗೆ ಬೀಳು ಸ್ಥಿತಿ ಇದೆ. ರಸ್ತೆಗೆ ತಾಗಿಕೊಂಡೇ ಗುಡ್ಡ ಕುಸಿದಿದ್ದು, ಇನ್ನು ಸ್ಪಲ್ಪ ಕುಸಿದರೂ, ಈ ಭಾಗಕ್ಕೆ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ. ಇಲ್ಲಿ ಎರಡು ಕಡೆಗಳಲ್ಲಿ ಗುಡ್ಡ ಕುಸಿದಿದ್ದು, ಎರಡೂ ಕಡೆಯೂ ಗೋಣಿ ಚೀಲಗಳನ್ನು ಇಡಲಾಗಿದೆ.

ಬೃಹತ್ ಟ್ಯಾಂಕ್‌ಗೆ ನೀರು

ಗೂಡಿನಬಳಿಯಲ್ಲಿ ಗುಡ್ಡದ ಮೇಲ್ಭಾಗದಲ್ಲಿ ಪುರಸಭೆಯ ಹಲವು ವಾರ್ಡ್ ಗಳಿಗೆ ನೀರು ಪೂರೈಕೆ ಮಾಡುವ ಟ್ಯಾಂಕ್ ಇದ್ದು, ಟ್ಯಾಂಕ್‌ಗೆ ನೀರು ಪೂರೈಕೆ ಮಾಡುವ ಪೈಪ್ ಹಾಗೂ ಅದರಿಂದ ನೀರು ಪೂರೈಕೆಯಾಗುವ ಟ್ಯಾಂಕ್ ಇದೇ ರಸ್ತೆಯ ತಳಭಾಗದಲ್ಲಿದೆ. ಹೀಗಾಗಿ ಗುಡ್ಡ ಕುಸಿಯುವ ವೇಳೆ ಪೈಪ್‌ಲೈನ್ ಸಂಪರ್ಕ ಕಡಿತಗೊಂಡರೆ ಲಕ್ಷಾಂತರ ರೂಪಾಯಿ ನಷ್ಟವಾಗಲಿದೆ. ಜತೆಗೆ ಹಲವು ತಿಂಗಳುಗಳ ಕಾಲ ನೀರು ಪೂರೈಕೆಗೂ ತೊಂದರೆ ಎದುರಾಗಲಿದೆ.

ಪರಿಶೀಲನೆಗೆ ಬಂದಿದೆ

ದ.ಕ.ಜಿಲ್ಲಾಧಿಕಾರಿಗಳಿಂದ ಪರಿಶೀಲನೆಗೆ ಪುರಸಭೆಗೆ ಬಂದಿದೆ. ಅದಕ್ಕೆ ತಡೆಗೋಡೆ ಅಗತ್ಯವಾಗಿದ್ದು, ಹೆಚ್ಚಿನ ಅನುದಾನ ಬೇಕಾಗುತ್ತದೆ. ಆದರೆ ಪುರಸಭೆಯ ಅನುದಾನದಿಂದ ಅದು ಅಸಾಧ್ಯವಾಗಿದ್ದು, ಹೀಗಾಗಿ ಶಾಸಕರ ಮೂಲಕ ಸರಕಾರದಿಂದ ಅನುದಾನಕ್ಕಾಗಿ ಮನವಿ ಮಾಡಲಾಗುವುದು. ಸಾಮಾನ್ಯ ತಡೆಗೋಡೆಗಿಂತಲೂ ಹೆಚ್ಚು ಸ್ಟ್ರಾಂಗ್ ಇರುವ ತಡೆಗೋಡೆ ಬೇಕಾಗುತ್ತದೆ.

ಮಹಮ್ಮದ್ ಶರೀಫ್

ಅಧ್ಯಕ್ಷರು, ಪುರಸಭೆ, ಬಂಟ್ವಾಳ.

 

ಎಲ್ಲರೂ ಸೇರಿದರೆ ಪರಿಹಾರ: 

ಈ ಕುರಿತು ಸಾಕಷ್ಟು ಬಾರಿ ಸಂಬಂಧಪಟ್ಟವರಿಗೆ ದೂರು ನೀಡಿದ್ದೇವೆ. ತಹಶೀಲ್ದಾರ್ ಅವರನ್ನೂ ಭೇಟಿಯಾಗಿದ್ದೇವೆ. ಪ್ರಾರಂಭದಲ್ಲಿ ಎಂಜಿನಿಯರ್ ಪರಿಶೀಲನೆ ನಡೆಸಿ ಗೋಣಿ ಚೀಲ ಇಟ್ಟಿದ್ದಾರೆ. ಆದರೆ ಅದು ಶಾಶ್ವತ ಪರಿಹಾರವಲ್ಲಿ. ಹೀಗಾಗಿ ಪುರಸಭೆ, ತಹಶೀಲ್ದಾರ್, ಶಾಸಕರ ಸಹಕಾರದಿಂದ ಈ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದು.

ಜೀನತ್ ಫಿರೋಜ್

ಸ್ಥಳೀಯ ಸದಸ್ಯರು, ಪುರಸಭೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here