ವಿಟ್ಲ : ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೋತ್ಸವ ಗುರುವಾರದಂದು ಧ್ವಜಾರೋಹಣದೊಂದಿಗೆ ಆರಂಭಗೊಂಡಿತು. ನಾನಾ ವೈದಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡವು. ಸೀಮೆ ಹಾಗೂ ಪರವೂರುಗಳ ಸಹಸ್ರಾರು ಮಂದಿ ಭಕ್ತರು ದೇವರ ಜಾತ್ರೆಯ ಕೊಡಿ ಏರುವ ಸಂದರ್ಭದಲ್ಲಿ ಭಾಗವಹಿಸಿದ್ದರು. ಧ್ವಜಾರೋಹಣದ ಬಳಿಕ ದೇವಸ್ಥಾನದ ವಠಾರದಲ್ಲಿ ಅನ್ನ ಸಂತರ್ಪಣೆ ನಡೆಯಿತು.
ದೇಗುಲದ ಅನುವಂಶಿಕ ಆಡಳಿತ ಪ್ರತಿನಿಧಿ ಬಂಗಾರು ಅರಸರು, ತಂತ್ರಿಗಳು, ಅರ್ಚಕ ವೃಂದ, ಸೀಮೆಯ ಗುರಿಕ್ಕಾರರು, ಆಡಳಿತ ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಭಾಗವಹಿಸಿದ್ದರು. ಶ್ರೀ ಕ್ಷೇತ್ರದಲ್ಲಿ ಸೂರ್‍ಯೋದಯದಿಂದ ಸೂರ್‍ಯಸ್ತದವರೆಗೆ ಅರ್ಧ ಏಕಾಹ ಭಜನೆ ನಡೆಯಿತು.
ಗುರುವಾರ ಸಂಜೆ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ವಿಟ್ಲ ಶ್ರೀದೇವತಾ ಸಮಿತಿಯ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಕೇಪು ಶ್ರೀ ಮಲರಾಯ ದೈವದ ಭಂಡಾರಕ್ಕೆ ಸಮರ್ಪಿಸುವ ನೂತನ ’ಪಲ್ಲಕ್ಕಿ’ ಯನ್ನು ಹಸಿರುವಾಣಿ ಹೊರೆಕಾಣಿಕೆ, ಭಜನೆ ಉಲ್ಪೆ ಮೆರವಣಿಗೆಯೊಂದಿಗೆ ದೇಗುಲಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ದೇವರ ಪರಿವಾರ ದೈವ ಶ್ರೀ ಮುಂಡಲತ್ತಾಯ ದೈವಕ್ಕೆ ನೂತನವಾಗಿ ದೈವಸ್ಥಾನ ನಿರ್ಮಾಣವಾಗಿದ್ದು ಇದರ ಭಂಡಾರ ದೇವಾಲಯಕ್ಕೆ ಆಗಮಿಸಿತು.
ಭಜನಾ ಮಂಗಳೋತ್ಸವ ನಡೆದ ಬಳಿಕ ಶ್ರೀ ಕ್ಷೇತ್ರದಲ್ಲಿ ವಿಶೇಷ ಲಕ್ಷ ದೀಪೋತ್ಸವ ನಡೆಯಿತು.

 

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here