ನಾವು ದಿನನಿತ್ಯ ಸೇವಿಸುವ ಆಹಾರ ಯಾವ ರೀತಿ ಇರಬೇಕು, ಏನೆಲ್ಲಾ ತಿನ್ನಬೇಕು, ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬುದರ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ವೈಜ್ಞಾನಿಕವಾಗಿ ನೀಡುವ ಆಹಾರದ ಮಾರ್ಗದರ್ಶಿ ಸೂತ್ರವನ್ನು ಫುಡ್ ಪಿರಮಿಡ್ ಎಂದು ಕರೆಯಲಾಗುತ್ತದೆ. ಮೊದಲ ಫುಡ್ ಪಿರಮಿಡ್ 1974 ರಲ್ಲಿ ಸ್ವೀಡನ್ ದೇಶದಲ್ಲಿ ಆರಂಭಿಸಲಾಯಿತು. 1992ರಲ್ಲಿ ಅಮೇರಿಕಾದಲ್ಲಿ ಪರಿಷ್ಕರಿಸಿದ ಫುಡ್ ಪಿರಮಿಡ್‌ನ್ನು ಆಹಾರ ಸಂಶೋಧನಾ ತಂಡದ ಆಹಾರ ತಜ್ಞರು ತಯಾರಿಸಿ ಅದಕ್ಕೆ ಫುಡ್‌ಗೈಡ್ ಪಿರಮಿಡ್ ಎಂದು ಮರು ನಾಮಕರಣ ಮಾಡಿದರು. 2005ರ ಮಗದೊಮ್ಮೆ ಪರಿಷ್ಕರಿಸಿ ನನ್ನ ಪಿರಮಿಡ್ ಎಂದು ಹೆಸರಿಸಲಾಯಿತು. 2011ರಲ್ಲಿ ಇನ್ನೊಮ್ಮೆ ಪರಿಷ್ಕರಿಸಿ ಮೈ ಪ್ಲೇಟ್ ಅಥವಾ ನನ್ನ ತಟ್ಟೆ ಎಂದು ಹೊಸ ಹೆಸರನ್ನು ನೀಡಲಾಯಿತು. ಒಟ್ಟಿನಲ್ಲಿ ಫುಡ್ ಪಿರಮಿಡ್ ಎನ್ನುವುದು ಬೇರೆ ಬೇರೆ ಹೆಸರಿದ್ದರೂ ಮೂಲಭೂತವಾಗಿ ಯಾವ ವಯಸ್ಸಿಗೆ ಏನು ತಿನ್ನಬೇಕು, ಎಷ್ಟು ಪ್ರಮಾಣದಲ್ಲಿ ತಿನ್ನಬೇಕು ಮತ್ತು ಯಾಕಾಗಿ ತಿನ್ನಬೇಕು, ತಿನ್ನುವುದರಿಂದ ಉಂಟಾಗುವ ಲಾಭ ನಷ್ಟಗಳೇನು ಎಂಬುದರ ಬಗ್ಗೆ ಸಾಮಾನ್ಯ ಜನರಿಗೆ ಮಾಹಿತಿ ನೀಡಿ ಸರಿಯಾದ ಆಹಾರ ತಿನ್ನುವುದರಿಂದ ಆರೋಗ್ಯಪೂರ್ಣ ಬದುಕು ಕಟ್ಟಿಕೊಳ್ಳಬಹುದು ಎಂಬ ಸಂದೇಶವನ್ನು ಸಮಾಜಕ್ಕೆ ರವಾನಿಸುವುದರಲ್ಲಿ ಯಶಸ್ವಿಯಾಗಿದೆ ಎಂಬುದಂತೂ ಸತ್ಯವಾದ ಮಾತು. ನಮಗೆಲ್ಲಾ ತಿಳಿದಿರುವಂತೆ ಪಿರಮಿಡ್ ಎನ್ನುವುದು ಒಂದು ಸಾಂಕೇತಿಕವಾದ ಸಿಂಬಲ್ ಆಗಿರುತ್ತದೆ. ಈ ಪಿರಮಿಡ್‌ನ ತಳಭಾಗ ಬಹಳ ವಿಸ್ತಾರವಾಗಿರುತ್ತದೆ ಮೇಲೆ ಮೇಲೆ ಹೋದಂತೆ ಈ ಪಿರಮಿಡ್‌ನ ವಿಸ್ತಾರ ಕಡಿಮೆಯಾಗಿ ತುದಿ ತಲುಪಿದಾಗ ಕೇವಲ ಒಂದು ಬಿಂದುವಿನಲ್ಲಿ ಮುಕ್ತಾಯವಾಗುತ್ತದೆ. ಇದನ್ನೇ ಆಹಾರ ತಜ್ಞರು ಮತ್ತು ವಿಜ್ಞಾನಿಗಳು ನಮ್ಮ ದಿನನಿತ್ಯದ ಆಹಾರದ ಸೇವನೆಯ ಕ್ರಮಕ್ಕೆ ಅಳವಡಿಸಿ ಫುಡ್ ಪಿರಮಿಡ್ ಎಂಬ ಪರಿಕಲ್ಪನೆಯನ್ನು ಜನರಿಗೆ ಪರಿಚಯಿಸಿದ್ದಾರೆ.

ಪಿರಮಿಡ್‌ನ ತಳಭಾಗ ಅಥವಾ ಭೂಮಹಡಿ ( ಗ್ರೌಂಡ್ ಫ್ಲೋರ್)
ನಮ್ಮ ದಿನನಿತ್ಯದ ದೈನಂದಿನ ಆಹಾರದಲ್ಲಿ ಹೆಚ್ಚಿನ ಪಾಲು ಧಾನ್ಯಗಳಿರಬೇಕು. ಅದು ಅನ್ನ, ಚಪಾತಿ, ರೊಟ್ಟಿ, ಮುದ್ದೆ ಹೀಗೆ ಎಲ್ಲವೂ ಮಿಶ್ರಿತವಾಗಿರಬೇಕು. ನಮ್ಮ ದೈನಂದಿನ ಕ್ಯಾಲರಿಗಳ ಅವಶ್ಯಕತೆಗಳನ್ನು ಪೂರೈಸಲು ಬೇಕಾದ ಹೆಚ್ಚು ಪಾಲು ಕ್ಯಾಲರಿಗಳು ಇವುಗಳಿಂದ ಪೂರೈಕೆಯಾಗುತ್ತದೆ. ಈ ಧಾನ್ಯಗಳ ಪ್ರಮಾಣವನ್ನು 10 ಎಂದುಕೊಂಡಲ್ಲಿ ಇದಕ್ಕೆ ಅನುಪಾತವಾಗಿ ಉಳಿದ ಆಹಾರದ ಪ್ರಮಾಣವನ್ನು ನಿಗದಿಪಡಿಸಲಾಗುತ್ತದೆ. ಇದು ನಮ್ಮ ಆಹಾರ ಪಿರಮಿಡ್‌ನ ತಳಭಾಗದ ಅಂತಸ್ತಿನ ಎಲ್ಲರೂ ಸೇವಿಸಬೇಕಾದ ದೈನಂದಿನ ಆಹಾರದ ಬಹುಭಾಗವನ್ನು ಪ್ರತಿನಿಧಿಸುತ್ತದೆ.

ಪಿರಮಿಡ್‌ನ ಮೊದಲ ಅಂತಸ್ತಿನ, ಅತ್ಯವಶ್ಯಕ ಆಹಾರ:
ಇದನ್ನು ಆಹಾರ ಪಿರಮಿಡ್‌ನ ಫಸ್ಟ್ ಫ್ಲೋರ್ ಆಹಾರ ಎಂದೂ ಕರೆಯಲಾಗುತ್ತದೆ. ಈ ಆಹಾರದ ಹೆಚ್ಚು ಭಾಗ ತರಕಾರಿಗಳಿಂದ ಕೂಡಿರುತ್ತದೆ. ಇದರ ಪ್ರಕಾರ ಪ್ರತಿಯೊಬ್ಬರೂ ಯಥೇಚ್ಛವಾಗಿ ಹಸಿ ತರಕಾರಿ ಮತ್ತು ತರಕಾರಿಯಿಂದ ಮಾಡಿದ ಪದಾರ್ಥಗಳನ್ನು ಸೇವಿಸತಕ್ಕದ್ದು. ಹಾಗೆಂದ ಮಾತ್ರಕ್ಕೆ ಉಳಿದೆಲ್ಲಾ ಆಹಾರಗಳನ್ನು ವರ್ಜಿಸಿ ಬರೀ ತರಕಾರಿ ಮಾತ್ರ ಸೇವಿಸಬೇಕು ಎಂಬರ್ಥವಲ್ಲ. ಆಡು ಮಾತಿನಲ್ಲಿ ಹೇಳುವುದಾದರೆ ನಮ್ಮ ಆಹಾರದಲ್ಲಿ ತರಕಾರಿಗಳ ಪ್ರಮಾಣ ತಳಭಾಗದ ಪ್ರಮಾಣ 10 ಇದ್ದಲ್ಲಿ ಮೊದಲ ಅಂತಸ್ತಿನ ತರಕಾರಿಗಳ ಪಾಲು 6 ರಷ್ಟು ಇರುವುದು ಸೂಕ್ತ ಎನ್ನಲಾಗಿದೆ.

ಉಳಿದ ನಂತರದ ಸ್ಥಾನಗಳು:
ತರಕಾರಿಗಳ ಬಳಿಕದ ಸ್ಥಾನ ತಾಜಾ ಹಣ್ಣು ಹಂಪಲುಗಳಿಗೆ ಸೇರುತ್ತದೆ. ಇದರ ಪ್ರಮಾಣದ 5 ರಷ್ಟು ಇದ್ದರೆ ಉತ್ತಮ, ಆ ಬಳಿಕದ ಸ್ಥಾನವನ್ನು ಬೇಳೆಕಾಳುಗಳಿಗೆ ಸಲ್ಲುತ್ತದೆ. ಅವುಗಳ ಪ್ರಮಾಣ 4 ರಷ್ಟು ಇದ್ದರೆ ಉತ್ತಮ. ಡೈರಿ ಉತ್ಪನ್ನಗಳಾದ ಹಾಲು, ಮೊಸರು, ಮಜ್ಜಿಗೆ ಇತ್ಯಾದಿಗಳಿಗೆ ನಂತರ ಸ್ಥಾನವನ್ನು ನೀಡಲಾಗಿದೆ. ಇವುಗಳ ಪ್ರಮಾಣ 3 ಎಂದು ವ್ಯಾಖ್ಯಾನಿಸಲಾಗಿದೆ. ಆನಂತರದ ಸ್ಥಾನವನ್ನು ಮಾಂಸಾಹಾರಕ್ಕೆ ನೀಡಲಾಗಿದೆ. ಸಂಖ್ಯೆಯ ಅನುಪಾತದಲ್ಲಿ ಮಾಂಸಾಹಾರಕ್ಕೆ 2 ಎಂದು ಗುರುತಿಸಲಾಗಿದೆ. ಇದು ಇರಲೇ ಬೇಕು ಎಂದಿಲ್ಲ. ಅಗತ್ಯ ಇರುವವರ ಅಥವಾ ಬಾಯಿ ಚಪಲಕ್ಕೆ ನಾಲಗೆಯ ಹಿತಕ್ಕಾಗಿ ಸೇವಿಸುವವರು ಹಿತಮಿತವಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಆಹಾರ ತಜ್ಞರು ಅಂದಾಜಿಸಿದ್ದಾರೆ.

ಮೇಲಂತಸ್ತು:
ಆಹಾರ ಪಿರಮಿಡ್‌ನ ಮೇಲಿನ ಅಂತಸ್ತನ್ನು ಕೇವಲ ಬಿಂದುವಿನ ರೂಪದಲ್ಲಿ ವ್ಯಾಖ್ಯಾನಿಸಲಾಗಿದೆ. ಇದರ ಅರ್ಥ ಇಂತಹ ಆಹಾರಗಳನ್ನು ಸೇವಿಸುವ ಅವಶ್ಯಕತೆ ಇಲ್ಲ ಎಂಬುದಾಗಿದೆ. ಇಂತಹಾ ಆಹಾರಗಳನ್ನು ಅತೀ ಕಡಿಮೆ ಪ್ರಮಾಣದಲ್ಲಿ ಸೇವಿಸತಕ್ಕದ್ದು. ಈ ಆಹಾರ ಪದಾರ್ಥಗಳ ಪಟ್ಟಿಗೆ ಕೊಬ್ಬು ಜಾಸ್ತಿ ಇರುವ ಕರಿದ ತಿಂಡಿಗಳು, ಸಂಸ್ಕರಿಸಿದ ರಾಸಾಯನಿಕ ಮತ್ತು ಶೇಖರಿಸಬಹುದಾದ ಆಹಾರಗಳು ಐಸ್‌ಕ್ರೀಂ, ಸ್ವೀಟ್ಸ್ ಮುಂತಾದ ಆಹಾರ ಪದಾರ್ಥಗಳು ಸೇರುತ್ತದೆ. ಈ ಆಹಾರದ ಪ್ರಮಾಣವನ್ನು ತಳ ಅಂತಸ್ತಿನ ೧೦ಕ್ಕೆ ಹೋಲಿಸಿದೆ ಕೇವಲ 1 ಆಗಿರುತ್ತದೆ. ಇದರರ್ಥ ಇಂತಹಾ ಆಹಾರ ಪದಾರ್ಥಗಳನ್ನು ಅತೀ ಅನಿವಾರ್‍ಯವಾದಲ್ಲಿ ಮಾತ್ರ ಸೇವಿಸಬೇಕು. ದಿನನಿತ್ಯದ ಆಹಾರದ ಪಟ್ಟಿಯಲ್ಲಿ ಇಂತಹಾ ಆಹಾರಗಳಿಗೆ ಅವಕಾಶ ನೀಡಲೇಬಾರದು. ಈ ಆಹಾರಗಳನ್ನು ಬಾಯಿಚಪಲಕ್ಕೆ ತಿನ್ನುವ ಆಹಾರ ಎಂದು ಹೆಸರಿಸಲಾಗಿದ್ದು, ಹೊಟ್ಟೆ ತುಂಬಿಸುವ ಆಹಾರ ಅಲ್ಲ ಎಂದು ವ್ಯಾಖ್ಯಾನಿಸಲಾಗಿದೆ. ಆದರೆ ವಿಪರ್‍ಯಾಸವೆಂದರೆ ಈಗೀಗ ನಮ್ಮ ಯುವಜನರು ಆಹಾರ ಪಿರಮಿಡ್‌ನ ಮೇಲಂತಸ್ತಿನ ಆಹಾರವನ್ನು ಹೆಚ್ಚು ಸೇವಿಸಿ, ತಳ ಅಂತಸ್ತಿನ ಆಹಾರವನ್ನು ಕಡಿಮೆ ಮಾಡಿ, ದೇಹದಲ್ಲಿ ಅನಗತ್ಯ ಬೊಜ್ಜು, ಕೊಬ್ಬು ಬೆಳೆಸಿ, ದೇಹವನ್ನು ರೋಗಗಳ ಹಂದರವಾಗಿ ಮಾಡುತ್ತಿರುವುದು ವಿಪರ್‍ಯಾಸದ ಪರಮಾವಧಿ ಎಂದರೂ ತಪ್ಪಾಗಲಾರದು.

ಕೊನೆಮಾತು:
ನಾವು ತಿನ್ನುವ ಆಹಾರ ನಮ್ಮ ದೇಹದ ದೈಹಿಕ ಆರೋಗ್ಯಕ್ಕೆ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಬೇಕು. ಸಿಕ್ಕಿದ್ದೆಲ್ಲಾ ತಿನ್ನುವುದು ಬಹಳ ಅಪಾಯಕಾರಿ. ನಮ್ಮ ದೇಹಕ್ಕೆ ಎಷ್ಟು ಬೇಕು ಅಷ್ಟನ್ನು ಮಾತ್ರ ಹಿತಮಿತವಾಗಿ ಸೇವಿಸಬೇಕು. ಆಹಾರವನ್ನು ಔಷಧಿಯಂತೆ ಸೇವಿಸಬೇಕು. ಇಲ್ಲವಾದಲ್ಲಿ ಔಷಧಿಯನ್ನೇ ಆಹಾರವನ್ನಾಗಿ ಸೇವಿಸಬೇಕಾದ ಪರಿಸ್ಥಿತಿ ಬರಬಹುದು ಎಂದು ನಮ್ಮ ಹಿರಿಯರು ಯಾವತ್ತೋ ಎಚ್ಚರಿಕೆ ನೀಡಿದ್ದಾರೆ. ಆದರೆ ಬಹಳ ನೋವಿನ ವಿಚಾರ ಎಂದರೆ ನಾವು ಯಾವುದು ತಿನ್ನಬಾರದು ಅದನ್ನೇ ಜಾಸ್ತಿ ತಿನ್ನುತ್ತಿದ್ದೇವೆ. ಬರೀ ಬಾಯಿ ಚಪಲಕ್ಕಾಗಿ ನಾಲಗೆ ದಾಸರಾಗಿ ತಿನ್ನಬಾರದನ್ನೆಲ್ಲಾ ತಿಂದು ಬರಬಾರದ ರೋಗಗಳನ್ನೆಲ್ಲಾ ಬರಿಸಿಕೊಳ್ಳುತ್ತಿದ್ದಾರೆ. ನಾಳೆ ಸಾಯುತ್ತೇನೆ ಎಂದು ದುಡಿ, ನೂರು ಕಾಲ ಬದುಕುತ್ತೇನೆ ಎಂದು ತಿನ್ನು ಎಂಬ ಹಿರಿಯರ ಮಾತನ್ನು ಮರೆತು ನಾಳೆ ಸಾಯುತ್ತೇನೆ ಎಂಬಂತೆ ತಿಂದು, ನೂರು ಕಾಲ ಬದುಕುತ್ತೇನೆ ಎಂಬಂತೆ ದುಡಿಯುವ ಮನೋಭಾವ ಬೆಳೆಸಿಕೊಂಡಿರುವುದು ಬಹಳ ನೋವಿನ ಸಂಗತಿ. ಬದುಕುವುದಕ್ಕಾಗಿ ತಿನ್ನು, ತಿನ್ನಲಿಕ್ಕಾಗಿ ಬದುಕಬೇಡ ಎಂಬುದನ್ನು ಮರೆತು ಕೇವಲ ತಿನ್ನಲಿಕ್ಕಾಗಿಯೇ ಬದುಕುವುದು ಎಂಬ ಮನೋಧರ್ಮವನ್ನು ಬೆಳೆಸಿಕೊಂಡಿರುವುದು ಬಹಳ ದುರದೃಷ್ಟಕರ ವಿಚಾರ. ನಮಗೆ ದೇಹಕ್ಕೆ ಮತ್ತು ಮನಸ್ಸಿಗೆ ಬರುವ ಶೇಕಡಾ 60 ರಷ್ಟು ರೋಗಗಳನ್ನು ನಾವು ನಮ್ಮ ಆಹಾರ ನಿಯಂತ್ರಣದಿಂದಲೇ ತಡೆಯಬಹುದು ಎಂಬ ಮಾತನ್ನು ನಾವೆಲ್ಲ ನೆನಪಿನಲ್ಲಿ ಇಟ್ಟುಕೊಂಡಲ್ಲಿ, ರೋಗರಹಿತವಾದ ನೂರು ವರ್ಷಗಳ ಜೀವನವನ್ನು ನಾವು ಪಡೆಯಬಹುದು ಎಂಬ ನಿತ್ಯಸತ್ಯವನ್ನು ಅರಿತು ಬಾಳಿದಲ್ಲಿ ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಖಂಡಿತಾ ಸಾಧ್ಯವಿದೆ.

ಡಾ|| ಮುರಲೀಮೋಹನ ಚೂಂತಾರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here