Friday, April 5, 2024

ಶಿಕ್ಷಕರ ಬಗ್ಗೆ ಸಮಾಜದ ಅನಿಸಿಕೆ

ಲೇ: ರಮೇಶ ಎಂ ಬಾಯಾರು ಎಂ.ಎ; ಬಿ.ಇಡಿ
ಶಿಕ್ಷಕರೆಂದೊಡನೆ ನಮಗೆ ನೆನಪಿಗೆ ಬರುವುದು ಗುರು ಎಂಬ ಆದರಣೀಯ ಭಾವನೆ. ಸರಕಾರಿ, ಅನುದಾನಿತ ಅಥವಾ ಖಾಸಗಿ ಸಂಸ್ಥೆಗಳ ಶಿಕ್ಷಕರೆಲ್ಲರೂ ಸಮಾಜದಲ್ಲಿ ಗುರು ಎಂದೇ ಆದರಿಸಲ್ಪಡುತ್ತಾರೆ. ಕೆ.ಜಿ. ಯಿಂದ ಪಿ.ಜಿ. ತನಕ ಅಧ್ಯಾಪನ ಮಾಡುವವರು, ಅಂಗನವಾಡಿ ಕಾರ್ಯಕರ್ತರು, ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರು ಇವರೆಲ್ಲರೂ ಸಮಾಜದಿಂದ ಗುರು ಎಂಬ ಮಾನ್ಯತೆಯನ್ನು ಪಡೆಯುತ್ತಿದ್ದಾರೆ. ಅಧ್ಯಾಪನ ನೀಡುವವರ ಸೇವೆ ಇತರ ನೌಕರರ ಸೇವೆಗಿಂತ ವಿಭಿನ್ನವಾಗಿಯೇ ಸಮಾಜಕ್ಕೆ ಸಿಗುತ್ತಲಿದೆಯೆಂಬ ಅಚಲ ನಂಬುಗೆಯಿಂದಾಗಿಯೇ ಈ ಆದರ, ಗೌರವ ಮತ್ತು ಮನ್ನಣೆಗಳಿಗೆ ಶಿಕ್ಷಕ ಭಾಜನನಾಗುತ್ತಿದ್ದಾನೆ. ಅಧ್ಯಾಪನ ಮಾಡುವುದೆಂದರೆ ಸಜೀವ ಮನಸ್ಸುಗಳ ಜೊತೆ ಸಂವಹನಕ್ರಿಯೆಯಾಗಿದೆ. ಅಧ್ಯಾಪಕರು ಎಳೆಯ ಭಾವನೆಗಳ ಜೊತೆಗೆ ಒಡನಾಡುತ್ತಾರೆ. ಕಾಗದ ಪತ್ರ ಅಥವಾ ದಾಖಲೆಗಳ ಜೊತೆಗೆ ವ್ಯವಹರಿಸುವಲ್ಲಿ ಭಾವನಾತ್ಮಕತೆ ಬೆಳೆಯುವುದಿಲ್ಲ. ಇವರಿಗೆ ಸಾರ್ವಜನಿಕರೊಡನೆ ವ್ಯವಹಾರವಿರುತ್ತದೆ. ವ್ಯವಹಾರಗಳಲ್ಲಿ ನಿಷ್ಠೆಯಿದೆಯಾದರೂ ಭಾವನಾ ಸಂಬಂಧಗಳು ಅಧ್ಯಾಪಕರಿಗೆ ದೊರೆತಷ್ಟು ಇತರರಿಗೆ ದೊರೆಯಲಾರದು.
ದಾಖಲೆಗಳ ಜೊತೆಗೆ ವ್ಯವಹಾರಗಳು ನಡೆಯುವ ಸಂದರ್ಭದಲ್ಲಿ ಆಗುವ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿ ಸರಿಪಡಿಸಬಹುದು. ಆದರೆ ಮನಸ್ಸು ಮತ್ತು ಭಾವನೆಗಳಲ್ಲಿ ಅಧ್ಯಾಪಕ ಮಾಡುವ ಚಿಕ್ಕ ತಪ್ಪನ್ನೂ ತಿದ್ದಲಾಗದು. ಅಂತಹ ತಪ್ಪುಗಳು ಮೃದು ಮನದ ಮೇಲೆ ಸ್ಥಾಯಿಯಾಗುತ್ತವೆ. ಮಗುವನ್ನು ಶಾಶ್ವತವಾದ ತಪ್ಪಿನೊಂದಿಗೆ ಸಮನ್ವಯಿಸುತ್ತದೆ. ಇದರಿಂದಾಗಿ ಸಮಾಜವು ದುರಂತಗಾಮಿಯಾಗಬಹುದು. ಇಡೀ ರಾಷ್ಟ್ರಕ್ಕೆ ಅಪಾರ ನಷ್ಟವೇ ಆಗಬಹುದು. ಶಿಕ್ಷಕರು ಜವಾಬ್ದಾರಿಯುತ ಸೇವೆಯನ್ನು ಯಶಸ್ವಿಯಾಗಿ ನಿರ್ವಹಿಸುವುದರಿಂದಲೇ ಸಮಾಜದಿಂದ ನಿರಂತರ ಮಾನ, ಸನ್ಮಾನ, ಆದರ, ಗೌರವಾದಿಗಳಿಗೆ ಪಾತ್ರರಾಗುತ್ತಿದ್ದಾರೆ. ಸಮಾಜವು ಶಿಕ್ಷಕರ ಮಾತುಗಳನ್ನು ವೇದವಾಕ್ಯ ಎಂದು ತಿಳಿಯುತ್ತಾರೆ. ಶಿಕ್ಷಕರು ನೀಡುವ ಸಲಹೆಗಳನ್ನು ನಿಸ್ಸಂದೇಹವಾಗಿ ಇಷ್ಟಪಟ್ಟು ಅನೂಚಾನವಾಗಿ ಪಾಲಿಸುತ್ತಾರೆ
ಪುಟ್ಟ ಸತ್ಯ ಘಟನೆಯೊಂದನ್ನು ಓದುಗರ ಜೊತೆಗೆ ಹಂಚಿಕೊಳ್ಳುವುದರೊಂದಿಗೆ ಲೇಖನದಲ್ಲಿ ಮುಂದುವರಿಯಲಿಚ್ಛಿಸುತ್ತೇನೆ. ನಾನೂ ಅಧ್ಯಾಪಕ. ಜುಲೈ ೨೦೦೩ನೇ ಇಸವಿಯಿಂದ ದಶಂಬರ್ ೨೦೦೭ರ ವರೆಗೆ ವಿಟ್ಲ ಶಾಸಕರ ಆಪ್ತ ಸಲಹೆಗಾರನಾಗಿ ಸರಕಾರದಿಂದ ನಿಯುಕ್ತನಾಗಿ ನಾನು ಕರ್ತವ್ಯ ನಿರ್ವಹಿಸುತ್ತಿದ್ದೆ. ಆಗ ನನಗೆ ಸಾರ್ವಜನಿಕರು ಮತ್ತು ವಿವಿಧ ಇಲಾಖೆಗಳೊಡನೆ ನಿರಂತರವಾಗಿ ಸಂಪರ್ಕದಲ್ಲಿರುವ ವಿಶೇಷ ಅಗತ್ಯವಿತ್ತು. ಕ್ಷೇತ್ರದ ಸಾರ್ವಜನಿಕರ ನಾನಾ ಅಹವಾಲುಗಳನ್ನು, ಅಗತ್ಯಗಳನ್ನು ಶಾಸಕರ ಗಮನಕ್ಕೆ ತರುವ ಮತ್ತು ಅವರ ಸೂಚನೆಯಂತೆ ತಾಲೂಕಿನ ವಿವಿಧ ಇಲಾಖೆಗಳನ್ನು ಸಂರ್ಕಿಸುವ ಕಾರ್ಯವ್ಯಾಪ್ತಿ ನನ್ನದಾಗಿತ್ತು. ಆದರೆ ಅನೇಕ ಸಂದರ್ಭಗಳಲ್ಲಿ ತಾಲೂಕು ದಂಡಾಧಿಕಾರಿಗಳನ್ನೇ ಭೇಟಿ ಮಾಡುವ ಅಗತ್ಯಗಳು ನನಗೆ ಪದೇ ಪದೇ ಸಿಗುತ್ತಿತ್ತು.
ಅದೊಂದು ದಿನ ನಾನು ತಹಶೀಲ್ದಾರರ ಭೇಟಿಗೆಂದು ಹೋಗಿದ್ದೆ. ಆ ಸಂದರ್ಭದಲ್ಲಿ ಕೊಠಡಿಯೊಳಗೆ ತಹಶೀಲ್ದಾರರು ಇರಲಿಲ್ಲ. ಇನ್ನೇನು ಬರುತ್ತಿದ್ದಾರೆ ಎಂಬ ಮಾಹಿತಿಯ ಆಧಾರದಲ್ಲಿ ಹೊರಗಡೆ ಇರಿಸಿದ ಬೆಂಚ್‌ನ ಮೇಲೆ ಆಸೀನನಾದೆ. ನನ್ನ ಪಕ್ಕದಲ್ಲೇ ಆದಾಗಲೇ ಬಂದಿದ್ದ ಇಬ್ಬರು ಸಜ್ಜನರು ತಹಶೀಲ್ದಾರರ ಭೇಟಿಗೆಂದು ಕುಳಿತಿದ್ದರು. ಅದೇ ಸಮಯಕ್ಕೆ ನನಗೆ ಅಪರಿಚಿತರಾದ ಓರ್ವ ನಿವೃತ್ತ ಅಧಿಕಾರಿಗಳು ಅವರ ಕಾರ್ಯಾರ್ಥವಾಗಿ ತಾಲೂಕು ಕಛೇರಿಗೆ ಬಂದರು. ಅವರನ್ನು ನೋಡಿದೊಡನೆಯೇ ನನ್ನ ಪಕ್ಕದಲ್ಲಿದ್ದವರಲ್ಲಿ ಒಬ್ಬ ಸಜ್ಜನ ತನ್ನ ಮಿತ್ರನಿಗೆ ತುಳುವಿನಲ್ಲಿ, ಅಲಾ ಸಾರ್ ಬತ್ತೆರ್(ನೋಡು ಸರ್ ಬಂದರು.) ಎನ್ನುತ್ತಾ ನಿಲ್ಲಲು ಹವಣಿಸಿದರು. ಕೂಡಲೇ ಇನ್ನೊಬ್ಬ ಸಜ್ಜನ ಅವರ ಕೈ ಹಿಡಿದು ಅವರನ್ನು ಜಗ್ಗಿ ಕುಳ್ಳಿರಿಸಿದರು. ಆ ನಿವೃತ್ತರು ನನ್ನನ್ನು ದಾಟಿ ಮುಂದುವರಿದರು. ಪಕ್ಕದಲ್ಲಿದ್ದ ಸಜ್ಜನರಿಬ್ಬರೂ ಅವರನ್ನು ಕುಳಿತಲ್ಲಿಂದಲೇ ವಂದಿಸಿ ಬೀಳ್ಕೊಟ್ಟರು. ತನ್ನ ಸ್ನೇಹಿತನನ್ನು ಕುಳ್ಳಿರಿಸಿದ್ದ ಆ ಸಜ್ಜನರು ಓರಗೆಯವನಿಗೆ ಹೇಳಿದ ಮಾತು ಇಂದೂ ನನ್ನ ಕಿವಿಯೊಳಗೆ ಗುಂಯ್‌ಗುಡುತ್ತಿದೆ. ಅವು ಗೊಡ್ಡು ಪೆತ್ತಯ, ಇತ್ತೆ ಬೊರಿಪುಜ್ಜಿ, ಅಯಿಕ್ ಪುಂಡಿ ದಾಯೆ -ಅದು ಗೊಡ್ಡು ದನ, ಹಾಲು ಕೊಡದ ಅದಕ್ಕೆ ಹಿಂಡಿ ಯಾಕೆ? ಎಂದರೆ ನಮಸ್ಕಾರ ಯಾಕೆ ?-ಎಂಬ ಭಾವದಿಂದ ಮಾತನಾಡಿದರು. ಪೆನ್ನನ್ನು ಶಾಯಿಯಿರುವ ತನಕ ಜೋಪಾನವಾಗಿ ಆತ್ಮೀಯ ಒಡನಾಡಿಯಂತೆ ಕಾಣುವ ನಾವು ಶಾಯಿ ಮುಗಿದೊಡನಯೇ ಅದನ್ನು ಎಸೆದು ಬಿಡುತ್ತೇವೆ. ಅಧಿಕಾರದಲ್ಲಿರುವಾಗ ತಮಗೆ ಬೇಕಾದಂತೆ ಬಳಸಿ, ಅಧಿಕಾರಿಗಳು ನಿವೃತ್ತರಾದೊಡನೆ ಕಡೆಗಣಿಸಿ ನೋಡುವ ಸಮಾಜದ ಕೀಳು ಯೋಚನೆಯ ಬಗ್ಗೆ ಮಾನಸಿಕವಾಗಿ ನಾನು ಕಿರಿ ಕಿರಿ ಅನುಭವಿಸಿದೆ
ಈ ಕಿರಿ ಕಿರಿಯು ನನ್ನೊಳಗಿನಿಂದ ಮಾಯವಾಗುವ ಘಟನೆಯೂ ತತಕ್ಷಣ ನಡೆದೇ ಬಿಟ್ಟಿತು. ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ವಯೋನಿವೃತ್ತರಾದ ಓರ್ವ ಅಧ್ಯಾಪಕರು ಅದೇ ಕಛೇರಿಗೆ ಅವರ ಕೆಲಸದ ಮೇಲೆ ಬಂದರು. ಅವರನ್ನು ನೋಡಿದೊಡನೆಯೆ, ಹಿಂದೆ ಯಾವಾತ ತನ್ನ ಮಿತ್ರನನ್ನು ಜಗ್ಗಿ ಕುಳಿಳಿರಿಸಿದ್ದರೋ ಅವರೇ, ಅಲಾ ನಮ್ಮ ಮಾಸ್ಟ್ರ್ ಬತ್ತೆರ್ (ನೋಡು ನಮ್ಮ ಮಾಸ್ಟ್ರು ಬಂದರು) ಎಂದು ಹೇಳಿದ್ದಲ್ಲದೆ ಜೊತೆಗಾರನನ್ನೂ ಎಬ್ಬಿಸುತ್ತಾ ತಾನೂ ನಿಂತು ಕೊಂಡರು. ಇಬ್ಬರೂ ಅವರೆಡೆಗೆ ಬಾಗಿ ಹಸ್ತಗಳೆರಡನ್ನೂ ಜೋಡಿಸಿ ಭಾವನಾತ್ಮಕವಾಗಿ ನಮಸ್ಕರಿಸಿದರು. ಈ ಅಧ್ಯಾಪಕರು ನನಗೂ ಪರಿಚಿತರೇ ಆದವರಾಗಿದ್ದುದರಿಂದ ನಾನೂ ವಂದಿಸಿ ಬೀಳ್ಕೊಟ್ಟೆ. ಈ ದೃಶ್ಯ ನನ್ನನ್ನು ಅಚ್ಚರಿಯಲ್ಲಿ ತೇಲಾಡಿಸಿತು. ಸಮಾಜವು ಅಧ್ಯಾಪಕನನ್ನು ಆತ ನಿವೃತ್ತನಾದರೂ ಗೌರವಿಸುತ್ತದೆ, ಅದೂ ವ್ಯಾವಹಾರಿಕ ಸಮಸ್ಕಾರ ನೀಡಿ ಅಲ್ಲ, ಭಾವನಾತ್ಮಕವಾದ ನಮಸ್ಕಾರ ನೀಡಿ ಎಂಬುದನ್ನು ಅರ್ಥೈಸಿದಾಗ ನನ್ನ ಅಧ್ಯಾಪನ ವೃತ್ತಿ ಮತ್ತು ಸಮಾಜದ ಮೇಲೆ ನನಗೆ ಅಭಿಮಾನ ನೂರ್ಮಡಿಸಿತು.
ಅಧ್ಯಾಪಕನಿಗೆ ಹಳ್ಳಿಯಲ್ಲಿ ಮೇಸ್ಟ್ರು ಅಥವಾ ಮಾಸ್ಟ್ರು ಎಂದೇ ಹೇಳುತ್ತಾರೆ. ಮಾಸ್‌ಣಡಿue ಎಂಬ ರೀತಿ ಣಡಿue ನೊಂದಿಗೆ ಅಂತ್ಯವಾಗುವ ಉದ್ಯೋಗಗಳು ಬಹಳ ಕಡಿಮೆ. ಶಿಕ್ಷಕನಿಂದ ಆ ’ಣಡಿue’ ವಿಗೆ ಅರ್ಥ ತುಂಬುವ ಕೆಲಸ ಇನ್ನೂ ಹೆಚ್ಚಬೇಕು. ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಕರ ಮೇಲೆ ವಿಶ್ವಾಸವಿರಿಸಿ ಅವರಿಗೆ ಒಪ್ಪಿಸುತ್ತಾರೆ. ಶಿಕ್ಷಕರ ಜೊತೆ ಒಡನಾಡುವ ಮಕ್ಕಳ ಸುಂದರ ನಾಳೆಗಳು, ಇಂದು ಶಿಕ್ಷಕರು ಮಾಡುವ ಸೇವೆಯನ್ನಾಧರಿಸಿದೆ. ನಮ್ಮ ಎಲ್ಲ ಶಿಕ್ಷಕ ಬಂಧುಗಳಿಗೆ ಸೇವಾ ತತ್ಪರತೆಯಿಂದ ಭಾವೀ ಜನಾಂಗವನ್ನು ಸದೃಢಗೊಳಿಸುವ ಮಹಾ ಶಕ್ತಿ ಶ್ರೀ ಭಗವಂತನಿಂದ ಕೂಡಿ ಬರಲಿ.

More from the blog

ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ : ರಕ್ಷಣೆಗೆ ಅರ್ಧ ಅಡಿಯಷ್ಟೇ ಬಾಕಿ

ವಿಜಯಪುರ: ಕೊಳವೆ ಬಾವಿಗೆ ಬಿದ್ದಿರುವ ಮಗು ಸಾತ್ವಿಕ ಸುರಕ್ಷಿತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ ಬಂದಿದೆ. ಮಗು ಸುರಕ್ಷಿತವಾಗಿದ್ದು, ಕಾರ್ಯಾಚರಣೆ ಆಶಾದಾಯಕವಾಗಿದೆ. 16 ಅಡಿ ಆಳದಲ್ಲಿರುವ ಸಾತ್ವಿಕ್ ರಕ್ಷಣೆಗಾಗಿ 22 ಅಡಿ ಆಳದವರೆಗೆ ಸುರಂಗ...

ಮಿತಿ ಮೀರಿದ ತಾಪಮಾನ : ಖಡಕ್​ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿರು ಬಿಸಿಲು ಹೆಚ್ಚಳವಾಗುತ್ತಿದ್ದು ಮುಂದಿನ 14 ದಿನಗಳ ಕಾಲ ಬಿಸಿಗಾಳಿ ಬೀಸಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​...

ಮನೆಯ ಮಹಡಿಯಿಂದ ಬಿದ್ದು ಬಾಲಕ ಸಾವು

ಬಂಟ್ವಾಳ: ಮನೆಯ ಮಹಡಿಯ ಮೇಲಿಂದ ಕೆಳಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಎ.‌ ೧ರ ಮುಂಜಾನೆ ನಡೆದಿದೆ. ಬಂಟ್ವಾಳ ಜಕ್ರಿಬೆಟ್ಟು ನಿವಾಸಿ ದಿನೇಶ್ ಪೂಜಾರಿ ಅವರ ಪುತ್ರ ಆದಿಶ್(೧೫) ಮೃತಪಟ್ಟ ಬಾಲಕ. ಆತ ಮನೆಯಲ್ಲಿ ದೊಡ್ಡಮ್ಮನ...

ಮಾಂಸ ಪ್ರಿಯರಿಗೆ ಬೆಲೆ ಏರಿಕೆ ಶಾಕ್.. ಕೋಳಿ ಮಾಂಸದ ದರ ಏರಿಕೆ

ಮಂಗಳೂರು: ಕೋಳಿಮಾಂಸ, ಮೀನಿನ ದರ ಏರುಗತಿ ಯಲ್ಲಿ ಸಾಗುತ್ತಿದ್ದು ಮಾಂಸಾಹಾರ ಪ್ರಿಯರ ಜೇಬಿಗೂ ಕತ್ತರಿ ಬೀಳುವಂತಾಗಿದೆ. ಪ್ರಸ್ತುತ ಕೋಳಿಮಾಂಸಕ್ಕೆ (ವಿದ್‌ ಸ್ಕಿನ್‌) ಕೆ.ಜಿ.ಗೆ ಬ್ರಾಯ್ಲರ್‌ ಕೆಲವು ಕಡೆ 235-240 ರೂ., ಟೈಸನ್‌ 270 ರೂ....