


ಬಂಟ್ವಾಳ: ಬಂಟ್ವಾಳ ತಾಲೂಕಿನ ವಿಟ್ಲ ಠಾಣಾ ವ್ಯಾಪ್ತಿಯ ಮಾಣಿ ಸಮೀಪದ ನೇರಳಕಟ್ಟೆ ಪರ್ಲೊಟ್ಟು ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ನಡೆದಿದೆ.
ನೇರಳಕಟ್ಟೆ ಸಮೀಪದ ಪರ್ಲೊಟ್ಟು ನಿವಾಸಿ ಉಮ್ಮಾರ್ ಫಾರುಕ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಬೆಳಿಗ್ಗೆ ಈ ಘಟನೆ ಬೆಳಕಿಗೆ ಬಂದಿದೆ.
ಮನೆ ಮಾಲಕ ಉಮ್ಮಾರ್ ಫಾರುಕ್ ರವರು ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ಮನೆಯ ಒಂದು ಬೆಡ್ ರೂಮಿನಲ್ಲಿ ಮಲಗಿದ್ದರು. ಇನ್ನೋರ್ವ ಪುತ್ರ ಬೇರೊಂದು ಬೆಡ್ ರೂಮಿನಲ್ಲಿ ಮಲಗಿದರೆ ಮನೆಯ ಕೆಲಸದ ಮಹಿಳೆ ಮೇಲ್ಭಾಗದ ಇನ್ನೊಂದು ಕೋಣೆಯಲ್ಲಿ ಮಲಗಿದ್ದರು. ಪತ್ನಿ, ಮಕ್ಕಳೊಂದಿಗೆ ಉಮ್ಮಾರ್ ಫಾರುಕ್ ರವರು ಮಲಗಿದ್ದ ಕೋಣೆಗೆ ಪ್ರವೇಶಿಸಿದ ಕಳ್ಳರು ಅಲ್ಲಿದ್ದ ಕಪಾಟಿನಲ್ಲಿರಿಸಲಾಗಿದ್ದ ಚಿನ್ನಾಭರಣವನ್ನು ದೋಚಿ ಹಿಂದಿನ ಬಾಗಿಲು ಮೂಲಕ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಎಸೈ ಎಸ್.ಐ. ವಿನೋದ್ ರೆಡ್ಡಿ ಮತ್ತು ತಂಡ ಆಗಮಿಸಿ ಪರಿಶೀಲಿಸಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞ ರನ್ನೂ ಕರೆಸಿ ಪರಿಶೀಲನೆ ನಡೆಸಲಾಗಿದೆ.







