


ನವದೆಹಲಿ: ಕೋವಿಡ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿದ್ದು, ಸಭೆಯಲ್ಲಿ ಆಯಾ ರಾಜ್ಯಗಳ ಕೊರೊನಾ ಸ್ಥಿತಿಗತಿ, ಲಸಿಕೆ ಬಗ್ಗೆ ಚರ್ಚೆ ನಡೆಸಿದರು. ಕೋವಿಡ್ ಲಸಿಕೆ ಬರುವವರೆಗೂ ನಿರ್ಲಕ್ಷ್ಯ ಬೇಡ. ಯಾವುದೇ ಸಂದರ್ಭದಲ್ಲಾದರೂ ಲಸಿಕೆ ಬರಬಹುದು. ಲಸಿಕೆ ವಿತರಣೆ ಬಗ್ಗೆ ಸರ್ವಸನ್ನದ್ಧರಾಗುವಂತೆ ರಾಜ್ಯ ಸರ್ಕಾರಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಶೀಘ್ರದಲ್ಲಿಯೇ ಕೊರೊನಾ ಲಸಿಕೆ ಲಭ್ಯವಾಗಲಿದೆ. ವಿಜ್ಞಾನಿಗಳು ಅವರ ಕೆಲಸಗಳನ್ನು ಮಾಡುತ್ತಿದ್ದಾರೆ. ಯಾವುದೇ ಸಂದರ್ಭದಲ್ಲಿ ಕೂಡ ಲಸಿಕೆ ಲಭ್ಯವಾಗಬಹುದು ಎಲ್ಲಾ ರಾಜ್ಯಗಳು ಸಿದ್ಧತೆ ಮಾಡಿಕೊಳ್ಳಿ. ಲಸಿಕೆ ಬರುತ್ತೆ ಎಂದು ಕೋವಿಡ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ. ಲಸಿಕೆ ಬಂದ ಬಳಿಕವೂ ಉತ್ಪಾದನೆಗೆ ಕೆಲ ಸಮಯಾವಕಾಶ ಬೇಕು. ಹಾಗಾಗಿ ಅಲ್ಲಿಯವರೆಗೂ ಉದಾಸೀನ ಬೇಡ. ಕೋವಿಡ್ ಮರಣ ಪ್ರಮಾಣವನ್ನು ಕಡಿಮೆಯಾಗುವಂತೆ ನೋಡಿಕೊಳ್ಳಿ ಎಂದು ರಾಜ್ಯಗಳಿಗೆ ಸೂಚಿಸಿದ್ದಾರೆ.
ಅಲ್ಲದೇ ಲಸಿಕೆ ಹಂಚಿಕೆ ಬಗ್ಗೆ ಸಿದ್ಧತೆ ಮಾಡಿಕೊಳ್ಳಿ. ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಮಾಹಿತಿಯ ಪ್ರಕಾರ ತಯಾರಿ ಮಾಡಿಕೊಳ್ಳೋಣ. ಆಯಾ ರಾಜ್ಯಗಳಲ್ಲಿ ಸರ್ಕಾರ ನಡೆಸಿರುವ ಸಿದ್ಧತೆಗಳ ಬಗ್ಗೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿ ಎಂದು ತಿಳಿಸಿದರು.





