ಬಂಟ್ವಾಳ: ಕೋವಿಡ್ ಬಳಿಕ 70 ಶೇ. ಸರಕಾರಿ ಬಸ್ಸುಗಳ ಓಡಾಟ ಮರು ಆರಂಭಗೊಂಡಿದ್ದು, ಶೀಘ್ರದಲ್ಲಿ ಅದು 100 ಶೇ.ವನ್ನು ತಲುಪಲಿದೆ. ಬಂಟ್ವಾಳ ಕ್ಷೇತ್ರದಲ್ಲಿ ಸಾರ್ವಜನಿಕರ ಬೇಡಿಕೆಗಳಿಗೆ ಸಂಬಂಧಿಸಿ ಅಧಿಕಾರಿಗಳು ಸ್ಪಂದನೆ ನೀಡಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಹೇಳಿದರು.
ಅವರು ಬಿ.ಸಿ.ರೋಡಿನ ಸ್ಪರ್ಶಾ ಕಲಾಮಂದಿರದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಡೆದ ಕೆಎಸ್‌ಆರ್‌ಟಿಸಿ ಅದಾಲತ್‌ನಲ್ಲಿ ಮಾತನಾಡಿದರು. ಕೆಎಸ್‌ಆರ್‌ಟಿಸಿಯು ಸೆಮಿಸರಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಸಂಪೂರ್ಣವಾಗಿ ನಷ್ಟದಲ್ಲಿ ಬಸ್ಸುಗಳನ್ನು ಓಡಿಸುವುದು ಕಷ್ಟ ಸಾಧ್ಯ. ಆದರೆ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು. ಹೊಸ ರೂಟ್‌ಗಳ ಬೇಡಿಕೆಗೆ ಸರ್ವೇ ನಡೆಸುವ ಜತೆಗೆ, ಏರಿಯಾ ಸ್ಕೀಮ್ ಪರ್ಮಿಟ್‌ಗಳಿಗೂ ಗಮನ ಹರಿಸುವಂತೆ ಸಲಹೆ ನೀಡಿದರು.
ಸಾರ್ವಜನಿಕರಾದ ದೇವದಾಸ್ ಶೆಟ್ಟಿ ವಾಲ್ತಾಜೆ, ಧನಂಜಯ ಶೆಟ್ಟಿ ಸರಪಾಡಿ, ಸರಪಾಡಿ ಅಶೋಕ ಶೆಟ್ಟಿ, ಪುರುಷೋತ್ತಮ ಪೂಜಾರಿ ಮಜಲು, ಉಜಿರೆಯ ಅರವಿಂದ ನಾಯಕ್, ಗ್ರೇಸಿ ರಾಡ್ರಿಗಸ್, ದೇವಿಪ್ರಸಾದ್, ದಾಮೋದರ್, ಜಿನರಾಜ ಅರಿಗ, ವೆಂಕಪ್ಪ ರೈ, ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ, ಡೊಂಬಯ ಅರಳ, ಚಂದ್ರಶೇಖರ್ ಅನಂತಾಡಿ, ಪುರುಷೋತ್ತಮ ಶೆಟ್ಟಿ, ಮಹಮ್ಮದ್ ಸುರಿಬೈಲು, ಸುಲೋಚನಾ ಜಿ.ಕೆ.ಭಟ್, ಮೋಹನ್ ರಾಯಿ ಮೊದಲಾದವರು ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.


ಬೆಂಗಳೂರು ಸೇರಿದಂತೆ ಮೊದಲಾದ ಪ್ರದೇಶಗಳಿಂದ ಬರುವ ಕೆಎಸ್‌ಆರ್‌ಟಿಸಿ ಬಸ್ಸುಗಳು ಬಿ.ಸಿ.ರೋಡಿನ ಫ್ಲೈಓವರ್ ಆರಂಭದಲ್ಲಿ ನಿಲ್ಲುತ್ತಿದ್ದು, ಅವುಗಳನ್ನು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲೇ ನಿಲ್ಲಿಸುವುದಕ್ಕೆ ಕ್ರಮಕೈಗೊಳ್ಳುವಂತೆ ಹರೀಶ್ ಬಿ.ಸಿ.ರೋಡು ಅವರು ಮನವಿ ಮಾಡಿದರು.
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಹಾಗೂ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಎನ್.ಅರುಣ್‌ಕುಮಾರ್ ಅವರು ತಮ್ಮ ವಿಭಾಗಗಳ ಕುರಿತು ವಿವರಿಸಿದರು. ವಿಭಾಗೀಯ ಸಂಚಲನಾಧಿಕಾರಿಗಳಾದ ಮುರಳೀಧರ ಆಚಾರ್ಯ ಹಾಗೂ ಎಚ್.ಆರ್.ಕಮಲ ಕುಮಾರ್ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.


ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಬೂಡಾ ಅಧ್ಯಕ್ಷ ಬಿ.ದೇವದಾಸ್ ಶೆಟ್ಟಿ, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ಡಿಪೊ ಮೆನೇಜರ್‌ಗಳಾದ ದಿವಾಕರ ಎಚ್., ರಮ್ಯಾ ಕೆ.ಎಂ., ಸಹಾಯಕ ಸಂಚಲನಾ ವ್ಯವಸ್ಥಾಪಕರಾದ ನಿರ್ಮಲಾ, ಪುಷ್ಪಲತಾ ಪಾಲ್ಗೊಂಡಿದ್ದರು.
ಕೆಎಸ್‌ಆರ್‌ಟಿಸಿ ಬಿ.ಸಿ.ರೋಡು ಘಟಕ ವ್ಯವಸ್ಥಾಪಕ ಶ್ರೀಶ ಭಟ್ ವಂದಿಸಿದರು. ಸಿಬಂದಿ ರಮೇಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here