ಬಂಟ್ವಾಳ: ಕೊರೊನಾ ಕಾರಣದಿಂದಾಗಿ ಸಮ್ಮುಖ ಶಿಕ್ಷಣ ವ್ಯವಸ್ಥೆ ದೂರವಾಗಿ ವೆಬಿನಾರ್‌ಗಳು ಪ್ರಾರಂಭಗೊಂಡಿದ್ದು, ಸಮ್ಮುಖ ಶಿಕ್ಷಣದಿಂದ ವಿದ್ಯಾರ್ಥಿ ಬೆಳೆಯುವ ಜತೆಗೆ ಗುರು ಕೂಡ ಕಲಿಯುತ್ತಾನೆ. ಪುಸ್ತಕದ ಓದು-ಬರವಣಿಗೆ ಎಂಬುದು ಒಂದು ಧ್ಯಾನ ಸ್ಥಿತಿಯಾಗಿದೆ ಎಂದು ಜಿಡೆಕಲ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ| ನರೇಂದ್ರ ರೈ ದೇರ್ಲ ಹೇಳಿದರು.
ಅವರು ಸಾರ್ವಜನಿಕ ಗ್ರಂಥಾಲಯ ಇಲಾಖೆ, ದ.ಕ.ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ಬಂಟ್ವಾಳ ಶಾಖಾ ಗ್ರಂಥಾಲಯ ಸಹಯೋಗದಲ್ಲಿ ಗುರುವಾರ ಬಿ.ಸಿ.ರೋಡಿನಲ್ಲಿರುವ ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ರಾಷ್ಟೀಯ ಗ್ರಂಥಾಲಯ ಸಪ್ತಾಹ-2020 ಹಾಗೂ ಡಿಜಿಟಲ್ ಗ್ರಂಥಾಲಯ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದರು.

ದಿನಪತ್ರಿಕೆಗಳಿಂದ ಜ್ಞಾನ ಪ್ರಸಾರಗೊಳ್ಳುವ ಜತೆಗೆ ಒಂದು ಊರಿನ ಸುದ್ದಿ ನಮಗೆ ಅದರ ಭವನಾತ್ಮಕ ಸಂಬಂಧವನ್ನು ಬೆಸೆಯುತ್ತದೆ. ತಮಿಳುನಾಡು, ಕೇರಳಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ಪುಸ್ತಕ ಹಾಗೂ ದಿನಪತ್ರಿಕೆಗಳನ್ನು ಓದುವವರ ಸಂಖ್ಯೆ ಕುಸಿಯುತ್ತಿದೆ ಎಂದರು.
ಮಂಗಳೂರು ಆಕಾಶವಾಣಿಯ ನಿವೃತ್ತ ಅಧಿಕಾರಿ ಡಾ| ವಸಂತಕುಮಾರ ಪೆರ್ಲ ಮಾತನಾಡಿ, 200 ವರ್ಷಗಳ ಇತಿಹಾಸವನ್ನು ಹೊಂದಿರುವ ಮುದ್ರಣ ಮಾಧ್ಯಮ ಕಣ್ಮರೆಯಾಗುವ ಕಾಲ ಎದುರಾಗಿದ್ದು, ಅವುಗಳು ನಾಶವಾಗುವ ಮುನ್ನ ಅವುಗಳನ್ನು ಡಿಜಿಟಲ್‌ಗೆ ವರ್ಗಾಯಿಸುವ ಅನಿವಾರ್ಯತೆ ಇದೆ ಎಂದರು.

ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಜಿಲ್ಲಾ ಮುಖ್ಯ ಗ್ರಂಥಾಲಯಾಧಿಕಾರಿ ಗಾಯತ್ರಿ ಉಪಸ್ಥಿತರಿದ್ದರು.

ಜಿಲ್ಲಾ ಕೇಂದ್ರ ಗ್ರಂಥಾಲಯದ ಸಹಾಯಕ ಗ್ರಂಥಪಾಲಕಿ ನಮಿತಾ ಸ್ವಾಗತಿಸಿದರು. ಬಂಟ್ವಾಳ ಶಾಖಾ ಗ್ರಂಥಪಾಲಕಿ ಪ್ರಣೀತಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here