ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ದೂರದರ್ಶನ ಚಂದನ ವಾಹಿನಿಯಲ್ಲಿ ನ. 23 ರಿಂದ 5, 6 ಮತ್ತು 7ನೇ ತರಗತಿ ವಿದ್ಯಾರ್ಥಿಗಳಿಗಾಗಿ ಸಂವೇದಾ ಇ-ಕ್ಲಾಸ್ ಕಲಿಕಾ ಕಾರ್ಯಕ್ರಮಗಳು ಪ್ರಸಾರವಾಗಲಿವೆ ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಹೇಳಿದ್ದಾರೆ. ಕೋವಿಡ್-19 ಪ್ರಸರಣದ ಹಿನ್ನೆಲೆಯಲ್ಲಿ ಶಾಲೆಗಳ ಆರಂಭ ವಿಳಂಬವಾಗುತ್ತಿರುವುದರಿಂದ ವಿದ್ಯಾರ್ಥಿಗಳ ಕಲಿಕಾ ನಿರಂತರತೆಗಾಗಿ ಸಂವೇದಾ ತರಗತಿಗಳನ್ನು 5, 6 ಮತ್ತು 7ನೇ ತರಗತಿಗಳಿಗೂ ವಿಸ್ತರಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.


5, 6 ಮತ್ತು 7ನೇ ತರಗತಿಗಳಿಗೆ ಪ್ರಥಮ ಭಾಷೆ ಕನ್ನಡ, ದ್ವಿತೀಯ ಭಾಷೆ ಇಂಗ್ಲಿಷ್, ತೃತೀಯ ಭಾಷೆ ಹಿಂದಿ ಹಾಗೂ ಕನ್ನಡ ಮಾಧ್ಯಮದಲ್ಲಿ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳ ವಿಷಯಗಳಲ್ಲಿ ವಿಡಿಯೋ ಪಾಠಗಳ ವೇಳಾಪಟ್ಟಿಯನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್ ಟಿ) ಬಿಡುಗಡೆ ಮಾಡಿದೆ. ತರಗತಿಗಳು ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 8 ರಿಂದ 9.30 ಮತ್ತು ಸಂಜೆ 5.30 ರಿಂದ 6 ಗಂಟೆಯವರೆಗೆ ಪ್ರಸಾರವಾಗಲಿವೆ. ಪ್ರತಿ ದಿನ 4 ಪಾಠಗಳನ್ನು, ಪ್ರತಿ ಪಾಠ 30 ನಿಮಿಷಗಳ ಅವಧಿಯಂತೆ 2 ಗಂಟೆಗಳ ಕಾಲ ನಡೆಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಈ ತರಗತಿಗಳು ನಿಗದಿತ ವೇಳಾಪಟ್ಟಿಯಂತೆ ಡಿ. 25 ರವರೆಗೆ 5 ವಾರಗಳ ಕಾಲ ನಡೆಯಲಿವೆ. ಪ್ರಾಥಮಿಕ ಶಾಲಾ ಶಿಕ್ಷಕರು ಕಾರ್ಯಕ್ರಮದ ಅನುಪಾಲನೆ ಮಾಡಲಿದ್ದಾರೆ. ಈ ಪಾಠಗಳ ಕುರಿತಂತೆ ಆಯಾ ಜಿಲ್ಲೆಗಳ ಉಪನಿರ್ದೇಶಕರು ಮಕ್ಕಳಿಗೆ ತಲುಪುವಂತೆ ಹೆಚ್ಚಿನ ರೀತಿಯ ಪ್ರಚಾರ ಮಾಡಿ ಮಕ್ಕಳು ಸದುಪಯೋಗಪಡಿಸಿಕೊಳ್ಳಲು ಅಗತ್ಯ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಸಂವೇದಾ ತರಗತಿಗಳು 8, 9 ಮತ್ತು 10ನೇ ತರಗತಿಗಳಿಗೆ ನಡೆಯುತ್ತಿರುವುದನ್ನು ಗಮನಿಸಬಹುದಾಗಿದೆ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here