Tuesday, October 31, 2023

ಮಾಜಿ ಸಚಿವ ಬಿ.ರಮಾನಾಥ ರೈ ಅವರ ಅಭಿವೃದ್ಧಿ ಕಾರ್ಯಗಳ ಸಾಧನೆ ರಾಜ್ಯಕ್ಕೆ ಮಾದರಿ: ಇಬ್ರಾಹಿಂ ನವಾಜ್

Must read

ಬಂಟ್ವಾಳ: ಅಭಿವೃದ್ಧಿ ಕೆಲಸ ಮಾಡುವುದೆಂದರೆ ಸುಲಭದ ಮಾತಲ್ಲ.‌ ಮಾಜಿ ಸಚಿವ ಬಿ.ರಮಾನಾಥ ರೈ ಅವರು ತನ್ನ ಶಾಸಕತ್ವದ ಅವಧಿಯಲ್ಲಿ ಬಂಟ್ವಾಳ ಕ್ಷೇತ್ರ ಸಹಿತ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಸಾಧನೆ ರಾಜ್ಯಕ್ಕೆ ಮಾದರಿಯಾಗಿದ್ದು ಇದನ್ನು ಪ್ರಶ್ನಿಸುವ ಬಿಜೆಪಿಯವರು ಅಭಿವೃದ್ಧಿ ಕೆಲಸ ಹೇಗೆ ಮಾಡಬೇಕೆಂಬುದನ್ನು ಅವರಿಂದ ತರಬೇತಿ ಪಡೆಯಬೇಕು ಎಂದು ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ನವಾಝ್ ತಿರುಗೇಟು ನೀಡಿದರು.

ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಮಾನಾಥ ರೈ ಅವರು ಮಾಡಿರುವ ಸಾಧನೆ, ಅಭಿವೃದ್ಧಿ ಕಾರ್ಯಗಳು ಬಂಟ್ವಾಳ ಕ್ಷೇತ್ರಕ್ಕೆ ಮಾತ್ರವಲ್ಲ ಜಿಲ್ಲೆಯ ಜನತೆಗೆ ತಿಳಿದಿದೆ. ಸುಮಾರು 2 ಸಾವಿರ ಕೋಟಿಯಷ್ಟು ಅಭಿವೃದ್ಧಿ ಕೆಲಸವನ್ನು ಕೇವಲ ಬಂಟ್ವಾಳ ಕ್ಷೇತ್ರದಲ್ಲಿ ಮಾಡಿದ್ದಾರೆ. ಈಗಿನ ಶಾಸಕರು ಮಾಡಿರುವ ಕಣ್ಣಿಗೆ ಕಾಣುವ ಅಭಿವೃದ್ಧಿ ಕಾರ್ಯಗಳು ಏನು ಎಂದು ಪ್ರಶ್ನಿಸಿದರು.

ರಮಾನಾಥ ರೈ ಅವರನ್ನು ಕಳೆದ ಚುನಾವಣೆಯಲ್ಲಿ ಅಪಪ್ರಚಾರದ ಮೂಲಕ ಸೋಲಿಸಲಾಗಿದೆ. ಕೊರೋನ ಸಂದರ್ಭದಲ್ಲಿ ಅವರು ನಾಲ್ಕು ಕೋಟಿ ರೂ.ವಿನಷ್ಟು ಎಲ್ಲಾ ವರ್ಗದ ಜನರಿಗೆ ಆಹಾರ ಸಾಮಾಗ್ರಿ ಕಿಟ್ಟನ್ನು ವಿತರಿಸಿ ಜನರ ನೆರವಿಗೆ ಧಾವಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಮಾನಾಥ ರೈ ಅವರ ಗೆಲುವು ನಿಶ್ಚಿತ ಎಂದು ಭವಿಷ್ಯ ನುಡಿದರು.

ವೈಯಕ್ತಿಕ ಟೀಕೆ ಸರಿಯಲ್ಲ:
ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಅವರು ಪದೇ ಪದೇ ಮಾಜಿ ಸಚಿವ ರಮಾನಾಥ ರೈ ಅವರನ್ನು ವೈಯಕ್ತಿಕವಾಗಿ ನಿಂಧಿಸುವುದು ಅವರಿಗೆ ಶೋಭೆ ತರುವಂತದ್ದು ಅಲ್ಲ. ರಾಜಕೀಯವಾಗಿ ಎಷ್ಟು ಬೇಕಾದರೂ ಟೀಕೆ ಮಾಡಲಿ. ಅದಕ್ಕೆ ನಾವು ಸಮರ್ಥವಾಗಿ ಉತ್ತರಿಸಲಿದ್ದೇವೆ ಎಂದರು.

ರಮಾನಾಥ ರೈ ವಿರುದ್ಧ ನೇರ ಕೊಲೆ ಆರೋಪ ಹೊರಿಸಿದ ಹಿನ್ನೆಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳಿಗೆ ನೀಡಿದ ದೂರಿಗೆ ಪೊಲೀಸ್ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ಅವರು ತಕ್ಷಣ ಹರಿಕೃಷ್ಣ ಬಂಟ್ವಾಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯರಿಗೆ ಆಮಿಷ:
ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ಹಿಂದಿನ ದಿನ ಕಾಂಗ್ರೆಸ್ ಪಕ್ಷದ ಇಬ್ಬರು ಸದಸ್ಯರಿಗೆ ಬಿಜೆಪಿ‌ ನಾಯಕರು ವಿವಿಧ ಆಮಿಷ ಒಡ್ಡಿ ತಮ್ಮ ಪರ ಮತ ಚಲಾಯಿಸಲು ಉತ್ತಡ ಹೇರಿದ್ದರು ಎಂದು ಆರೋಪಿಸಿದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್ ಈ ಬಗ್ಗೆ ಕೂಡಾ ಬಂಟ್ವಾಳ ಪೊಲೀಸರಿಗೆ ದೂರು ನೀಡಲಾಗಿದೆ ಎಂದರು.

ಪುರಸಭೆಯಲ್ಲಿ ಹನ್ನೆರಡು ಸ್ಥಾನ ಗಳಿಸಿರುವ ಕಾಂಗ್ರೆಸ್ , ಎಸ್.ಡಿ.ಪಿ.ಐ. ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಸೋಲಿನಿಂದ ಹತಾಶೆಗೊಂಡು ಬಿಜೆಪಿ ಇಂಥಹ ಅಪಪ್ರಚಾರದಲ್ಲಿ ತೊಡಗಿದೆ ಎಂದರು.

ಯುವ ಕಾಂಗ್ರೆಸ್ ಪ್ರಮುಖರಾದ ಆಲ್ವಿನ್ ಪ್ರಶಾಂತ್, ಸುರೇಶ್ ಪೂಜಾರಿ, ಪವನ್, ವಿನಯ ಕುಮಾರ್, ಸುಧೀಂದ್ರ ಶೆಟ್ಟಿ, ಅಕುಂಶ್ ಶೆಟ್ಟಿ, ವಿಶ್ವಜಿತ್, ಗಣೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

More articles

Latest article