Wednesday, October 25, 2023

ಪುಣಚ: ಕೇಂದ್ರ ಸರಕಾರದ ಜನಪರ ಯೋಜನೆ, ಬ್ಯಾಂಕ್ ಸೇವೆಗಳ ಮಾಹಿತಿ ಕಾರ್ಯಕ್ರಮ

Must read

ವಿಟ್ಲ: ಕೆನರಾ ಬ್ಯಾಂಕ್ ಅಜ್ಜಿನಡ್ಕ ಶಾಖೆ, ಪುಣಚ ಗ್ರಾಮ ಪಂಚಾಯಿತಿ, ಕರ್ನಾಟಕ ರಾಜ್ಯ ರೈತಸಂಘ, ಹಸಿರುಸೇನೆ, ನಾಗರಿಕ ಹಿತರಕ್ಷಣಾ ವೇದಿಕೆ ಪುಣಚ ಇವರ ಸಹಯೋಗದೊಂದಿಗೆ ಕೇಂದ್ರ ಸರಕಾರದ ಜನಪರ ಯೋಜನೆಗಳು ಮತ್ತು ಬ್ಯಾಂಕ್ ಸೇವೆಗಳ ಮಾಹಿತಿ ಹಾಗೂ ಗ್ರಾಹಕರೊಂದಿಗೆ ಸಂವಾದ ಕಾರ್ಯಕ್ರಮ ಮಂಗಳವಾರ ಪುಣಚ ಗ್ರಾಮ ಪಂಚಾಯಿತಿಯ ಸಭಾ ಭವನದಲ್ಲಿ ನಡೆಯಿತು.
ಕೆನರಾ ಬ್ಯಾಂಕ್ ಪುತ್ತೂರು ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಬಂಧಕ ನಂಜುಡಪ್ಪ ಬಿ.ಟಿ ಮಾತನಾಡಿ ಗ್ರಾಹಕರ ಹಿತ ರಕ್ಷಣೆಗೆ ಪೂರಕವಾಗಿ ಬ್ಯಾಂಕ್ ಕಾರ್ಯಾಚರಿಸುತ್ತಿದೆ. ಬ್ಯಾಂಕ್ ಗ್ರಾಹಕರ ಯಾವುದೇ ಕುಂದುಕೊರತೆ, ಲೋಪದೋಷಗಳ ಬಗ್ಗೆ ಸ್ಪಂದಿಸಲು ಬ್ಯಾಂಕ್ ಸಿದ್ಧವಿದೆ ಎಂದು ತಿಳಿಸಿದರು.
ಲೀಡ್ ಬ್ಯಾಂಕಿನ ದ.ಕ ಜಿಲ್ಲಾ ಮ್ಯಾನೇಜರ್ ಪ್ರವೀಣ್ ಕುಮಾರ್ ಕೇಂದ್ರ ಸರಕಾರದಿಂದ ಸಿಗುವ ಕಿಸಾನ್ ಕಾರ್ಡ್ ಯೋಜನೆ, ಆತ್ಮನಿರ್ಭರ್ ಯೋಜನೆ, ನಬಾರ್ಡ್ ಸಾಲ ಯೋಜನೆಗಳ ಹಾಗೂ ಇನ್ನಿತರ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಅಜ್ಜಿನಡ್ಕ ಕೆನರಾ ಬ್ಯಾಂಕ್ ಶಾಖಾ ಪ್ರಬಂಧಕ ಕೋವಲಂ, ಪುಣಚ ಗ್ರಾಮ ಪಂಚಾಯಿತಿ ಪಿಡಿಒ ಲಾವಣ್ಯ ಭಾಗವಹಿಸಿದ್ದರು.
ಗ್ರಾಹಕರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಪ್ರಾದೇಶಿಕ ಭಾಷೆ ತಿಳಿದಿರುವ ಸಿಬ್ಬಂದಿಗಳನ್ನು ನೇಮಿಸಬೇಕು, ಅಜ್ಜಿನಡ್ಕ ಕೆನರಾ ಬ್ಯಾಂಕ್‌ನಲ್ಲಿ ಪಾಸಸಬುಕ್ ಎಂಟ್ರಿ ನಡೆಸುತ್ತಿಲ್ಲ, ಭದ್ರತೆ ಇಲ್ಲದ, ಹಣ ಇಲ್ಲದ ಎಟಿಎಂ ಬಗ್ಗೆ, ಗ್ರಾಮೀಣ ಪ್ರದೇಶದ ಅವಿದ್ಯಾವಂತರಲ್ಲಿ ಸಿಬ್ಬಂದಿಗಳ ಒರಟುತನದ ಬಗ್ಗೆ ಇದೇ ಸಂದರ್ಭದಲ್ಲಿ ದೂರಲಾಯಿತು.

ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾಧ್ಯಕ್ಷ ಬಿ.ಶ್ರೀಧರ ಶೆಟ್ಟಿ ಸ್ವಾಗತಿಸಿದರು. ಪುಣಚ ನಾಗರಿಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಶಾಫಿ ಮಾಳಿಗೆ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ವೆಂಕಟ್ರಮಣ ನಾಯಕ್ ಸಹಕರಿಸಿದರು.

 

More articles

Latest article