Tuesday, October 17, 2023

ಗೃಹರಕ್ಷಕರಿಗೆ ಯೋಗ ಅತ್ಯಗತ್ಯ: ದೇಲಂಪಾಡಿ

Must read

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಉಳ್ಳಾಲ ಘಟಕ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರರಕ್ಷಣಾ ಪಡೆಯ ಸಂಯುಕ್ತ ಆಶ್ರಯದಲ್ಲಿ ನಿನ್ನೆ (ನ.8) ತಣ್ಣೀರುಬಾವಿಯ ಫಾತಿಮಾ ಬೀಚ್‌ನ ಕಡಲತೀರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಮತ್ತು ಪ್ರಾಣಾಯಾಮ, ಯೋಗ ಶಿಬಿರ ಕಾರ್ಯಕ್ರಮ ನಡೆಯಿತು.
ತಣ್ಣೀರುಬಾವಿಯ ಕಡಲತೀರದಲ್ಲಿ ಬೆಳಿಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ಸ್ವಚ್ಛತಾ ಅಭಿಯಾನ ನಡೆಯಿತು. ನಂತರ ಬೆಳಿಗ್ಗೆ 10 ರಿಂದ 12 ಗಂಟೆಯ ವರೆಗೆ ನಡೆದ ಯೋಗ ಮತ್ತು ಪ್ರಾಣಾಯಾಮ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತ ಯೋಗ ಗುರು, ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಭಾಗವಹಿಸಿ ಶಿಬಿರವನ್ನು ನಡೆಸಿಕೊಟ್ಟರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆಯ ಚೀಫ್ ‌ವಾರ್ಡನ್ ಡಾ|| ಮುರಲೀಮೋಹನ್ ಚೂಂತಾರು ಅವರ ನೇತೃತ್ವದಲ್ಲಿ ಸುಮಾರು 30 ಮಂದಿ ಈ ಶಿಬಿರದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ| ಮುರಲೀಮೋಹನ್ ಚೂಂತಾರು ಅವರು, ಕಡಲತೀರದಲ್ಲಿ ಪರಿಸರ ಸ್ವಚ್ಛವಾಗಿಡಲು ಪ್ಲಾಸ್ಟಿಕ್ ತ್ಯಾಜ್ಯ, ಬಾಟಲುಗಳ ತ್ಯಾಜ್ಯಗಳು ಮೀನುಗಳ ಸಹಿತ ಅನೇಕ ಜೀವ ಸಂಕುಲದ ರಕ್ಷಣೆಗೆ ಮಾರಕವಾಗಿದ್ದು, ಅವುಗಳನ್ನು ಸಮುದ್ರಕ್ಕೆ ಎಸೆಯದಂತೆ ಸಮುದ್ರ ತೀರದಲ್ಲಿ ಪ್ರವಾಸಿಗರಿಗೆ ಸೂಕ್ತ ಮಾರ್ಗದರ್ಶನ ಹಾಗೂ ಕಸದ ತೊಟ್ಟಿಗಳನ್ನು ಅಲ್ಲಲ್ಲಿ ಇಡುವುದರ ಮುಖಾಂತರ ತ್ಯಾಜ್ಯಗಳು ಸಮುದ್ರದ ನೀರಿಗೆ ಬೀಳದಂತೆ ಜಾಗೃತೆಯನ್ನು ವಹಿಸಬೇಕು ಎಂದು ಕರೆನೀಡಿದರು. ಇದರಿಂದ ನಮ್ಮ ಪರಿಸರದ ಸ್ವಚ್ಛತೆಯನ್ನು ಕಾಪಾಡುವುದಲ್ಲದೆ, ನಮ್ಮೆಲ್ಲರ ಆರೋಗ್ಯ ಹಿತದೃಷ್ಟಿಯಿಂದ ನಾವೆಲ್ಲರೂ ಸ್ವಚ್ಛತಾ ಜಾಗೃತಿಯನ್ನು ನಡೆಸಬೇಕು ಎಂದರು.

ಈ ಸಂದರ್ಭದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಸುನಿಲ್ ಕುಮಾರ್, ದಿವಾಕರ್, ಸುನಿಲ್, ನಿಶಾಲ್, ದುಶ್ಯಂತ್ ರೈ, ಅಂಜನ್, ಸರಸ್ವತಿ, ಕವಿತಾ ಹಾಗೂ ಇನ್ನಿತರ ಗೃಹರಕ್ಷಕ/ಗೃಹರಕ್ಷಕಿಯರು ಹಾಜರಿದ್ದರು.

More articles

Latest article