Tuesday, October 17, 2023

ಶಿಕ್ಷಕರಿಗೆ ಅನ್ಯ ಕೆಲಸ: ಸಾಧಕ ಬಾಧಕಗಳು

Must read

ಸರ್ವರಿಗೂ ಶಿಕ್ಷಣ, ಗುಣ ಮಟ್ಟದ ಶಿಕ್ಷಣ, ಕೌಶಲ್ಯಾಧಾರಿತ ಶಿಕ್ಷಣ, ಮೌಲ್ಯಾಧಾರಿತ ಶಿಕ್ಷಣ, ಹೊರೆ ರಹಿತ ಶಿಕ್ಷಣ, ಸಾರ್ವತ್ರಿಕ ಶಿಕ್ಷಣ, ಆತ್ಮನಿರ್ಭರ ಶಿಕ್ಷಣ… ಹೀಗೆ ಶಿಕ್ಷಣದ ಆಶಯಗಳು ಹತ್ತಾರು. ಆದರೆ ಈ ಆಶಯಗಳಲ್ಲಿ ಯಾವುದಾದರೂ ಒಂದರಲ್ಲಾದರೂ ನಿರೀಕ್ಷಿತವಾದ ಫಲಿತಾಂಶವನ್ನು ಪಡೆಯಲಾಗಿದೆಯೇ? ಇದಕ್ಕೆ ಉತ್ತರ ಹೌದು ಎಂದರೆ ಶಿಕ್ಷಣ ವ್ಯವಸ್ಥೆ ಇನ್ನೂ ಪಾತಾಳಕ್ಕಿಳಿಯುತ್ತದೆ ಎನ್ನುವುದು ಖಚಿತ. ನೈಜ ಚಿತ್ರಣವನ್ನು ಅವಲೋಕಿಸಿದರೆ ನಮ್ಮದೆಲ್ಲವೂ ಅರ್ಧ ಬೆಂದ ಪಾಕವಷ್ಟೆ. ಸರಿಯಾಗಿ ಬೇಯದಿದ್ದರೆ ರುಚಿಯೂ ಇಲ್ಲ. ತಿಂದರೂ ದೇಹ ಮತ್ತು ಮನಸ್ಸುಗಳಿಗೆ ಏನೇನೂ ಪ್ರಯೋಜನವಿಲ್ಲ ಅಲ್ಲವೇ? ನಮ್ಮ ಶಿಕ್ಷಣದ ಆಶಯಗಳು ದಾಖಲೆಯಂತೆ ಪರಿಪೂರ್ಣತೆಯೆಡೆಗೆ ಸಾಗುತ್ತಿವೆ. ಆದರೆ ಎಲ್ಲವೂ ಪ್ರಾಯೋಗಿಕ ಹಂತದಲ್ಲೇ ಉಳಿದುಕೊಂಡು ಸೊರಗುತ್ತಿರುವುದೂ ನಮ್ಮ ಶಿಕ್ಷಣದ ಮಹಾ ದುರಂತ. ಈ ದುರಂತದ ಜವಾಬ್ದಾರರು ಯಾರು ಎಂದೊಡನೆ ತಕ್ಷಣದಲ್ಲಿ ಎಲ್ಲರ ತೋರುಬೆರಳು ಶಿಕ್ಷಕರತ್ತ ಮುಖ ಮಾಡುತ್ತದೆ. ಎಂದರೆ ಮಾಡದ ತಪ್ಪಿಗೆ ಸುಲಭವಾಗಿಯೇ ಶಿಕ್ಷಕರ ಮೇಲೆ ಆರೋಪಿಸಲಾಗುತ್ತಿದೆ. ಇದು ಪ್ರಾಥಮಿಕ ದಿಂದ ಪದವಿಗಳ ವರೆಗಿನ ಶಿಕ್ಷಣ ಸಂಸ್ಥೆಗಳಿಗೂ ಅನ್ವಯ ಎಂಬುದನ್ನು ಪ್ರತ್ಯೇಕವಾಗಿ ಹೇಳ ಬೇಕಾಗಿಲ್ಲ.
ಇಂದು ಶಾಲಾ ಕಾಲೇಜುಗಳಿಗೆ ಹೋದರೆ ಅಲ್ಲಿ ಪೂರ್ಣ ಪ್ರಮಾಣದ ಶಿಕ್ಷಕರು ನೇಮಕದಲ್ಲಿದ್ದರೂ ಕರ್ತವ್ಯದಲ್ಲಿರುವುದಿಲ್ಲ. ಕೆಲವರಿಗೆ ಬೇರೆ ಶಾಲೆಗೆ ವಾರದ ಕೆಲವು ದಿನಗಳಿಗೆ ನಿಯೋಜನೆ ಆಗಿರುತ್ತದೆ. ಒಬ್ಬರು ತರಬೇತಿಗೆ ಹೋಗಿರುತ್ತಾರೆ. ಇಲಾಖಾ ಸಭೆಯಲ್ಲಿರುತ್ತಾರೆ, ಶಾಲೆಗೆ ಗೈರಾಗುವ ಮಗುವನ್ನು ತರಲು ಮನೆ ಭೇಟಿಯಲ್ಲಿದ್ದಾರೆ, ಸ್ಪರ್ಧೆಗೆ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ, ಕಂಪ್ಯೂಟರ್ ಫೀಡಿಂಗ್‌ಗಾಗಿ ಸೈಬರ್‌ಗೆ ಹೋಗಿದ್ದಾರೆ. ಕೆಲವು ಕೆಲಸಗಳಿಗೆ ಒಬ್ಬರು ಸಾಲದೆ ಒಬ್ಬರಿಗಿಂತ ಹೆಚ್ಚು ಮಂದಿಯೂ ಹೋಗಿರುತ್ತಾರೆ. ಒಬ್ಬರೇ ಇರುವ ಶಾಲೆಗಳಲ್ಲಿ ಗೌರವ ಶಿಕ್ಷಕರು ಅಥವಾ ಬಿಸಿ ಊಟದವರು ಮಕ್ಕಳನ್ನು ಸಂಭಾಳಿಸುವುದೂ ಇದೆ. ಕೆಲವು ತರಗತಿಗಳು ಶಿಕ್ಷಕರಿಲ್ಲದೆ ಗಲಭೆಯ ಸಂತೆಯಾಗುವುದೂ ಇದೆ. ನಮ್ಮ ಶೈಕ್ಷಣಿಕ ಆಶಯಗಳು ಪೂರ್ಣಶಃ ಫಲಪ್ರಾಪ್ತವಾಗಲು ಶಿಕ್ಷಕರು ತರಗತಿಗಳಲ್ಲೇ ಇರುವಂತಹ ವ್ಯವಸ್ಥೆ ಆಗಬೇಕು. ಅವರಿಗೆ ಅನ್ಯ ಹೊರೆಗಳು ಇರಬಾರದು.
ಮಕ್ಕಳ ದಾಖಲಾತಿಗೆ ಪೂರಕವಾಗಿ ಪ್ರಾಥಮಿಕ ಶಾಲೆಗಳ ಶಿಕ್ಷಕರು ವರ್ಷದ ಮೂರು ದಿನ ಮನೆ ಭೇಟಿಯ ಮೂಲಕ ಗಣತಿ ಮಾಡುತ್ತಿದ್ದರು, ಇದು ಶಿಕ್ಷಕರು ಮಾಡಲೇ ಬೇಕಾದ ಕೆಲಸ. ಆ ದಿನಗಳು ಶಾಲಾ ಕೆಲಸದ ದಿನಗಳಾದರೂ ಶಾಲೆಗಳಿಗೆ ರಜೆಯಿರುತ್ತದೆ. ಅದೇ ರೀತಿ ಶಿಕ್ಷಣದ ಗುಣ ವರ್ಧನೆಗೆ ಶಿಕ್ಷಕರ ವಿಷಯ ಪಾಂಡಿತ್ಯ, ಬೋಧನಾ ತಂತ್ರಗಳ ಸುಧಾರಣೆ ಅತೀ ಅಗತ್ಯ. ಹಾಗಾಗಿ ಅಂತಹ ತರಬೇತುಗಳಿಗೆ ಹಾಜರಾಗುವುದು ಔಚಿತ್ಯಪೂರ್ಣವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಬೋಧನಾ ವ್ಯವಸ್ಥೆ ಜೀವಂತವಾಗಿರಬೇಕು. ಒಬ್ಬರು ತರಬೇತಿಗೆ ಹೋದಾಗ ಎರಡು ತರಗತಿಗಳನ್ನು ಜಂಟಿಯಾಗಿ ನಡೆಸುತ್ತಾರೆ. ಆದರೆ ಇದರಿಂದ ಎರಡೂ ತರಗತಿಗಳ ಕಲಿಕೆಗೆ ತಡೆಯಾಗುತ್ತದೆ. ಅದಕ್ಕಾಗಿ ಶಿಕ್ಷಕರು ತರಗತಿಯಿಂದ ಅನಿವಾರ್ಯವಾಗಿ ಹೊರಗಡೆ ಹೋದಾಗ ಅಲ್ಲಿಗೆ ಸಂಚಾರಿ ಶಿಕ್ಷಕರ ನೇಮಕದ ಅಗತ್ಯವಿದೆ.
ಚುನಾವಣೆಗಳು ಪ್ರಜಾಪ್ರಭುತ್ವದಲ್ಲಿ ಅನಿವಾರ್ಯವಾದ ಪ್ರಕ್ರಿಯೆ. ಬೇರೆ ಬೇರೆ ಸ್ಥರಗಳಲ್ಲಿ ಚುನಾವಣೆಗಳು ನಡೆಯುತ್ತಲೇ ಇರುತ್ತವೆ. ವರ್ಷದಲ್ಲಿ ಚುನಾವಣಾ ತರಬೇತಿ, ಎಣಿಕೆ ಕರ್ತವ್ಯದ ತರಬೇತಿ, ಚುನಾವಣಾ ಪ್ರಕ್ರಿಯೆಗಳಿಗಾಗಿ ಒಂದೆರಡು ದಿನ ಹೀಗೆ ಒಟ್ಟು ಐದಾರು ದಿನಗಳು ಚುನಾವಣಾ ಕತವ್ಯಕ್ಕಾಗಿ ಶಿಕ್ಷಕರು ತರಗತಿಯಿಂದ ಹೊರಗುಳಿಯ ಬೇಕಾಗುತ್ತದೆ. ಆದುದರಿಂದ ಚುನಾವಣೆಗಳನ್ನು ತರಗತಿಗಳಿಗೆ ತೊಂದರೆಯಾಗದಂತೆ ನಿರ್ವಹಿಸುವ ಏರ್ಪಾಡುಗಳಾದರೆ ತರಗತಿ ಬೋಧನೆ ಸುಲಲಿತವಾಗಿ ನಡೆಯುತ್ತದೆ. ಮಕ್ಕಳ ಕಲಿಕೆಗೆ ತಡೆಯಾಗದು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಮುತುವರ್ಜಿಯಿಂದ ಕಾರ್ಯತತ್ಪರವಾಗಬೇಕು. ಪ್ರತಿಯೊಂದು ಇಲಾಖೆಯೂ ಅವರ ಪಾಲಿನ ಕರ್ತವ್ಯವನ್ನು ಪೂರೈಸುವ ಹಂತದಲ್ಲಿ ಶಿಕ್ಷಣ ಇಲಾಖೆಯ ಸಹಯೋಗ ಪಡೆಯುವ ಅನಿವಾರ್ಯ ಬಂದಾಗ ಶಿಕ್ಷಣ ಕ್ಷೇತ್ರದ ಕರ್ತವ್ಯಕ್ಕೆ ಲೋಪ ಬಾರದಂತೆ ಎಚ್ಚರಿಕೆಯಿಂದಿರಬೇಕಾದುದು ಅನಿವಾರ್ಯ.
ಬೇಸಗೆ ಮತ್ತು ಮಧ್ಯಂತರ ರಜೆ ಹೊರತಾಗಿ ಶಿಕ್ಷಕರಿಗೆ ವರ್ಷದಲ್ಲಿ ಬರುವ ಬೇರೆ ಬೇರೆ ರಜೆಗಳು ಒಟ್ಟು ಇಪ್ಪತ್ತೇಳು. ಇದರಲ್ಲಿ ಹತ್ತುದಿನಗಳ ರಜೆಯನ್ನು ಒಪ್ಪಿಸಿ ನಗದು ಪಡೆಯುವ ಅವಕಾಶವಿದೆ. ಆದರೆ ನಿರ್ಬಂಧಿತ ಮತ್ತು ಆಕಸ್ಮಿಕ ರಜೆಗಳು ಮಕ್ಕಳ ಕಲಿಕೆಗೆ ತೊಂದರೆ ನೀಡಬಹುದಾಗಿದ್ದು ಮಕ್ಕಳ ಶೈಕ್ಷಣಿಕ ಚಟುವಟಿಗೆಗಳು ನಿರಂತರವಾಗಲು ಪ್ರತಿಯೊಂದು ಶಾಲೆಗೂ ರಜಾ ಕಾಲದ ಶಿಕ್ಷಕರ ನೇಮಕವಾಗಬೇಕಾಗಿದೆ. ಹೆರಿಗೆ ರಜೆ, ಪಿತೃತ್ವ ರಜೆಗಳು, ಹುಚ್ಚು ನಾಯಿ ಕಡಿತವಾದರೆ ಕೊಡುವ ರಜೆ, ಅನಿವಾರ್ಯವಾದ ವೇತನ ರಹಿತ ರಜೆ, ಜಾಗತಿಕ ಸಾಂಕ್ರಾಮಿಕ ರೋಗಗಳಿಗೆ ನೀಡುವ ವಿಶೇಷ ರಜೆ ಇತ್ಯಾದಿಗಳನ್ನು ಸೇವಾಕಾಲದಲ್ಲಿ ಶಿಕ್ಷಕರು ಪಡೆಯುವ ಸನ್ನಿವೇಷಗಳಿರುತ್ತವೆ. ಈ ಸೌಲಭ್ಯಗಳನ್ನು ಶಿಕ್ಷಕರಿಗೆ ನಿರಾಕರಿಸುವಂತಿಲ್ಲ. ಇಂತಹ ರಜೆ ಪಡೆದ ಶಿಕ್ಷಕರ ಜಾಗದಲ್ಲಿ ರಜಾ ಕಾಲದ ಶಿಕ್ಷಕರು ತಮ್ಮ ಸೇವೆಯನ್ನು ನೀಡುವಂತಾಗಬೇಕು.
ಮನೆಗಣತಿ, ಜನಗಣತಿ, ಜಾತಿ ಗಣತಿ, ಮತದಾರರ ಯಾದಿ ಪರಿಷ್ಕರಣೆ, ಖಾಯಂ ಮತಗಟ್ಟೆ ಅಧಿಕಾರಿ, ಪಶುಗಣತಿ, ಕೋಳಿ ಗಣತಿ ಮುಂತಾದ ಗಣತಿಗಳಿಗೆ ಶಿಕ್ಷಕರನ್ನು ನೇಮಿಸುವ ಪರಿಪಾಟ ಇಂದು ನಿನ್ನೆಯದಲ್ಲ. ರಜಾ ಕಾಲದಲ್ಲೇ ಮಾಡಿದರೂ ಈ ಕೆಲಸಗಳು ಶಿಕ್ಷಕರಿಗೆ ಹೊರೆ. ಈ ಹೊರೆಯ ಹೊಡೆತ ವಿದ್ಯಾರ್ಥಿಗಳ ಮೇಲೂ ಬೀಳುತ್ತದೆ. ಈ ಕೆಲಸಗಳು ಶಿಕ್ಷಕರ ಮನೋಗತಿಗೆ ಪೂರಕವಲ್ಲ. ಅಂಕಿ ಅಂಶ ಸಂಗ್ರಹಿಸುವ ಮತ್ತು ಕಡತ ನಿರ್ವಹಣಾ ಕೆಲಸ ಶಿಕ್ಷಕರಿಗೆ ಒಗ್ಗದು. ಅವರು ಏನಿದ್ದರೂ ಮನಸ್ಸುಗಳ ಜೊತೆ ಮಾತನಾಡುವವರು. ಮನಸ್ಸುಗಳನ್ನು ಕಟ್ಟುವವರು ಮತ್ತು ಬೆಳೆಸುವವರು. ಮುಂದಿನ ಶೈಕ್ಷಣಿಕ ಸಾಲಿನ ಯೋಜನೆಗಳು, ಅದಕ್ಕೆ ಪೂರಕವಾಗಿ ನಾನಾ ತಂತ್ರಗಳನ್ನು ರಚಿಸಲು ಶಿಕ್ಷಕರ ರಜಾ ಕಾಲದ ಬಳಕೆಯಾದರೆ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಬೆಳೆಯಲು ಮತ್ತು ದೇಶದ ಭಾವೀ ಸಂಪನ್ಮೂಲಗಳಾಗಿ ಬಲಿಯಲು ಸಾಧ್ಯವಾಗುವುದು. ಅನ್ಯಕೆಲಸದಲ್ಲೇ ರಜಾ ಕಾಲವನ್ನು ಶಿಕ್ಷಕರು ವ್ಯಯಿಸುವಂತಾದರೆ ಶೈಕ್ಷಣಿಕವಾದ ಸಾಧನೆಗೆ ಕೊಡಲಿಯೇಟು ನೀಡಿದಂತಾಗುತ್ತದೆ. ಆದುದರಿಂದ ಶಿಕ್ಷಕರನ್ನು ಶಿಕ್ಷಣೇತರ ಕರ್ತವ್ಯದಲ್ಲಿ ನೇಮಿಸಿದರೆ ವಿದ್ಯಾರ್ಥಿಗಳಿಗೆ ಅನ್ಯಾಯ ಮತ್ತು ತನ್ಮೂಲಕ ದೇಶಕ್ಕೇ ಅಹಿತ.
ಇತ್ತೀಚೆಗೆ ಶಾಲೆಗೆ ಹೋದಾಗ ಶಿಕ್ಷಕರು ಫೀಡಿಂಗ್ ನಲ್ಲಿದ್ದಾರೆಂದು ಹೇಳುವುದು ನಿತ್ಯ ವೃತ್ತಾಂತವಾಗಿದೆ. ಗಂಡಸರೂ ಫಿಡಿಂಗ್‌ನಲ್ಲಿದ್ದಾರೆ ಎಂದಾಗ ಆಶ್ಚರ್ಯವಾಗಿ ಕೇಳಿಯೇ ಬಿಟ್ಟೆ, ಅವರೂ ಹೆತ್ತಿದ್ದಾರೆಯೆ? ನನ್ನ ಪ್ರಶ್ನೆ ದಡ್ಡತನದ್ದೆಂದು ತಿಳಿಯಲು ಹೆಚ್ಚೇನೂ ಸಮಯ ಬೇಕಾಗಲಿಲ್ಲ. ಬಿಸಿ ಊಟ ಪಡೆದ ಮತ್ತು ಪಡೆಯದ ಮಕ್ಕಳ ಸಂಖ್ಯೆ ದಿನಾ ಓನ್ ಲೈನ್ ಫೀಡಿಂಗ್ ಆಗಬೇಕು. ಮಕ್ಕಳ ಹಾಜರಾತಿಗಳು ಫೀಡಿಂಗ್ ಆಗುತ್ತಾ ಇರಬೇಕು. ಪರೀಕ್ಷೆಯ ಅಂಕಗಳು, ಗೈರು ಹಾಜರಾಗುವವರ ವಿವರ, ವರ್ಗಾವಣೆ ಪತ್ರಗಳ ಓನ್ ಲೈನ್ ನೀಡಿಕೆ, ಮಕ್ಕಳ ಆಧಾರ ಶಂಖ್ಯೆ ವಿವರ, ಪಡಿತರ ಚೀಟಿ ವಿವರ, ವಿದ್ಯಾರ್ಥಿ ವೇತನ ವಿವರ, ವಿದ್ಯಾಥೀವೇತನ ಅರ್ಜಿ ಪರಿಶೀಲನೆ ಹೀಗೆ ಶಿಕ್ಷಕರಿಗೆ ಒಂದು ಹೊಸ ಉದ್ಯೋಗವೇ ದೊರೆತು ಬೋಧನೆ ತೆರೆಗೆ ಸರಿಯುತ್ತಿದೆಯೋ ಎಂಬ ಭಯ ಎಲ್ಲರೊಳಗೂ ಇದೆ. ಪಠ್ಯಪುಸ್ತಕ ಕಂತು ಕಂತುಗಳಾಗಿ ಸರಬರಾಜಾಗುತ್ತದೆ. ಸಮವಸ್ತ್ರಗಳ ಗತಿಯೂ ಇದೇ. ಶಿಕ್ಷಕರು ಇದರ ಸ್ವೀಕೃತಿಗಾಗಿ ತಾಲೂಕು ಕೇಂದ್ರಗಳಿಗೆ ಓಡಾಟ ಮಾಡಬೇಕು. ಇದೂ ಅನ್ಯ ಕೆಲಸವೇ. ಇಲಾಖೆಗೆ ಸಂಬಂಧಿಸಿದ ಕೆಲಸಗಳಾದರೂ ಕಾರ್ಯಭಾರದ ಹೆಚ್ಚಳ, ತರಗತಿ ಬೋಧನೆಯನ್ನು ತೊಡಕಿಗೊಳಪಡಿಸುವುದಿಲ್ಲವೇ? ಇದಕ್ಕಾಗಿ ಅಂಕಿಅಂಶಗಳ ನಿರ್ವಹಣೆಗೆ ಗುಮಾಸ್ತರುಗಳನ್ನು ಎಲ್ಲಾ ಶಾಲೆಗಳೂ ಹೊಂದಿರಲೇ ಬೇಕು. ಗುಣ ಮಟ್ಟದ ಶಿಕ್ಷಣಕ್ಕೆ ಅರ್ಥ ಬರುವಂತಾಗಲು ಶಿಕ್ಷಕರು ಬೋಧನೆಯಿಂದ ಹೊರಗಿರಬಾರದು. ಸಕಲ ಸೌಲಭ್ಯ ಒದಗಿಸಿದಾಗಲೂ ಮಕ್ಕಳ ಕಲಿಕಾ ಗುಣ ಮಟ್ಟದಲ್ಲಿ ಲೋಪಗಳಿದ್ದರೆ ಅಂತಹ ಬೆರಳೆಣಿಕೆಯಷ್ಟಿರ ಬಹುದಾದ ಶಿಕ್ಷಕರಿಗೆ ಖಡ್ಡಾಯ ನಿವೃತ್ತಿ ನೀಡಿದರೂ ತಪ್ಪಾಗದು.
ಕೆಲವು ಪ್ರದೇಶಗಳ ಪ್ರಭಾವಿಗಳು ಶಿಕ್ಷಕರ ನೇಮಕದ ಬಗ್ಗೆ ಇಲಾಖೆಗೆ ಒತ್ತಡ ತರುವುದಿದೆ. ಆ ಶಾಲೆಯಲ್ಲಿ ಹುದ್ದೆ ತೆರವಿರ ಬಹುದು ಯಾ ತೆರವಿರದೇ ಇರಬಹುದು. ಅಂತಹ ಸಂದರ್ಭಗಳಲ್ಲಿ ಹಳ್ಳಿ ಶಾಲೆಗಳಿಂದಲೇ ಶಿಕ್ಷಕರನ್ನು ನಿಯೋಜಿಸುವ ಪರಿಪಾಟ ಇಲಾಖೆಯೊಳಗಿದೆ. ಆಡಳಿತಾತ್ಮಕ ವ್ಯವಸ್ಥೆಯೊಳಗೆ ಇದು ಅನಿವಾರ್ಯವಾಗಿರುವುದಾರೂ ಇಂತಹ ಸಂದರ್ಭಗಳಿಗಾಗಿ ಹೆಚ್ಚುವರಿ ಶಿಕ್ಷಕರು ಇಲಾಖೆಯಲ್ಲಿದ್ದರೆ ಉತ್ತಮ. ನಿಯೋಜಿತ ಶಾಲೆಯಲ್ಲಿ ನಿಯೋಜಿತ ಶಿಕ್ಷಕರಿಂದ ಪ್ರಾಮಾಣಿಕ ಸೇವೆಯನ್ನು ನಿರೀಕ್ಷಿಸುವಂತಿಲ್ಲ. ಅವರು ಬದುಕಿನ ಯಾವುದೋ ಒಂದು ವ್ಯವಸ್ಥೆಯೊಳಗಿರುತ್ತಾರೆ. ದಿಢೀರಾದ ನಿಯೋಜನೆ ಅವರ ಮನೋ ಇಚ್ಚೆಗೆ ವಿರುದ್ಧವಾಗುವುದು ಸಹಜ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಶಿಕ್ಷಕರಿಗೆ ನಿಯೋಜಿತ ಸಂಸ್ಥೆಯು ಅನ್ಯ ಸಂಸ್ಥೆಯಾಗುತ್ತದೆಯೇ ಹೊರತು ಮಾತೃ ಸಂಸ್ಥೆ ಎಂಬ ಭಾವನೆ ಬರಲು ಸಮಯ ಹಿಡಿಯುತ್ತದೆ. ಶಿಕ್ಷಕರ ಭಡ್ತಿ, ವರ್ಗಾವಣೆ, ನಿಯೋಜನೆಗಳು ಎಲ್ಲವೂ ಶೈಕ್ಷಣಿಕ ವರ್ಷದ ಕೊನೆಯ ವಾರದಲ್ಲೇ ಮುಗಿದರೆ ಹೋದ ಕಾರ್ಯಕ್ಷೇತ್ರದಲ್ಲಿ ಸರಿಯಾದ ಸಿದ್ಧತೆಯೊಂದಿಗೆ ಕರ್ತವ್ಯ ನಡೆಸಲು ಶಿಕ್ಷಕರಿಗೆ ಅನುಕೂಲವಾಗುತ್ತದೆ.
ಆದುದರಿಂದ ಶಿಕ್ಷಕರನ್ನು ಅನ್ಯ ಕೆಲಸಗಳಿಂದ ಮುಕ್ತಗೊಳಿಸಿ ಮಕ್ಕಳ ಕಲಿಕಾ ಚಟುವಟಿಕೆಗಳಿಗೆ ಮಾತ್ರವೇ ಕಾಯ್ದಿರಿಸಬೇಕು. ಮಕ್ಕಳ ಗಣತಿ, ರಜಾಕಾಲದಲ್ಲಿ ನಡೆಯುವ ಚುನಾವಣೆ, ಶೈಕ್ಷಣಿಕ ತರಬೇತುಗಳಿಗೆ ಹೊರತಾದ ಯಾವುದೇ ಹೊರೆಗಳು ನಮ್ಮ ಶಿಕ್ಷಣದ ಆಶಯವನ್ನು ಈಡೇರಿಸಲಾರವು. ಪೂರ್ಣ ಪ್ರಮಾಣದ ನೇಮಕಾತಿ, ಮೂಲ ಭೂತ ಸೌಕರ್ಯಗಳು ಮತ್ತಿತರ ಬೇಕುಗಳನ್ನು ಪೂರೈಸಲು ಹಣಕಾಸನ್ನು ಜೋಡಿಸಲು ವಾರ್ಷಿಕ ಮುಂಗಡ ಪತ್ರದಲ್ಲಿ ಅನುರೂಪೀ ಅನುದಾನವನ್ನೂ ಒದಗಿಸ ಬೇಕು.

ಲೇ: ರಮೇಶ ಎಂ ಬಾಯಾರು ಎಂ.ಎ. ಬಿ.ಎಡ್.
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು
’ನಂದನ’ ಕೇಪು

 

More articles

Latest article