Tuesday, October 24, 2023

ಮೇನೇಜರ್ ಇಲ್ಲದ ಪುಣಚ ಅಜ್ಜಿನಡ್ಕ ರಾಷ್ಟ್ರೀಕೃತ ಬ್ಯಾಂಕ್: ಸಮಸ್ಯೆ ಪರಿಹಾರಕ್ಕೆ ನಾಗರಿಕ ಹಿತ ರಕ್ಷಣಾ ಸಮಿತಿ ಆಗ್ರಹ

Must read

ವಿಟ್ಲ: ಪುಣಚ ಗ್ರಾಮದಲ್ಲಿ ಕಳೆದ 37 ವರ್ಷಗಳಿಂದ ಗ್ರಾಹಕರಿಗೆ ಸೇವೆ ನೀಡುತ್ತಿದ್ದ ಅಜ್ಜಿನಡ್ಕ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕಳೆದ ಒಂದು ತಿಂಗಳಿಂದೀಚೆ ಮೆನೇಜರ್ ಇಲ್ಲದೇ ಇರುವುದು, ಸಿಬ್ಬಂದಿಗಳು ಉದ್ಧಟತನದಿಂದ ವರ್ತಿಸುತ್ತಿದ್ದು, ಖಾತೆದಾರರು ಸಂಕಷ್ಟ ಅನುಭವಿಸುತ್ತಿದ್ದು, ಸಂಬಂಧಪಟ್ಟವರಲ್ಲಿ ಈ ಬಗ್ಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಇಲ್ಲಿಗೆ ಮೇನೇಜರ್ ಸಹಿತ ಸಿಬ್ಬಂದಿಗಳನ್ನು ನಿಯುಕ್ತಿಗೊಳಿಸಬೇಕೆಂದು ಪುಣಚ ನಾಗರಿಕ ಹಿತ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಗುರುವಾರ ವಿಟ್ಲ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷ ಕಲಂದರ್ ಶಾಫಿ 10 ಸಾವಿರಕ್ಕಿಂತಲೂ ಅಧಿಕ ಖಾತೆದಾರರನ್ನು ಹೊಂದಿರುವ ಬ್ಯಾಂಕ್‌ನಲ್ಲಿ ಸಹಸ್ರಾರು ಕೋಟಿ ವ್ಯವಹಾರ ನಡೆಯುತ್ತಿದೆ. ಬ್ಯಾಂಕ್‌ನಲ್ಲಿ ಈಗ ಕೇವಲ ಒಬ್ಬರು ಕ್ಯಾಷಿಯರ್ ಹಾಗೂ ಒಬ್ಬರು ಆಫೀಸರ್‍ಸ್ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬ್ಯಾಂಕ್‌ಗೆ ಬರುವ ಗ್ರಾಮೀಣ ಪ್ರದೇಶದ ಅನಕ್ಷರಸ್ಥರಿಗೆ ಬ್ಯಾಂಕ್ ವತಿಯಿಂದ ಯಾವುದೇ ಅರ್ಜಿ ಫಾರಂ ತುಂಬಿಸಲು ಸಹಕರಿಸುತ್ತಿಲ್ಲ. ವಾರದ ಎರಡು ದಿನಗಳು ಮಾತ್ರ ಎಟಿಎಂನಲ್ಲಿ ಹಣ ಪಡೆಯಲು ಸಾಧ್ಯವಾಗುತ್ತಿದ್ದು, ಸರಿಯಾದ ಭದ್ರತೆಯೂ ಇರುವುದಿಲ್ಲ. ಮೇನೇಜರ್, ಸಿಬ್ಬಂದಿಗಳಿಲ್ಲದೇ ಸೊರಗುತ್ತಿರುವ ಹೆಚ್ಚು ವ್ಯವಹಾರವುಳ್ಳ ಗ್ರಾಮೀಣ ಪ್ರದೇಶದ ಬ್ಯಾಂಕ್ ಪುನಶ್ಚೇತನದ ಬಗ್ಗೆ ಸಂಸದರಿಗೆ, ಆರ್‌ಬಿಐ, ಪಿಎಂಒ, ಕೆನರಾ ಬ್ಯಾಂಕ್ ಜಿಎಂ, ಕೆನರಾ ಬ್ಯಾಂಕ್ ಕಸ್ಟಮರ್‍ಸ್ ಕೇರ್‌ಗೆ ಅಹವಾಲು ಸಲ್ಲಿಸಿದರೂ ಯಾವುದೇ ರೀತಿಯ ಸ್ಪಂದನೆ ನೀಡಿಲ್ಲ. ಬ್ಯಾಂಕಿನ ರೀಜನಲ್ ಆಫೀಸರ್‍ಸ್‌ನಲ್ಲಿ ವಿಚಾರಿಸಿದರೂ ನಿರ್ಲಕ್ಷ್ಯದಿಂದ ಉತ್ತರಿಸುತ್ತಿದ್ದಾರೆ. ಗ್ರಾಮ ಹಾಗೂ ಸುತ್ತಮುತ್ತಲಿನ ನಾಲ್ಕಾರು ಗ್ರಾಮಗಳ ಖಾತೆದಾರರು ಬವಣೆ ಪಡುವಂತಾಗಿದೆ. ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಶಾಖೆಯ ಬಾಗಿಲು ತೆರೆಯದಂತೆ ಮುತ್ತಿಗೆ ಹಾಕಲಾಗುವುದು, ರೀಜನಲ್ ಕಚೇರಿಯ ಮುಂದೆ ಬೇಡಿಕೆ ಈಡೇರಿಸುವ ತನಕ ಧರಣಿ ಕುಳಿತುಕೊಳ್ಳಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ನಾಗರಿಕ ಹಿತ ರಕ್ಷಣಾ ಸಮಿತಿ ಕಾರ್ಯದರ್ಶಿ ವೆಂಕಟ್ರಮಣ ನಾಯಕ್ ಆಜೇರು ಉಪಸ್ಥಿತರಿದ್ದರು.

 

More articles

Latest article