ಬಂಟ್ವಾಳ: ತೋಟಗಾರಿಕಾ ಇಲಾಖೆಯ ನೀರಾ ಘಟಕವನ್ನು ಪುನರಾರಂಭ ಮಾಡುವುದಕ್ಕಿಂತಲೂ ಮುಖ್ಯವಾಗಿ ಘಟಕದ ಕಾರ್ಯಾಚರಣೆಗೆ ತೆಂಗಿನ ಮರ ಹತ್ತಿ ಮೂರ್ತೆ ಮಾಡಲು ಯುವಕರಿಗೆ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ತೋಟಗಾರಿಕಾ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಅವರು ಬಂಟ್ವಾಳ ತಾ.ಪಂ.ಎಸ್‌ಜಿಎಸ್‌ವೈ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯ ಆರಂಭದಲ್ಲೇ ನೀರಾ ಘಟಕದ ಕಾರ್ಯಾಚರಣೆ ಸ್ಥಗಿತಗೊಂಡಿರುವ ಕುರಿತು ಜಿ.ಪಂ. ತುಂಗಪ್ಪ ಬಂಗೇರ ಅವರು ಸಭೆಯ ಗಮನಕ್ಕೆ ತಂದರು. ಇದಕ್ಕೆ ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಧ್ವನಿಗೂಡಿಸಿದರು. ನೀರಾ ಘಟಕದ ಯಂತ್ರೋಪಕರಣಗಳು ಹಳೆಯದಾಗಿದ್ದು, ಹೀಗಾಗಿ ಮುಂದೆ ಅವುಗಳ ಕಾರ್ಯಾಚರಣೆ ಅಸಾಧ್ಯ. ಯುವಕರನ್ನು ತರಬೇತುಗೊಳಿಸಿ ಘಟಕ ಆರಂಭಿಸಲು ಅಧಿಕಾರಿ ಪ್ರದೀಪ್ ಡಿಸೋಜಾ ಅವರಿಗೆ ಶಾಸಕರು ಸೂಚಿಸಿದರು.

* ಸುರಿಬೈಲು ಶಾಲೆಗೆ ಕಟ್ಟಡಕ್ಕೆ ಅನುದಾನವಿಲ್ಲದೆ ಟೆಂಡರ್ ಆಗಿರುವ ಕುರಿತು ಜಿ.ಪಂ.ಸದಸ್ಯ ಎಂ.ಎಸ್.ಮಹಮ್ಮದ್ ಅವರು ಆಕ್ರೋಶ ವ್ಯಕ್ತಪಡಿಸಿದರು. 5 ವರ್ಷ ಕಳೆದರೂ ಕಾಮಗಾರಿ ನಡೆಯದೆ ಜನರು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ ಎಂದರು. ಅದರ ಟೆಂಡರ್ ಕ್ಯಾನ್ಸಲ್ ಆಗಿದೆ ಎಂದು ಎಇಇ ತಾರಾನಾಥ್ ಸಾಲ್ಯಾನ್ ತಿಳಿಸಿದರು.
* ಜಾನುವಾರುಗಳಿಗೆ ಹಸಿರು ಮೇವಿನ ಬೆಳೆಯುವ ಕುರಿತು ತಾಲೂಕಿನಲ್ಲಿ ಎಎಂಆರ್ ಡ್ಯಾಂ ಮುಳುಗಡೆ ಭೂಮಿಯ ವಿವರ ನೀಡುವಂತೆ ಸರ್ವೇ ಇಲಾಖೆ ಅಧಿಕಾರಿಗಳಿಗೆ ಶಾಸಕ ರಾಜೇಶ್ ನಾಯ್ಕ್ ತಿಳಿಸಿದರು. ಹಡೀಲು ಭೂಮಿಯ ವಿವರ ನೀಡಲು ಶಾಸಕರು ಸೂಚಿಸಿದರು.

* ಬಂಟ್ವಾಳ ಮೆಸ್ಕಾಂನಲ್ಲಿ ಹಿಂದಿನ ವರ್ಷದ ಪ್ಯಾಕೇಜ್ ಬಾಕಿಯಾಗದೇ ಈಗ ಅನುದಾನ ಸಿಗುತ್ತಿಲ್ಲ ಎಂದು ಮೆಸ್ಕಾಂ ಎಂಜಿನಿಯರ್ ಅವರನ್ನು ಶಾಸಕರು ತರಾಟೆಗೆ ತೆಗೆದುಕೊಂಡರು. 30 ಕೋ.ರೂ.ಪ್ಯಾಕೇಜ್ ಬಾಕಿ ಇದ್ದು, ಡಿಸೆಂಬರ್ ಒಳಗೆ ಪೂರ್ತಿಗೊಳ್ಳಲಿದೆ ಎಂದು ಎಂಜಿನಿಯರ್ ತಿಳಿಸಿದರು.

* ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವ ಕುರಿತು ನಿರ್ಣಯ ತೆಗೆದುಕೊಳ್ಳಬೇಕು ಎಂದು ಜಿ.ಪಂ.ಸದಸ್ಯ ತುಂಗಪ್ಪ ಬಂಗೇರ ಆಗ್ರಹಿಸಿದರು. 

* ಜಿ.ಪಂ.ಸದಸ್ಯರ ಅನುದಾನ ನೀಡಲು ಆರ್‌ಡಿಪಿಆರ್ ಸಚಿವರಿಗೆ ಸೂಚಿಸಲು ಎಂ.ಎಸ್.ಮಹಮ್ಮದ್ ಮನವಿ ಮಾಡಿದರು.

* ಅಂತ್ಯಸಂಸ್ಕಾರದ ಅನುದಾನ ಬಿಡುಗಡೆಗೊಳಿಸಲು ಜಿ.ಪಂ.ಸದಸ್ಯೆ ಮಂಜುಳಾ ಮಾಧವ ಮಾವೆ ಮನವಿ ಮಾಡಿದರು.

* ತಾಲೂಕಿಗೆ ಅನುದಾನ ಬಂದಂತೆ ಅಂತ್ಯಸಂಸ್ಕಾರ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು, ಮುಂದೆ ಅನುದಾನ ಬಂದಾಗ ಇತರ ಫಲಾನುಭವಿಗಳಿಗೆ ಸಹಾಯಧನ ನೀಡಲಾಗುವುದು ಎಂದು ಬಂಟ್ವಾಳ ತಹಶೀಲ್ದಾರ್‍ ರಶ್ಮಿ ಎಸ್.ಆರ್‍. ಹೇಳಿದರು.

* ಬಂಟ್ವಾಳ ಮಿನಿ ವಿಧಾನಸೌಧದ ಸೋರುತ್ತಿರುವ ಕುರಿತು ತನಿಖೆ ನಡೆಸಲು ತುಂಗಪ್ಪ ಬಂಗೇರ ಅವರ ಸಭೆಯ ಗಮನಕ್ಕೆ ತಂದರು.

ಜಿಲ್ಲಾ ಪಂಚಾಯತ್ ಸದಸ್ಯರಾದ ರವೀಂದ್ರ ಕಂಬಳಿ, ಕಮಲಾಕ್ಷಿ ಪೂಜಾರಿ, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಇಒ ರಾಜಣ್ಣ, ಕೆಡಿಪಿ ನಾಮನಿರ್ದೇಶಿತ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here