Tuesday, October 17, 2023

’ಅತಿರೇಕದ ಆಚರಣೆಗಳಿಂದ ಅನಾಹುತ’-ಮಾಣಿಲಶ್ರೀ

Must read

ವಿಟ್ಲ: ಮಾನವೀಯ ಮೌಲ್ಯ, ಮಾನವೀಯ ಸಂಬಂಧಗಳು ಅರ್ಥ ಕಳೆದುಕೊಂಡಾಗ ಸಾಮಾಜಿಕ ವಿಪ್ಲವಗಳು ಸಂಭವಿಸುತ್ತವೆ. ಸಾತ್ವಿಕ ಆಚರಣೆಗಳನ್ನು ಬಿಟ್ಟು, ಅತಿರೇಕದ ಆಚರಣೆಗಳು ಮೇರೆ ಮೀರಿದಾಗ ನಮಗರಿವಿಲ್ಲದೇ ಅನಾಹುತಗಳು ಘಟಿಸುತ್ತವೆ ಎಂದು ಮಾಣಿಲ ಶ್ರೀಧಾಮ ಶ್ರೀಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ನುಡಿದರು.

ಅವರು ಸೋಮವಾರ ಶ್ರೀಧಾಮದಲ್ಲಿ ನಡೆದ ೨೧ನೇ ವರ್ಷದ ಶ್ರೀ ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ದೇಶದ ಮಣ್ಣಿನ ಕಣಗಳಲ್ಲಿರುವ ಭಾವನಾತ್ಮಕ ಮೌಲ್ಯಗಳನ್ನು ಸಕಲ ಜೀವ ರಾಶಿಯಲ್ಲಿ ಕಾಣುವ ಕಾರ್ಯ ಪ್ರತಿಯೊಬ್ಬರಿಂದ ನಡೆಯ ಬೇಕು. ಗ್ರಾಮೀಣ ಪ್ರದೇಶದಲ್ಲಿ ಹಿಂದುಳಿದ ವರ್ಗದಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಬೇಕು. ಧಾರ್ಮಿಕ ವಿಚಾರಗಳನ್ನು ಸಮಾಜಕ್ಕೆ ಪಸರಿಸುವಲ್ಲಿ ಮಠಮಂದಿರಗಳ ಪಾತ್ರ ದೊಡ್ಡದಾಗಿದೆ. ಮುಂದಿನ ವರ್ಷದ ಫೆಬ್ರವರಿಯಲ್ಲಿ ನಡೆಯುವ ಕ್ಷೇತ್ರದ ನಿರ್ಮಾಣದ ಬೆಳ್ಳಿ ವರ್ಷಾಚರಣೆಯ ಸಂದರ್ಭದಲ್ಲಿ ಇಪ್ಪತ್ತೈದು ನವ ವಧುವರ ಜೋಡಿಗಳಿಗೆ ಉಚಿತ ಸಾಮೂಹಿಕ ವಿವಾಹ ನಡೆಸುವ ಯೋಜನೆಯಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪ್ರತಿಭಾನ್ವಿತ ಗ್ರಾಮೀಣ ಚಿತ್ರಕಲಾವಿದೆ ದೀಕ್ಷಾ ಕಾಪಿಕಾಡು ಅವರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಧರ್ಮದರ್ಶಿ ದೇಜಪ್ಪ, ಮದ್ವಾಧೀಶ ವಿಠಲದಾಸ, ವಕೀಲ ಸುರೇಶ್ ನಾವೂರು, ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿಯ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಭಾಗವಹಿಸಿದ್ದರು.

ಶ್ರೀವಾಸುಕಿ ಸೇವಾಬಳಗದ ನಮಿತಾ, ಶ್ರೇಯಾ ಪ್ರಾರ್ಥಿಸಿದರು. ಟ್ರಸ್ಟಿ ತಾರಾನಾಥ ಆಳ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಬೆಳಗ್ಗೆ ಶ್ರೀಕ್ಷೇತ್ರದಲ್ಲಿ ಗಣಪತಿ ಹೋಮ ನಡೆದ ಬಳಿಕ ಪಂಚಾಮೃತಾಭಿಷೇಕ, ಶ್ರೀಕುಂಭೇಶ್ವರಿ ಪೂಜೆ, ಗೋನಿವಾಸ, ನಾಗದೇವರಿಗೆ ಅಭಿಷೇಕ, ನವಗ್ರಹ ಶಾಂತಿ ಹವನ, ದತ್ತ ಯಾಗ, ಧನ್ವಂತರಿ ಹೋಮ, ಚಂಡಿಕಾ ಹೋಮ ನಡೆಯಿತು. ಪೂಜ್ಯ ಶ್ರೀಗಳಿಂದ ಮಧುಕರಿ ಸೇವೆ, ಸ್ವರ್ಣಮಂತ್ರಾಕ್ಷತೆ ನಡೆದವು.

More articles

Latest article