Wednesday, April 10, 2024

ವಿದ್ಯಾಗಮಕ್ಕೆ ಬಂತು ಕುತ್ತು

ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳನ್ನು ಶಿಕ್ಷಣ ವಾಹಿನಿಯಲ್ಲಿ ಜೋಡಿಸಿಡಲು ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಅನುಷ್ಠಾನಕ್ಕೆ ತಂದ ಕಾರ್ಯಕ್ರಮವೇ ವಿದ್ಯಾಗಮ. ಸರಳವಾಗಿ ವಿವರಿಸುವುದಾದರೆ ಅದು ವಠಾರ ಶಾಲೆಯ ಕಲ್ಪನೆ ಆಧಾರಿತ. ಶಾಲೆಯನ್ನು ಹೊರತಾದ, ಸ್ಥಳಿಯ ಕೇಂದ್ರವೊಂದರಲ್ಲಿ ಆಯಾ ಕಲಿಕಾ ಹಂತದ ಮಕ್ಕಳು ಗುಂಪು ಸೇರಿ ಶಿಕ್ಷಕರ ಮಾರ್ಗದರ್ಶನ ಪಡೆದು ಪಠ್ಯಪುಸ್ತಕದ ಕಲಿಕೆಯಲ್ಲಿ ತೊಡಗಿಸಲು ಪ್ರೇರಣೆ ನೀಡುವ ನಿಟ್ಟಿನಲ್ಲಿ ವಿದ್ಯಾಗಮ ಯಶಸ್ವಿಯಾಗುತ್ತಾ ಸಾಗುತ್ತಿತ್ತು. ಸರಕಾರ ಮಕ್ಕಳವಾಣಿ ಎಂಬ ಕಾರ್ಯಕ್ರಮವನ್ನು ಜಾರಿಗೆ ತಂದು ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಲು ಕ್ರಮವಹಿಸಿತ್ತು. ಆದರೆ ವೀಕ್ಷಕರ ಕೊರತೆಯ ನೆಪದಲ್ಲಿ ಮಕ್ಕಳವಾಣಿ ಕಾರ್ಯಕ್ರಮ ಕೆಲವೇ ಸಂಚಿಕೆಗಳಲ್ಲಿ ತನ್ನ ಪ್ರಸಾರಕ್ಕೆ ಇತಿಶ್ರೀ ಹಾಡಿತು. ಆದರೆ ವಿದ್ಯಾಗಮಕ್ಕೆ ಹಳ್ಳಿ ಪ್ರದೇಶದ ಹೆತ್ತವರು ಉತ್ತಮವಾಗಿಯೇ ಸ್ಪಂದಿಸಿದರು, ಸ್ಪಂದಿಸುತ್ತಿದ್ದರು. ಅವರಿಂದ ಯಾವುದೇ ಋಣಾತ್ಮಕ ಅಭಿಪ್ರಾಯಗಳಾಗಲೀ, ವಿರೋಧಗಳಾಗಲೀ ವ್ಯಕ್ತವಾಲೇ ಇಲ್ಲ. ಹೆತ್ತವರು ವಿದ್ಯಾಗಮ ಕಾರ್ಯಕ್ರಮದ ಮೇಲೆ ವಿಶ್ವಾಸವಿರಿಸಿದ್ದರು ಎಂಬುದಕ್ಕೆ ಇದುವೇ ನಿದರ್ಶನ. ಇದೀಗ ವಿದ್ಯಾಗಮನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶವಾಗಿದೆ. ಈ ಆದೇಶ ಸಾರ್ವಜನಿಕವಾಗಿ, ಅದರಲ್ಲೂ ವಿಶೇಷವಾಗಿ ಹೆತ್ತವರ ವಲಯದಲ್ಲಿ ದಿಗಿಲು ಮೂಡಿಸಿದೆ. ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗತೊಡಗಿವೆ.
ವಿದ್ಯಾಗಮವು ಅನುದಾನರಹಿತ ಶಾಲೆಗಳ ದಾಖಲಾತಿಯನ್ನು ಮೊಟಕುಗೊಳಿಸುತ್ತಿದೆ. ಸರಕಾರಿ ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿ ಹೆಚ್ಚಿಸಲು ವಿದ್ಯಾಗಮವನ್ನು ಇಲಾಖೆ ಆರಂಭಿಸಿರಬಹುದೇ? ಎಂಬ ಅಭಿಪ್ರಾಯಗಳು ಖಾಸಗಿ ಶಾಲೆಗಳ ಆಡಳಿತವರ್ಗದಿಂದ ಬಿಂಬಿಸಲ್ಪಡುತ್ತಿದ್ದುವು. ವಿದ್ಯಾಗಮ ಸ್ಥಗಿತ ಆದೇಶದ ಬೆನ್ನಿಗೆ ಹಳ್ಳಿಗಾಡಿನ ಜನರು, ಇಲಾಖೆಯು ಖಾಸಗಿ ಆಡಳಿತಕ್ಕೆ ಶಿರಬಾಗಿದೆ. ವಠಾರಗಳಲ್ಲಿ ವಿದ್ಯಾಗಮ ಚೆನ್ನಾಗಿ ನಡೆಯುತ್ತಿತ್ತು, ಮಕ್ಕಳಿಗೆ ಯಾವುದೇ ಪ್ರಯಾಣದ ವೆಚ್ಚ, ಪ್ರಯಾಣದ ಕಷ್ಟವಿರಲಿಲ್ಲ. ನಮ್ಮ ಮಕ್ಕಳ ಕಲಿಕೆಯನ್ನು ಮುಂದುವರಿಸಲು ಯಶಸ್ಸ್ವಿಯಾಗಿ ಸಾಗುತ್ತಿದ್ದ ವಿದ್ಯಾಗಮ ಮುಂದುವರಿಯಬೇಕಿತ್ತು. ಇನ್ನು ನಮ್ಮ ಮಕ್ಕಳಿಗೆ ಪಾಠದ ವ್ಯವಸ್ಥೆ ಹೇಗಿರಬಹುದು? ಖಾಸಗಿಯವರು ಅನುಸರಿಸುತ್ತಿರುವ ಆನ್‌ಲೈನ್ ಪಾಠವೇ ನಮ್ಮ ಮಕ್ಕಳಿಗೂ ಗತಿಯಾದರೆ ಅದಕ್ಕೆ ಬೇಕಾದ ಪೂರಕ ಸೌಲಭ್ಯವೊದಗಿಸಲು ನಮಗೆ ಸಾಧ್ಯವೇ? ನಮ್ಮ ಅಧ್ಯಾಪಕರು ಕರ್ತವ್ಯ ಬದ್ಧತೆಯಿಂದ ನೀಡುವ ಪಾಠ, ಆನ್‌ಲೈನ್ ಮೂಲಕ ಲಭ್ಯವಾದೀತೇ? ಆನ್‌ಲೈನ್ ಪಾಠವು ಮಕ್ಕಳ ಸ್ನೇಹಿತರನ್ನು ಕಳಚುತ್ತದೆ. ಅವರ ಪ್ರೀತಿಯ ಸೆಲೆ ಬತ್ತುತ್ತದೆ. ಆನ್‌ಲೈನ್ ಪಾಠ ನಿಸ್ತೇಜ ಮತ್ತು ಹದಿಯರೆಯದವರಿಗೆ ಅಸಮಂಜಸ ಹಾಗೂ ಅವಾಸ್ತವ ಕ್ರಮ- ಎಂಬ ಅಭಿಪ್ರಾಯಗಳು ವಿದ್ಯಾಗಮ ಫಲಾನುಭವೀ ವಿದ್ಯಾರ್ಥಿಗಳ ಪೋಷಕರಿಂದ ಬರಲಾರಂಭಿಸಿದೆ. ಅವರ ಅಭಿಪ್ರಾಯದಲ್ಲಿ ಮೇಲ್ನೋಟಕ್ಕೆ ತಿರುಳಿದೆ ಎಂದು ಭಾಸವಾಗುತ್ತದೆ.
ಕರಾವಳಿ ಜಿಲ್ಲೆಗಳ ಶಿಕ್ಷಕರು ವಿದ್ಯಾಗಮದ ಯಶಸ್ಸಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿಯೇ ಈ ಪ್ರದೇಶಗಳ ಪಾಲಕರು ವಿದ್ಯಾಗಮವನ್ನು ಬೆಂಬಲಿಸಿದ್ದಾರೆ. ಪ್ರಕೃತದ ಸಂದಿಗ್ಧ ಪರಿಸ್ಥಿಗೆ ವಿದ್ಯಾಗಮವು ಅನಿವಾರ್ಯವೂ ಆಗಿತ್ತು. ಕೊರೋನಾ ಮುಕ್ತರಾಗಿದ್ದಕೊಂಡು ಕಲಿಕೆ ಹೊಂದಲು ವಿದ್ಯಾಗಮವೇ ಪರಿಪೂರ್ಣ ಕಾರ್ಯಕ್ರಮ ಎನ್ನುವಂತೆಯೂ ಇಲ್ಲ. ಇಲ್ಲಿ ವಿದ್ಯಾಗಮದಿಂದಾಗಿ ಕೊರೊನಾಕ್ಕೆ ಬಲಿಯಾದ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಕೈ ಬೆರಳೆಣಿಕೆಯನ್ನು ಮೀರಿಲ್ಲ. ಅವರ ಬಲಿಗೆ ಕೊರೋನಾವೇ ಕಾರಣ ಎಂಬ ಅಭಿಪ್ರಾಯವೂ ಪ್ರಕಟವಾಗಿಲ್ಲ್ಲ. ಆದುದರಿಂದ ಕೊರೋನಾತಂಕಕ್ಕೆ ಕಡಿಮೆ ಒಳಗಾದ ಜಿಲ್ಲೆಗಳಲ್ಲಿ ವಿದ್ಯಾಗಮವು ಮುಂದುವರಿಯಲು ಅವಕಾಶ ನೀಡಬಹುದಿತ್ತೇನೋ ಎಂಬ ಅನಿಸಿಕೆ ಸಹಜವಾಗಿಯೇ ಹುಟ್ಟುತ್ತದೆ.

ಲೇ: ರಮೇಶ ಎಂ. ಬಾಯಾರು ಎಂ.ಎ, ಬಿ.ಎಡ್.
ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಅಧ್ಯಾಪಕರು,
ಲೇಖಕರು, ಅಂಕಣಕಾರು

More from the blog

ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಅಭಿಯಾನದ ಅಂಗವಾಗಿ ಬಂಟ್ವಾಳದ ಉಳಿ ಗ್ರಾಮದಲ್ಲಿ ಮತದಾರರ ಮನೆಗೆ ಬೇಟಿ ನೀಡಿ...

ಮತ್ತೆ ಏರಿಕೆ ಕಂಡ ಚಿನ್ನದ ಬೆಲೆ : ಇವತ್ತಿನ ‌ಬೆಲೆ ಎಷ್ಟು ಗೊತ್ತಾ…?

ಯುಗಾದಿ ಹಬ್ಬ. ಇದು ಸಂಬಂಧ ಬೆಸೆಯುವ ಹಬ್ಬ. ಅಂದಹಾಗೆಯೇ ದೇಶದಾದ್ಯಂತ ಜನರು ಇಂದು ಸಂಭ್ರಮದಲ್ಲಿದ್ದಾರೆ. ಆದರೆ ಇದರ ನಡುವೆ ಚಿನ್ನದ ಬೆಲೆ ಏರಿಕೆಯ ಬಿಸಿಯಿಂದ ಕೊಂಚ ಬೇಸರವು ಅವರಲ್ಲಿ ಆವರಿಸಿದೆ. ಕಳೆದ ಎರಡು ದಿನಗಳ...

300 ರೂ. ಗಡಿಯತ್ತ ಹಸಿ ಕೊಕ್ಕೊ… 900 ರೂ. ಗಡಿಯತ್ತ ಒಣ ಕೊಕ್ಕೊ

ಪುತ್ತೂರು: ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಹಸಿ ಕೊಕ್ಕೊ, ಒಣ ಕೊಕ್ಕೊ ಧಾರಣೆ ಮತ್ತಷ್ಟು ಜಿಗಿದಿದ್ದು, ಹೊರ ಮಾರುಕಟ್ಟೆಯಲ್ಲಿಯೂ ಅತ್ಯಧಿಕ ದರ ದಾಖಲಾಗಿದೆ. ಒಣ ಕೊಕ್ಕೊ 900 ರೂ. ಗಡಿಯತ್ತ, ಹಸಿ ಕೊಕ್ಕೊ 300 ರೂ....

ಬಂಟ್ವಾಳದ ಕುದ್ಕೋಳಿ: ಹೊತ್ತಿ ಉರಿದ ಡಸ್ಟರ್ ಕಾರು

ಬಂಟ್ವಾಳ: ಬಂಟ್ವಾಳ- ಮೂಡುಬಿದಿರೆ ರಸ್ತೆಯ ಕುದ್ಕೋಳಿ ಸಮೀಪ ಡಸ್ಟರ್ ಕಾರೊಂದು ಏಕಾಏಕಿ ಬೆಂಕಿ ಹತ್ತಿ ಉರಿದ ಘಟನೆ ಇಂದು ಬೆಳಗ್ಗೆ (ಸೋಮವಾರ) ನಡೆದಿದ್ದು, ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ಬಳಿಕ ಸ್ಥಳೀಯರು ಹಾಗೂ ಬಂಟ್ವಾಳ...