


ಬಂಟ್ವಾಳ: ಮನೆ ಮಂದಿ ಮಲಗಿದ್ದ ವೇಳೆ ಮನೆಯ ಬಾಗಿಲಿನ ಚಿಲಕ ಮುರಿದು ಒಳನುಗ್ಗಿ ಕೋಣೆಯಲ್ಲಿದ್ದ ಕಪಾಟಿನ ಕೀ ತೆರೆದು ಲಕ್ಷಾಂತರ ರೂ. ಮೌಲ್ಯದ ಬಂಗಾರವನ್ನು ಕಳವು ಮಾಡಿದ ಘಟನೆ ಕಲ್ಲಡ್ಕ ಕರಿಂಗಾನ ಸಮೀಪದ ಅಮ್ಟೂರು ಮಸೀದಿ ಬಳಿಯ ಮನೆಯಲ್ಲಿ ನಡೆದಿದೆ.
ಅಮ್ಟೂರು ನಿವಾಸಿ ಸುಲೈಮಾನ್ ಎಂಬವರ ಮನೆಯಲ್ಲಿ ಸುಮಾರು 12 ಲಕ್ಷ ಮೌಲ್ಯದ 28 ಪವನ್ ಚಿನ್ನಾಭರಣಗಳು ಕಳವು ನಡೆದಿದೆ.
ಅಮ್ಟೂರು ನಿವಾಸಿ ಸುಲೈಮಾನ್ ಅವರು ಮಗಳು ಮಿಶ್ರಿಯಾಳನ್ನು ಕಬಕ ಸಮೀಪದ ಪೋಳ್ಯ ಎಂಬಲ್ಲಿಗೆ ಮದುವೆ ಮಾಡಿ ಕೊಡಲಾಗಿತ್ತು.
ಮಿಶ್ರಿಯಾ ಅವರು ಪೋಳ್ಯ ಗಂಡನ ಮನೆಯಿಂದ ಅಮ್ಟೂರು ತಂದೆಯ ಮನೆಗೆ ಬಂದಿದ್ದಳು. ಗಂಡನ ಮನೆಯಿಂದ ಬರುವಾಗ ಹಾಕಿಕೊಂಡು ಬಂದಿದ್ದ ಸುಮಾರು 28 ಪವನ್ ಬಂಗಾರದ ವಸ್ತುಗಳನ್ನು ಮನೆಯ ಕೋಣೆಯ ಕಪಾಟಿನಲ್ಲಿ ಇಡಲಾಗಿತ್ತು.
ನಿನ್ನೆ ಮಧ್ಯರಾತ್ರಿ ವೇಳೆ ಮನೆಯ ಹಿಂಬದಿಯ ಬಾಗಿಲು ಚಿಲಕ ಮುರಿದು ಒಳಪ್ರವೇಶ ಮಾಡಿದ ಕಳ್ಳರು ಕೋಣೆಯಲ್ಲಿದ್ದ ಕಪಾಟಿನ ಚಿಲಕ ತೆಗೆದು ಅದರೊಳಗಿದ್ದ ಎಲ್ಲಾ ಬಂಗಾರದ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾನೆ. ಮನೆಯ ಕೋಣೆಯೊಳಗೆ ಮಕ್ಕಳು ಮಲಗಿದ್ದು ಬಾಗಿಲು ಹಾಕಿರಲಿಲ್ಲ.
ಮಧ್ಯರಾತ್ರಿ 2 ಗಂಟೆಯ ವೇಳೆ ಬಾಗಿಲಿನ ಶಬ್ದವಾಗಿದ್ದು, ಎಚ್ಚರಗೊಂಡು ನೋಡಿದಾಗ ಮನೆಯ ಹಿಂಬದಿ ಬಾಗಿಲು ತೆರೆದಿತ್ತು. ಮನೆಯ ಹಿಂಬದಿಯ ಬಾಗಿಲು ತೆರದ ಬಗ್ಗೆ ಸಂಶಯಗೊಂಡ ಸುಲೈಮಾನ್ ಕೋಣೆಯಲ್ಲಿದ್ದ ಕಪಾಟನ್ನು ಗಮನಿಸಿದಾಗ ಕಪಾಟಿನ ಬಾಗಿಲು ಕೂಡ ತೆರೆದಿತ್ತು. ಮತ್ತೆ ಹುಡುಕಾಡಿದಾಗ ಕಪಾಟಿನಿಂದ ಬಂಗಾರ ಕಳವುಗೈದಿರುವ ಬಗ್ಗೆ ತಿಳಿಯಿತು.
ಕೂಡಲೇ ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಎಸ್.ಐ. ಅವಿನಾಶ್ ಸ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.





