ಬಂಟ್ವಾಳ : ಲಯನ್ಸ್ ಕ್ಲಬ್ ಬಂಟ್ವಾಳವು 2019-20 ನೇ ಸಾಲಿನಲ್ಲಿ ನಡೆಸಿದ ವಿವಿಧ ಸೇವೆ ಹಾಗೂ ಸಮಾಜಮುಖಿ ಕಾರ್ಯಗಳಿಗಾಗಿ ಈ ಸಾಲಿನ ಅತ್ಯುತ್ತಮ ಕ್ಲಬ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಲಯನ್ಸ್‌ನ ನಾಲ್ಕು ಕಂದಾಯ ಜಿಲ್ಲೆಗಳ ಪೈಕಿ ಶ್ರೀನಿವಾಸ ಪೂಜಾರಿ ಮೆಲ್ಕಾರ್ ನೇತೃತ್ವದ ಲಯನ್ಸ್ ಕ್ಲಬ್ ಬಂಟ್ವಾಳ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ ತನ್ನ ಇತಿಹಾಸದ ಕಳೆದ ೪೮ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಥಮ ಸ್ಥಾನ ಒದಗಿ ಬಂದಿರುವುದು ಸದಸ್ಯರಲ್ಲಿ ಸಂಭ್ರಮವನ್ನು ಹಿಮ್ಮಡಿಗೊಳಿಸಿದೆ.
ಇತ್ತೀಚೆಗೆ ಮಂಗಳೂರಿನ ಸೆಬಾಸ್ಟಿಯನ್ ಹಾಲ್‌ನಲ್ಲಿ ನಡೆದ ’ದಿಲ್‌ಸೇ’ ಜಿಲ್ಲಾ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಗೋಮ್ಸ್ ಅವರಿಂದ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿ ಮೆಲ್ಕಾರ್ ಮತ್ತವರ ತಂಡ ಪ್ರಶಸ್ತಿಯನ್ನು ಸ್ವೀಕರಿಸಿತು. ಈ ಸಂದರ್ಭ ಜಿಲ್ಲಾ ಪ್ರಥಮ ಮಹಿಳೆ ಅನಿತಾ ಗೋಮ್ಸ್, ಪ್ರಥಮ ಉಪರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ ಮತ್ತಿತರರು ಉಪಸ್ಥಿತರಿದ್ದರು.
ಈ ವರ್ಷದ ಸಂಕಷ್ಟ ಕಾಲಘಟ್ಟವನ್ನು ಅವಕಾಶವನ್ನಾಗಿ ಪರಿವರ್ತಿಸಿದ ಅಧ್ಯಕ್ಷ ಶ್ರೀನಿವಾಸ ಪೂಜಾರಿಯವರು, ಕಾರ್ಯದರ್ಶಿ ರಾಧಾಕಷ್ಣ ಬಂಟ್ವಾಳ ಹಾಗೂ ಕೋಶಾಧಿಕಾರಿ ದೇವಿಕಾ ದಾಮೋದರ್ ಮತ್ತು ಎಲ್ಲಾ ಸದಸ್ಯರ ಸಹಕಾರದೊಂದಿಗೆ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದಾರೆ.
ಯುವವಾಹಿನಿ ಸಹಯೋಗದೊಂದಿಗೆ ನಡೆಸಿದ್ದ, ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಭಾಗವಹಿಸಿದ್ದ ’ತ್ರಿನೇತ್ರ’ ನಾಳೆಯ ಭರವಸೆಯ ಕಣ್ಣುಗಳು ಕಾರ್ಯಕ್ರಮ ಲಯನ್ಸ್ ಕ್ಲಬ್ ಬಂಟ್ವಾಳಕ್ಕೆ ಜನಪ್ರಿಯತೆಯನ್ನು ತಂದುಕೊಟ್ಟಿತು. ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಸದಸ್ಯರೆಲ್ಲರೂ ಸೇರಿ ಒಟ್ಟು 33 ಲಕ್ಷ ರೂಪಾಯಿ ಮೊತ್ತದ ಆಹಾರದ ಕಿಟ್ ಹಾಗೂ ಆರ್ಥಿಕ ನೆರವನ್ನು ನೀಡಿದ್ದಾರೆ. ಬಂಟ್ವಾಳದ ಬಡ ಮಹಿಳೆಗೆ ಮನೆ ನಿರ್ಮಿಸಿ ಕೊಟ್ಟು ನೊಂದ ಬದುಕಿಗೆ ಸೂರು ಒದಗಿಸಿ ಮಾನವೀಯತೆ ಮೆರೆದಿದೆ. 5 ರಕ್ತದಾನ ಶಿಬಿರಗಳನ್ನು ಆಯೋಜಿಸಿ 500 ಯುನಿಟ್ ರಕ್ತ ಸಂಗ್ರಹ, ೩ ಕಡೆಗಳಲ್ಲಿ ಪ್ರಯಾಣಿಕರ ತಂಗುದಾಣದ ಪುನರ್ ನವೀಕರಣ, 5 ಮನೆಗಳಿಗೆ ಶೌಚಾಲಯ ನಿರ್ಮಾಣ, ಭಾಷಣ ತರಬೇತಿ ಶಿಬಿರ, ೧೫ ಶಾಲೆಗಳಲ್ಲಿ ವೃತ್ತಿ ಮಾರ್ಗದರ್ಶನ ಹಾಗೂ ಸ್ವಾವಲಂಬಿ ಬದುಕಿನ ಬಗ್ಗೆ ತರಬೇತಿ ಶಿಬಿರ, ಜಲಮರುಪೂರಣ ಜಾಗೃತಿ ಕಾರ್ಯಕ್ರಮ, ಬಡ ಕುಟುಂಬದ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಶುಲ್ಕ ಪಾವತಿ ಮೊದಲಾದ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಾನಪದ ಸಂಭ್ರಮ, ಆಟಿಕೂಟ, ಕೆಡ್ಡಸ ಆಚರಣೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮ, ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿದೆ.
ಕಲ್ಲಡ್ಕದ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜಸಿದ್ದು, 1400ಕ್ಕಿಂತಲೂ ಅಧಿಕ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು 256ಕ್ಕಿಂತಲೂ ಅಧಿಕ ಮಂದಿಗೆ ಸ್ಥಳದಲ್ಲಿಯೇ ಉದ್ಯೋಗ ಲಭಿಸಿದೆ. ಸ್ವಚ್ಚತಾ ಕಾರ್ಯಕ್ರಮ, ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ, ರೋಗಿಗಳಿಗೆ ವೈದ್ಯಕೀಯ ನೆರವು ಮೊದಲಾದ ನಿರಂತರ ಸೇವಾ ಕಾರ್ಯಕ್ರಮಗಳಿಂದಾಗಿ ಅರ್ಹವಾಗಿಯೇ ಲಯನ್ಸ್ ಕ್ಲಬ್ ಬಂಟ್ವಾಳ ಮೊದಲ ಸ್ಥಾನವನ್ನು ಗಳಿಸಿಕೊಂಡಿದೆ. ಕ್ಲಬ್‌ನ ಸ್ಥಾಪಕಾಧ್ಯಕ್ಷ ಡಾ. ಬಿ. ವಸಂತ ಬಾಳಿಗಾ, ಪೂರ್ವಾಧ್ಯಕ್ಷ ದಾಮೋದರ ಬಿ.ಎಂ. ನೇತೃತ್ವದಲ್ಲಿ ಲಯನ್ಸ್ ಸೇವಾ ಟ್ರಸ್ಟ್ ಮೂಲಕ ನಿರ್ಮಲ ಹೃದಯ ಲಯನ್ಸ್ ವಿಶೇಷ ಚೇತನ ಮಕ್ಕಳ ಪಾಲನಾ ಕೇಂದ್ರ ಲಯನ್ಸ್ ಕ್ಲಬ್ ವತಿಯಿಂದ ಕಳೆದ 11 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ.
ಲಯನ್ಸ್ ಕ್ಲಬ್ ಬಂಟ್ವಾಳದ ಸದಸ್ಯ ವಸಂತ ಕುಮಾರ್ ಶೆಟ್ಟಿಯವರು ಮುಂದಿನ ಸಾಲಿನ ಜಿಲ್ಲಾ ರಾಜ್ಯಪಾಲರಾಗಿ ಲಯನ್ಸ್ ಜಿಲ್ಲೆಯನ್ನು ಮುನ್ನಡೆಸಲಿದ್ದಾರೆ. ಒಟ್ಟಿನಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಪೂಜಾರಿಯವರ ಸಮರ್ಥ ನಾಯಕತ್ವ, ಸದಸ್ಯರೆಲ್ಲರ ಸಹಕಾರದಿಂದಾಗಿ ಈ ವರ್ಷದ ಸಾಧನೆ ಲಯನ್ಸ್ ಕ್ಲಬ್ ಬಂಟ್ವಾಳದ ಕೀರ್ತಿಯನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here