


ಬಂಟ್ವಾಳ: ಬಿ.ಜೆ.ಪಿ ಕ್ಷೇತ್ರ ಸಮಿತಿ ಪದಾಧಿಕಾರಿಗಳ, ವಿವಿಧ ಮೋರ್ಚಾಗಳ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ, ಮಂಡಲ ಮಹಾಶಕ್ತಿ ಕೇಂದ್ರಗಳ ಪದಾಧಿಕಾರಿಗಳ ಹಾಗೂ ಜಿಲ್ಲೆಯಿಂದ ನೇಮಕಗೊಂಡಿರುವ ಪ್ರಮುಖರ ಸಭೆಯು ಬಂಟ್ವಾಳದ ಬಿ.ಜೆ.ಪಿ ಕಛೇರಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಅವರ ಉಪಸ್ಥಿತಿಯಲ್ಲಿ ನಡೆಯಿತು.
ಶಾಸಕರು ಮಾತನಾಡಿ, ಗ್ರಾಮ ಪಂಚಾಯತ್ ಚುನಾವಣೆಯನ್ನು ಗೆಲ್ಲುವ ದೃಷ್ಠಿಯಲ್ಲಿ ಕೆಲಸ ಮಾಡಬೇಕು. ತನ್ನ ಶಾಸಕತ್ವ ಅವಧಿಯಲ್ಲಿ ಪ್ರತಿ ಗ್ರಾಮಕ್ಕೆ ಅನುದಾನವನ್ನು ನೀಡಲಾಗಿದೆ. 400 ಕೋಟಿಗಿಂತಲೂ ಅಧಿಕ ಅನುದಾನದಲ್ಲಿ ಅಭಿವೃದ್ಧಿ ಮಾಡಲಾಗಿದೆ. ಕೇಂದ್ರ ಸರಕಾರದ ಅನುದಾನವು ನೇರ ಪಂಚಾಯತಿಗಳಿಗೆ ಈಗಾಗಲೇ ಬಂದಿದ್ದು, ಮುಂದಿನ ದಿನದಲ್ಲಿ ವರ್ಷಕ್ಕೆ ಕೋಟಿ ಅನುದಾನ ಬರುವ ಯೋಜನೆಯಿದೆ ಎಂಬುದಾಗಿಯೂ ಈ ಚುನಾವಣೆಯನ್ನು ಎಲ್ಲಾ ಪಂಚಾಯತ್ಗಳಲ್ಲಿ ಬಿ.ಜೆ.ಪಿ ಬೆಂಬಲಿತ ಅಭ್ಯರ್ಥಿಗಳು ಜಯಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಶಾಸಕರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚುನಾವಣಾ ಪೂರ್ವ ತಯಾರಿಯ ಬಗ್ಗೆ ಪೂರ್ಣ ಮಾಹಿತಿಯನ್ನು ಬಂಟ್ವಾಳದ ಮಂಡಲದ ಪಂಚಾಯತ್ ಚುನಾವಣಾ ಪ್ರಭಾರಿ ದೇವದಾಸ್ ಶೆಟ್ಟಿಯವರು ನೀಡಿದರು.
ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ಅವರು, ರಾಜ್ಯ ಬಿ.ಜೆ.ಪಿಯವರು ನೀಡಿದ ಕಾರ್ಯ ಸೂಚಿಯ ಬಗ್ಗೆ ಮಾಹಿತಿ ನೀಡಿದರು. ಸಭೆಯ ಅಧ್ಯಕ್ಷಯನ್ನು ಬಂಟ್ವಾಳ ಬಿ.ಜೆ.ಪಿ ಉಪಾಧ್ಯಕ್ಷ ಚಿದಾನಂದ ರೈ ವಹಿಸಿದ್ದರು. ಮಂಡಲದ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.





