Wednesday, October 18, 2023

ಸಜೀಪ ಮೂಡ- ಅಮ್ಟೂರು ಗ್ರಾಮವನ್ನು ಬೆಸೆಯುವ ಕಿಂಡಿ ಅಣೆಕಟ್ಟು ಸಿದ್ದ

Must read

ಬಂಟ್ವಾಳ: ಗ್ರಾಮಗಳ ಸಂಪರ್ಕ ಕೊಂಡಿ ಬೆಸೆಯುವ ಜತೆಗೆ ರೈತರಿಗೆ ನೀರಾವರಿಯನ್ನೂ ಒದಗಿಸುವ ದೃಷ್ಟಿಯಿಂದ ಸರಕಾರ `ಬ್ರಿಡ್ಜ್ ಕಂ ಬ್ಯಾರೇಜ್’ ಗಳನ್ನು ನಿರ್ಮಿಸುತ್ತಿದ್ದು, ಬಂಟ್ವಾಳ ತಾಲೂಕಿನ ಸಜೀಪಮೂಡ-ಅಮ್ಟೂರು ಗ್ರಾಮವನ್ನು ಬೆಸೆಯುವ ಕಿಂಡಿ ಅಣೆಕಟ್ಟೊಂದು ಸಿದ್ಧಗೊಂಡಿದ್ದು, ಶೀಘ್ರದಲ್ಲಿ ಲೋಕಾರ್ಪಣೆಗೊಳ್ಳುವ ಮೂಲಕ ಜನತೆಗೆ ನೆರವಾಗಲಿದೆ.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಪ್ರಸ್ತಾವನೆಯಂತೆ ಸಣ್ಣ ನೀರಾವರಿ ಇಲಾಖೆಯ ಮೂಲಕ ಸುಮಾರು 1 ಕೋ. ರೂ. ವೆಚ್ಚದಲ್ಲಿ ಈ ಕಿಂಡಿ ಅಣೆಕಟ್ಟು ಸಿದ್ಧಗೊಂಡಿದೆ. ಈಗಾಗಲೇ ಇದರ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಅಮ್ಟೂರು ಭಾಗದ ಕೃಷ್ಣಾಪುರ ಪ್ರದೇಶದ ನಿವಾಸಿಗಳಿಗೆ ಸಂಪರ್ಕ ಕಲ್ಪಿಸುವ ಜತೆಗೆ ಸ್ಥಳೀಯ ರೈತರಿಗೆ ನೀರಾವರಿಯ ಅವಕಾಶವನ್ನೂ ಒದಗಿಸಲಿದೆ. ಮಾರ್ನಬೈಲ್‌ನಿಂದ ಪಣೋಲಿಬೈಲ್ ರಸ್ತೆಯಲ್ಲಿ ಸಾಗಿ ಎಡಕ್ಕೆ ಚಲಿಸಿದಾಗ ಎದುರಾಗುತ್ತಿದ್ದ ತೋಡಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, ಲಘು ವಾಹನ ಸಂಚಾರಕ್ಕೂ ಅನುಕೂಲವಾಗಲಿದೆ. ಸೇತುವೆಯ ಎರಡೂ ಭಾಗಗಳಲ್ಲಿ ರಸ್ತೆಯ ತೊಂದರೆ ಇದ್ದರೂ ಸುತ್ತು ಬಳಸಿ ಸಾಗುವ ಬದಲು ಕಾಲ್ನಡಿಗೆಯಲ್ಲಿ ಸಾಗುವುದಕ್ಕೆ ಯಾವುದೇ ಅಡ್ಡಿಯಿಲ್ಲ. ಪ್ರಸ್ತುತ ಕೆಲವೇ ಸಮಯಗಳಲ್ಲಿ ಕಿಂಡಿ ಅಣೆಕಟ್ಟು ಉದ್ಘಾಟನೆಗೊಂಡರೂ ಮಳೆ ಪೂರ್ತಿ ಕಡಿಮೆಯಾದ ಬಳಿಕ ಅಂದರೆ ನವೆಂಬರ್-ಡಿಸೆಂಬರ್ ಸಮಯದಲ್ಲಿ ಹಲಗೆ ಹಾಕುವ ಕಾರ್ಯ ನಿರ್ವಹಿಸಲಾಗುತ್ತದೆ. ಇಲ್ಲಿ ಕೃಷಿಕರಿಗೆ ನೀರಿನ ಬಳಕೆಯ ಅವಕಾಶದ ಜತೆಗೆ ಅಂತರ್ಜಲ ವೃದ್ಧಿಗೂ ನೆರವಾಗಲಿದೆ. ತೋಟಕ್ಕೆ ನೀರಿನ ಅಂಶ ಸಿಗುವ ಜತೆಗೆ ಕೆರೆ, ಬಾವಿ, ಕೊಳವೆ ಬಾವಿಗಳಲ್ಲಿ ನೀರಿನ ವೃದ್ಧಿಗೂ ಅನುಕೂಲವಾಗಲಿದೆ. ನೀರು ಬಳಕೆದಾರರ ಸಂಘ ಕಿಂಡಿ ಅಣೆಕಟ್ಟು ನಿರ್ಮಾಣವಾದ ಪ್ರಥಮ ವರ್ಷದಲ್ಲಿ ಅದರ ಗುತ್ತಿಗೆ ನಿರ್ವಹಣೆ ಮಾಡಿದವರೇ ಹಲಗೆ ಹಾಕುವ ಕೆಲಸ ನಿರ್ವಹಿಸುತ್ತಾರೆ. ಆದರೆ ಪ್ರತಿ ಮಳೆಗಾಲದ ಪ್ರಾರಂಭದಲ್ಲಿ ಹಲಗೆ ತೆಗೆದು ಬಳಿಕ ಮಳೆ ಕಡಿಮೆಯಾದಾಗ ಹಾಕಬೇಕಾಗುತ್ತದೆ. ಹೀಗಿರುವಾಗ ರೈತರೇ ಮಳೆಗಾಲ ಪ್ರಾರಂಭದಲ್ಲಿ ಹಲಗೆ ತೆಗೆದು ತಮಗೆ ಬೇಕಾದಾಗ ಅಳವಡಿಸುವ ದೃಷ್ಟಿಯಿಂದ ಸ್ಥಳೀಯವಾಗಿ ನೀರು ಬಳಕೆದಾರರ ಸಂಘದ ಮೂಲಕ ಅದರ ಕಾಮಗಾರಿ ನಿರ್ವಹಿಸಲಾಗುತ್ತದೆ. ಅದಕ್ಕೆ ಬೇಕಾದ ಖರ್ಚನ್ನು ಸಣ್ಣ ನೀರಾವರಿ ಇಲಾಖೆಯ ಮೂಲಕವೇ ಭರಿಸಲಾಗುತ್ತದೆ.

ಸುಮಾರು 27.10 ಮೀಟರ್ ಅಗಲದ ತೋಡಿಗೆ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, 3.25 ಮೀ. ಎತ್ತರದಲ್ಲಿ ಪಿಲ್ಲರ್‌ಗಳ ಅಳವಡಿಕೆ ಮೂಲಕ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಅದರ ಮೇಲ್ಭಾಗದಲ್ಲಿ 3 ಮೀ. ಡೆಕ್ ಸ್ಲ್ಯಾಬ್ ಇರುತ್ತದೆ. ಸಾಮಾನ್ಯವಾಗಿ ಕಿಂಡಿ ಅಣೆಕಟ್ಟೆಗಳಿಗೆ ಕಿರಾಲ್ ಬೋಗಿ ಮರಗಳ ಹಲಗೆಗಳನ್ನು ಹಾಕಿ ನೀರನ್ನು ತಡೆಯಲಾಗುತ್ತದೆ. ಆದರೆ ಅದಕ್ಕೆ ಬಾಳ್ವಿಕೆ ಕಡಿಮೆ. ಪ್ರಸ್ತುತ ಈ ಕಿಂಡಿ ಅಣೆಕಟ್ಟೆಗೆ ಫೈಬರ್ ತಂತ್ರಜ್ಞಾನದ ಹಲಗೆ (ಎಫ್‌ಆರ್‌ಪಿ)ಯನ್ನು ಅಳವಡಿಸಲಾಗುತ್ತದೆ. ನೀರನ್ನು ಸಮರ್ಪಕವಾಗಿ ತಡೆಯುವ ಜತೆಗೆ ಹೆಚ್ಚು ಬಾಳ್ವಿಕೆ ಇರುವುದರಿಂದ ಎಫ್‌ಆರ್‌ಪಿ ಪ್ಲಾಂಕ್ಸ್ ಗಳನ್ನು ಅಳವಡಿಸುತ್ತಿರುವುದಾಗಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

 

More articles

Latest article