ಇತ್ತೀಚೆಗೆ ನನ್ನ ವ್ಯಕ್ತಿಗತ ಉದ್ದೇಶಕ್ಕಾಗಿ ವಿಟ್ಲ ಕಸಬಾ ಗ್ರಾಮದ ಚಂದಳಿಕೆಯಲ್ಲಿರುವ ಗೇರು ಉದ್ಯಮಿ ಶ್ರೀಯುತ ಸುಬ್ರಾಯ ಪೈ ವಿ. ಅವರನ್ನು ಮೊಬೈಲಿನ ಮೂಲಕ ಸಂಪರ್ಕಿಸಿದ್ದೆ. ಮಾತಾನಾಡುತ್ತಾ ಅವರ ಗೇರು ವ್ಯವಾಹಾರದ ವಿಚಾರವೂ ಬಂತು. ಕೋವಿಡ್-19ರ ಅಗಾಧ ಪ್ರಮಾಣದ ದುಷ್ಪರಿಣಾಮ ಅವರ ಉದ್ಯಮದ ಮೇಲೂ ಆಗಿದೆಯೆಂಬುದನ್ನವರು ನನಗೆ ಸೂಚ್ಯವಾಗಿ ತಿಳಿಸಿದರು. ಕೊಡುಗೈದಾನಿಯಾದ ಇವರನ್ನು ನಾನು ಸಂಪರ್ಕಿಸಿರುವುದು ಯಾವುದೇ ದೇಣಿಗೆಗಾಗಿಯಲ್ಲವಾದ್ದರಿಂದ ಅವರು ವ್ಯವಹಾರದಲ್ಲಿ ಇಳಿತವಿದೆಯೆಂದು ಹಾರಿಕೆಗಾಗಿ ಹೇಳಿದ ಮಾತಂತೂ ಖಂಡಿತ ಅಲ್ಲ. ಅವರು ಹೇಳುವಂತೆ ಈಗ ದುಡಿಮೆಗಾರರಿಗೆ ಕೊಡಲು ಬೇಕಾದಷ್ಟು ಕೆಲಸವೇ ಇಲ್ಲ. ಕಾರಣ ಗೇರು ಬೀಜದ ಆಮದು ಕಡಿಮೆ. ಅದೇ ರೀತಿಯಾಗಿ ಸಂಸ್ಕರಿತ ಗೇರು ಬೀಜಕ್ಕೆ ಮಾರುಕಟ್ಟೆಯೂ ಇಲ್ಲ. ಇದರಿಂದಾಗಿ ಗೇರು ಉದ್ಯಮ ಡೋಲಾಯಮಾನವಾಗಿದೆ ಎಂದರು.
ಗೇರು ಬೀಜದ ಆಮದು ಮತ್ತು ರಫ್ತುಗಳ ಮೇಲೆ ಕೊರೊನಾಘಾತ ಆಗಿದೆಯೆಂದಾದರೆ ಅದು ಉದ್ಯಮಕ್ಕೂ ಆಘಾತವೇ ಅಲ್ಲವೇ? ಉದ್ಯಮದ ಯಶಸು ಕಚ್ಚಾ ವಸ್ತುಗಳ ಪೂರೈಕೆ ಮತ್ತು ಪಕ್ಕಾ ವಸ್ತುಗಳ ದೇಶೀಯ ಅಥವಾ ಅಂತರ್ದೇಶಿಯ ಮಾರಾಟಗಳನ್ನೇ ಅವಲಂಬಿಸಿದೆ. ಕೆಲಸ ಕೊಡಲಾಗದಿದ್ದರೂ ಉದ್ಯಮಿಗಳು ಕಂಗಾಲು, ಸೂಕ್ತ ಮಾರುಕಟ್ಟೆ ದೊರೆಯದಿದ್ದರೂ ಉದ್ಯಮಿಗಳು ಕಂಗಾಲು ಎಂಬುದು ಶತಃಸತ್ಯ. ಉದ್ಯಮಿಗಳೇ ಕಂಗಾಲಾದರೆ ಕಾರ್ಮಿಕರ ಬದುಕು ಕೂಡಾ ನಿರ್ಭರವಾಗದು, ಬರ್ಭರವೇ ಸರಿ. ದೇಶದೊಳಗೆ ಕೊರೋನಾ ಪ್ರವೇಶದ ಮೊದಲೇ ಹಲವಾರು ದೇಶಗಳನ್ನು ಅದು ಸುತ್ತಿ ಸತಾಯಿಸಿರುವುದು ನಮ್ಮ ಗಮನದಲ್ಲಿದೆ. ಆದುದರಿಂದ ಕೊರೊನಾ ದುಷ್ಪರಿಣಾಮಗಳು ನಮ್ಮ ಉದ್ಯಮಿಗಳ ಮೇಲೆಯೂ ನಮ್ಮ ದೇಶದ ಬೀಗಮುದ್ರೆಗಿಂತ ಬಹಳ ಮೊದಲೇ ಅಂಬೆಗಾಲಿಡತೊಡಗಿದ್ದುವು.
ಯಾವುದೇ ಉದ್ಯಮದ ಏರು ಪೇರುಗಳು ಉದ್ಯಮಿ ಮತ್ತು ಕಾರ್ಮಿಕರನ್ನು ಸಮಾನವಾಗಿಯೇ ಬಲಿ ತೆಗೆದುಕೊಳ್ಳುತ್ತವೆ. ಉದ್ಯಮಿಗೆ ಹೆಚ್ಚು ಲಾಭವಾದರೆ ಸಮಾಜಕ್ಕೂ ಅದರ ಪ್ರಯೋಜನ ಸದಾ ಇದ್ದೇ ಇರುತ್ತದೆ. ಉದ್ಯಮ ಲಾಭದಲ್ಲಿದ್ದಾಗ ಗ್ರಾಹಕರಿಗೂ ಸ್ಪರ್ಧಾತ್ಮಕ ಬೆಲೆಗೆ ಗುಣ ಮಟ್ಟದ ವಸ್ತುಗಳು ದೊರೆಯಲು ಸಾಧ್ಯ. ಆದುದರೀಂದ ಒಂದು ಪುಟ್ಟ ಉದ್ಯಮವು ಕಂಗಾಲಾದಾರೂ ನಷ್ಟ ಹೇರಳ ಮತ್ತು ಆ ನಷ್ಟದ ವ್ಯಾಪ್ತಿ ಕೇವಲ ಉದ್ಯಮಿಯೊಬ್ಬನೇ ಅಲ್ಲ.
ಕೆಲಸ ಇಲ್ಲವೆಂದಾದಾಗ ಕನಿಷ್ಠ ಕೂಲಿ ನಿಯಮದಡಿ ಉದ್ಯಮಿಗೆ ಅಪಾರ ಹಾನಿಯಾಗುತ್ತದೆ. ಮಾಡಿದ ಕೆಲಸಗಳಿಂದಾದ ಉತ್ಪಾದನೆಗೆ ಮಾರುಕಟ್ಟೆ ಅಲಭ್ಯವಾದರೆ ಅಥವಾ ಕ್ಷೀಣ ಮಾರುಕಟ್ಟೆಯಾದರೆ ಪಾಲು ಭಂಡವಾಳ ನಿಸ್ತೇಜಗೊಂಡು ನಷ್ಟವಾಗುತ್ತದೆ. ಕೋವಿಡ್ ೨೦೧೯, ಉದ್ಯಮಿಯ ಹಲವಾರು ದಾರಿಗಳನ್ನು ಕಟ್ಟುವುದರ ಮೂಲಕ ಉದ್ಯಮವನ್ನೇ ನಿಸ್ತೇಜಗೊಳಿಸಿದೆ.
ಉದ್ಯಮಿ ಲಾಭದಲ್ಲಿದ್ದರೆ ನೌಕರನಿಗೆ ರಜೆ ಸಂಬಳ, ಲಾಭಾಂಶ ಎಲ್ಲವೂ ದೊರೆಯುತ್ತದೆ. ನೌಕರ ಅಥವ ಕಾರ್ಮಿಕನ ಬದುಕನ್ನು ನಿರಾಳಗೊಳಿಸಲು ಇದು ಬೆಂಬಲವಾಗುತ್ತದೆ. ಊರ ಜಾತ್ರೆ, ಶಾಲಾ ಕಾರ್ಯಕ್ರಮಗಳು, ದೈವ ನೇಮಗಳು, ಸಾಮೂಹಿಕ ಚಟುವಟಿಕೆಗಳು ಉದ್ಯಮಿಗಳ ಲಾಭಾಂಶದ ಆಶ್ರಯದಲ್ಲೇ ಯಶಸ್ಸು ಕಾಣುತ್ತವೆ. ಉದ್ಯಮ ಸೋತರೆ ಸಮುದಾಯಕ್ಕೂ ಹಾನಿ ಖಂಡಿತ. ಕೋವಿಡ್ ಮಾಡಿರುವ ಮತ್ತು ಮಾಡುತ್ತಿರುವ ಪ್ರತಿಯೊಂದು ನಷ್ಟವನ್ನು ಅಂದಾಜಿಸುತ್ತಾ ಹೋದರೆ ಧೇಶದ ಸೊರಗುವಿಕೆಗೆ ಕೋವಿಡ್-19 ಪ್ರಮುಖ ಕಾರಣವಾಗಿದೆ ಎಂಬುದು ನನ್ನಂತೆ ಎಲ್ಲರ ಅನಿಸಿಕೆಯೂ ಆಗಿರಬಹುದು.
ಆದುದರಿಂದ ಕೋವಿಡಾಯಣಕ್ಕೆ ಅಂತ್ಯ ಕಾಣಿಸಬೇಕಾದ ಅಗತ್ಯವಿದೆ. ನಮ್ಮ ಅನಗತ್ಯ ತಿರುಗಾಟ, ಸಂಪರ್ಕಗಳನ್ನು ನಿಲ್ಲಿಸಿ, ಕೊರೋನಾ ರೋಗಾಣುವಿನ ಕೊಂಡಿಯನ್ನು ಮುರಿಯುವುದರ ಮೂಲಕ ಎಲ್ಲರ ಬದುಕು ಸಂಪೂರ್ಣವಾಗಿ ಕೋವಿಡ್೧೯ರ ಪೂರ್ವ ಸ್ಥಿತಿಗೆ ಬರುವ ಹಂಬಲದೊಂದಿಗೆ ನಮ್ಮ ನಾಳೆಗಳನ್ನು ಹಾರೈಸೋಣ. ಸಮಸ್ಯೆಗಳ ಆಗರವಾದ ಕೋವಿಡ್ ಪುಟ್ಟ ಮತ್ತು ದುರ್ಬಲ ವೈರಾಣುವಾದರೂ ಬಹಳ ತುಂಟನಾಗಿರುವುದರಿಂದ, ಅದರಲ್ಲೂ ಅಪಾಯಕಾರಿಯಾದ ತುಂಟನಾಗಿರುವುದರಿಂದ, ಸೂಕ್ತವಾದ ಎಚ್ಚರ ಅಗತ್ಯ ಎನ್ನುತ್ತಾ ಕೋವಿಡಾಯಣ ಎಂಬ ಲೇಖನ ಸರಣಿಗೆ ಅಲ್ಪ ವಿಶಾಂತಿಯನ್ನು ನೀಡಲುದ್ದೇಶಿಸಿದ್ದೇನೆ.

✍️ರಮೇಶ ಎಂ. ಬಾಯಾರು ಎಂ.ಎ, ಬಿಎಡ್,
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here