



ಬಂಟ್ವಾಳ: ಬಂಟ್ವಾಳ ಪುರಸಭೆಯ ಅಭಿವೃದ್ಧಿಗಾಗಿ ಅನುದಾನ ನೀಡುವ ಜತೆಗೆ ಸಿಬಂದಿ ಕೊರತೆಗೂ ಶೀಘ್ರ ಕ್ರಮ ಕೈಗೊಳ್ಳಲಾಗುವದು. ಜತೆಗೆ ನಗರ ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಕುರಿತಂತೆ ಕ್ರಮಕೈಗೊಳ್ಳಲಾಗುವುದು ಎಂದು ರಾಜ್ಯ ಪೌರಾಡಳಿತ ಹಾಗೂ ತೋಟಗಾರಿಕಾ ಸಚಿವ ಡಾ| ನಾರಾಯಣ ಗೌಡ ಹೇಳಿದರು.
ಅವರು ಬುಧವಾರ ದ.ಕ.ಜಿಲ್ಲೆಯ ಭೇಟಿಯ ವೇಳೆ ಬಂಟ್ವಾಳ ನಿರೀಕ್ಷಣಾ ಮಂದಿರಕ್ಕೆ ಆಗಮಿಸಿದ್ದು, ಈ ವೇಳೆ ಪುರಸಭೆಗೆ ವಿಶೇಷ ಪ್ಯಾಕೇಜ್ ನೀಡುವಂತೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನಿಯೋಗ ಮನವಿ ಮಾಡಿತು. ಈ ವೇಳೆ ಸಚಿವರು ಪತ್ರಕರ್ತರ ಜತೆ ಮಾತನಾಡಿ, ಬಂಟ್ವಾಳ ಕ್ಷೇತ್ರದಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕುರಿತು ಕೂಡ ಶಾಸಕರು ಪ್ರಸ್ತಾಪಿಸಿದ್ದು, ಅದಕ್ಕೂ ಸ್ಪಂದನೆ ನೀಡುತ್ತೇನೆ. ಅಡಿಕೆ ಬೆಳೆಗಳ ಪರಿಹಾರ ಹೆಚ್ಚಿಸಲು ಕ್ರಮಕೈಗೊಳ್ಳಲಾಗುತ್ತದೆ ಎಂದರು.
ಆಫ್ರಿಕನ್ ಬಸವನ ಹುಳ ಭಾದೆಯ ಕುರಿತು ರೈತರಿಗೆ ಹೆಚ್ಚಿನ ನೆರವು ಒದಗಿಸಿ, ಅವುಗಳ ಬಾಧೆ ಕಡಿಮೆ ಮಾಡಲು ಅಧಿಕಾರಿಗಳು ಸೂಕ್ತ ಕೈಗೊಳ್ಳುವಂತೆ ಸೂಚಿಸುವುದಾಗಿ ತಿಳಿಸಿದರು. ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ.ಕೆ.ಭಟ್, ಬುಡಾ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ಪ್ರಕಾಶ್ ಅಂಚನ್, ಉದಯಕುಮಾರ್ ರಾವ್, ಪುರುಷೋತ್ತಮ ಶೆಟ್ಟಿ, ಸುದರ್ಶನ್ ಬಜ, ಸೀತಾರಾಮ ಪೂಜಾರಿ, ಪ್ರವೀಣ್ ಗಟ್ಟಿ, ಚಿದಾನಂದ ರೈ, ಡಿವೈಎಸ್ಪಿ ವೆಲಂಟೈನ್ ಡಿಸೋಜ, ಪುರಸಭಾ ಮುಖ್ಯಾಽಕಾರಿ ಲೀನಾ ಬ್ರಿಟ್ಟೊ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಮೊದಲಾದವರು ಉಪಸ್ಥಿತರಿದ್ದರು.






