ಬಂಟ್ವಾಳ: ತಾಲೂಕಿನ ಬಾಳ್ತಿಲದ ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನಡೆದ ವನಮಹೋತ್ಸವ, ಸಸಿ ವಿತರಣೆ ಮತ್ತು ಯಶೋಧಾ ಕೃಷ್ಣ ಛಾಯಚಿತ್ರ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮ ಮತ್ತು ನೊಂದ ಮಹಿಳೆಗೆ ಸಾಂತ್ವನ ಸಹಾಯ ಹಸ್ತ ಕಾರ್ಯಕ್ರಮ ನಡೆಯಿತು.

ವಕೀಲರ ಸಂಘದ ಮಾಜಿ ಅಧ್ಯಕ್ಷ, ನೋಟರಿ ವಕೀಲ ವೆಂಕಟರಮಣ ಶೆಣೈ ಕಾರ್ಯಕ್ರಮದ ಉದ್ಘಾಟಿಸಿ, ಸಂಸ್ಥೆಯ ಸೇವೆ ಶ್ಲಾಘನೀಯ ಎಂದರು. ಸಂಸ್ಥೆಯ ಸಂಸ್ಥಾಪಕಿ, ವಕೀಲೆ ಶೈಲಜಾ ರಾಜೇಶ್ ಮಾತನಾಡಿ, ಮಹಿಳೆಯರು ಎಲ್ಲಾ ರಂಗದಲ್ಲೂ ಮುಂದೆ ಬರಬೇಕು. ಹೆಣ್ಣು ಮಗು ಮತ್ತು ಗಂಡು ಮಗುವನ್ನು ಉತ್ತಮ ಸಂಸ್ಕಾರ ಗುಣ ನಡತೆ, ಪ್ರೀತಿ ಕೊಟ್ಟು ಬೆಳೆಸಿದಲ್ಲಿ ಹೆಣ್ಣಿನ ಮೇಲೆ ಯಾವುದೇ ರೀತಿಯ ದೌರ್ಜನ್ಯ ಆಗಲು ಸಾಧ್ಯವೇ ಇಲ್ಲ. ಮಾನವೀಯತೆಯ ಗುಣ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸೂರಿಕಮೇರಿನ ಖ್ಯಾತ ವೈದ್ಯಾಧಿಕಾರಿ ಡಾ.ರಾಜೇಶ್ ಪೂಜಾರಿ, ಪ್ರಕೃತಿಯ ಮೌಲ್ಯಗಳನ್ನು ತಿಳಿಸಿದರಲ್ಲದೆ, ಗಿಡಗಳನ್ನು ನೆಡುವುದರಿಂದ ಉತ್ತಮ ಗಾಳಿ, ಮಳೆ, ಬೆಳೆ ಆಗುವುದಲ್ಲದೆ, ನಾವು ಸೇವಿಸುವಂತಹ ಗಿಡದ ಗಾಳಿಯಿಂದ ಆರೋಗ್ಯ ವೃದ್ಧಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಸಿ ವಿತರಣೆ ಮತ್ತು ಯಶೋಧಾ ಕೃಷ್ಣ ಛಾಯಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯಿಂದ ನೊಂದ ಖತೀಜಮ್ಮ ಅವರಿಗೆ ಆಪ್ತ ಸಮಾಲೋಚನೆ ಸಾಂತ್ವನದೊಂದಿಗೆ ಧನಸಹಾಯ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಯುವ ಉದ್ಯಮಿ ಮೋಹನ್ ಉಪಸ್ಥಿತರಿದ್ದರು.

ಸಂಸ್ಥೆಯ ಸಂಸ್ಥಾಪಕಿ ಶೈಲಜಾ ರಾಜೇಶ್ ಸ್ವಾಗತಿಸಿ, ಸೃಜನರಾಜ್ ವಂದಿಸಿದರು. ವಕೀಲೆ ವಿದ್ಯಾಲತ ಮತ್ತು ಮೆಸ್ಕಾಂ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here