Thursday, October 19, 2023

ಮೀಟರ್ ರೀಡರ್ ಗಳ ಅನಿರ್ದಿಷ್ಟವಾದಿ ಮುಷ್ಕರ

Must read

ಬಂಟ್ವಾಳ: ಮೆಸ್ಕಾಂ ಇಲಾಖೆಯು ಗುತ್ತಿಗೆ ಬದಲಾವಣೆಯ ಹೆಸರಿನಲ್ಲಿ ಮೀಟರ್ ರೀಡರ್‌ಗಳ ಕೆಲಸ ತೆಗೆದಿರುವ ಜತೆಗೆ 2 ತಿಂಗಳ ವೇತನವನ್ನೂ ನೀಡಿಲ್ಲ. ಈ ಕುರಿತು ಜನಪ್ರತಿನಿಧಿಗಳು ಯಾರೂ ಮಾತನಾಡುತ್ತಿಲ್ಲ ಎಂದು ಆರೋಪಿಸಿ ಮೀಟರ್ ರೀಡರ್‌ಗಳು ಬಿ.ಸಿ.ರೋಡಿನ ಮೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರಿಗೆ ಮೀಟರ್ ರೀಡರ್‌ಗಳ ಸಮಸ್ಯೆಯನ್ನು ಮನವರಿಕೆ ಮಾಡಿದರೂ, ಸ್ಪಂದನೆ ನೀಡುತ್ತಿಲ್ಲ. ಹೀಗಾಗಿ ಹೋರಾಟ ಭಾಗವಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ ಎಂದರು.

ಸ್ಥಳಕ್ಕೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ಭೇಟಿ ನೀಡಿ, ಹಿಂದಿನ ಗುತ್ತಿಗೆ ಸಂಸ್ಥೆಯು ಮೀಟರ್ ರೀಡರ್‌ಗಳಿಗೆ ಉತ್ತಮ ವೇತನದ ಜತೆಗೆ ಸೌಲಭ್ಯಗಳನ್ನೂ ನೀಡಿದ್ದು, ಪ್ರಸ್ತುತ ಗುತ್ತಿಗೆ ಬದಲಾವಣೆ ಮಾಡಿ ಮೀಟರ್ ರೀಡರ್‌ಗಳಿಗೆ ಅನ್ಯಾಯ ಮಾಡುವುದು ಸರಿಯಲ್ಲ. ಹಿಂದಿನ ಗುತ್ತಿಗೆ ಸಂಸ್ಥೆಯು ಉತ್ತಮ ವೇತನದ ಜತೆಗೆ ಸೌಲಭ್ಯಗಳನ್ನೂ ನೀಡಿತ್ತು. ಹೀಗಾಗಿ ಅದೇ ರೀತಿ ಸೌಲಭ್ಯ ನೀಡುವ ನಿಟ್ಟಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಪ್ರಯತ್ನಿಸಲಿ ಎಂದರು.
ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್‌ಕುಮಾರ್ ಶೆಟ್ಟಿ, ಇಂಟಕ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೊಂಡಾಲ ಚಿತ್ತರಂಜನ್ ಶೆಟ್ಟಿ, ಬಂಟ್ವಾಳ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕುಲಾಲ್, ವೆಂಕಪ್ಪ ಪೂಜಾರಿ ಅವರು ಮಾಜಿ ಸಚಿವರ ಜತೆಗಿದ್ದರು. ಮೀಟರ್ ರೀಡರ್‌ಗಳಾದ ಚಂದ್ರಶೇಖರ್ ವಿಟ್ಲ, ಜಯರಾಮ, ಗೋಪಾಲ ನೇರಳಕಟ್ಟೆ, ಸದಾಶಿವ ಮೊದಲಾದವರು ಪಾಲ್ಗೊಂಡಿದ್ದರು. ಬಂಟ್ವಾಳ ನಗರ ಠಾಣಾ ಎಸ್‌ಐ ಅವಿನಾಶ್ ಹಾಗೂ ಅಪರಾಧ ವಿಭಾಗದ ಎಸ್‌ಐ ಕಲೈಮಾರ್ ಅವರ ನೇತೃತ್ವದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

 

More articles

Latest article