ಕೋವಿಡ್‌ನ ಹೊಡೆತಗಳನ್ನು ಎಣಿಕೆಹಾಕಿದಂತೆ ಅದು ಹನುಮಂತನ ಬಾಲ. ಕೋವಿಡ್-19 ಪ್ರಾಬಲ್ಯಗೊಳ್ಳುತ್ತಾ ಇದೆಯೇ ಹೊರತು ದುರ್ಬಲವಾಗಬಹುದೆಂಬ ನಮ್ಮ ನಿರೀಕ್ಷೆ ದೂರವಾಗುತ್ತಿದೆ. ಜನರು ಮುಂಜಾಗರೂಕತೆ ವಹಿಸುತ್ತಿದ್ದಂತೆ ಕಂಡುಬರುವುದಾದರೂ ಎಲ್ಲೋ ಒಂದೆಡೆ ಲೆಕ್ಕಚಾರ ಉಲ್ಟಾ ಪಲ್ಟಾ ಆಗುತ್ತಿದೆ. ಜನರನ್ನು ಅಪ್ಪಿಕೊಂಡ ಕೋವಿಡ್ ಸಮಸ್ಯೆಗಳಿಂದ ಚೇತರಿಕೆ ಹೊಂದಲು ಇನ್ನೂ ಒಂದಷ್ಟು ಕಾಲ ತಾಳ್ಮೆಯಿಂದ ನಿರೀಕ್ಷೆಯಲ್ಲೇ ದಿನಗಳೆಯಬೇಕಾಗಿದೆ. ಔಷಧಗಳು ದೊರೆಯದಿದ್ದರೂ ಕೋವಿಡ್‌ನಿಂದ ಸಾಯುವವರ ಸಂಖ್ಯೆ ಅತ್ಯಲ್ಪವಾಗುತ್ತಿರುವುದು ಹಾಗೂ ಚೇತರಿಸುವವರ ಸಂಖ್ಯೆ ಏರುತ್ತಿರುವುದು ಒಂದಷ್ಟು ಆತಂಕವನ್ನು ತಗ್ಗಿಸುವ ಸಂಗತಿಯಾಗಿದೆ.
ಸಮುದಾಯದೊಳಗೆ ಇಂದು ಕಾಣುವ ಕಾರ್ಮಿಕರಲ್ಲಿ ಬಹುಸಂಖ್ಯಾತರು ಕಟ್ಟಡ ಕಾರ್ಮಿಕರೆಂಬುದು ಖಚಿತ. ಬೀಗಮುದ್ರೆಗಳ ಸರಣಿಗಳು ಕಳಚಲ್ಪಡುತ್ತಿದ್ದರೂ ಕಟ್ಟಡ ಕಾರ್ಮಿಕರ ಪರಿಸ್ಥಿತಿ ಇನ್ನೂ ಬಿಗಡಾಯಿಸಿದ ಸ್ಥಿತಿಯಲ್ಲೇ ಇದೆ. ಬಡಗಿಗಳು, ಗಾರೆಯವರು, ವರ್ಣ ಲೇಪಕರು, ಸಹಾಯಕ ಕಟ್ಟಡ ಕಾರ್ಮಿಕರು ಹೀಗೆ ಎಲ್ಲ ವಿಭಾಗಗಳ ಕಟ್ಟಡ ಕಾರ್ಮಿಕರೂ ಇನ್ನೂ ಸರಿಯಾಗಿ ಕೆಲಸ ದೊರೆಯದೆ ಕೊರಗುತ್ತಿದ್ದಾರೆ. ದೈನಂದಿನ ವೆಚ್ಚಗಳನ್ನು ಎದುರಿಸಲು ಪರದಾಡುತ್ತಿದ್ದಾರೆ. ಕಟ್ಟಡ ಕಾರ್ಮಿಕರಿಗೆ ಬಹಳ ಬೇಡಿಕೆಯಿದ್ದಾಗಿನ ಅಂದಿನ ಮತ್ತು ಬೇಡಿಕೆ ಪ್ರಪಾತಕ್ಕಿಳಿದಿರುವ ಇಂದಿನ ದಿನಮಾನಗಳ ಸ್ವರೂಪಗಳು ವ್ಯತ್ಯಸ್ತಗೊಂಡಿವೆ. ಸಣ್ಣ ಸಣ್ಣ ಕೆಲಸಗಳಿಗೆ ಕರೆದಾಗ ಸಮಯವಿಲ್ಲ ಎನ್ನುತ್ತಿದ್ದ ಕಟ್ಟಡ ಕಾರ್ಮಿಕರು ಇಂದು ಕೆಲಸ ಕೇಳಿಕೊಂಡು ಬರುವ ದುಃಖದ ಪರಿಸ್ಥಿತಿಯನ್ನು ಕೋವಿಡ್ ಕಾರ್ಮಿಕರಿಗೆ ಒಡ್ಡಿದೆ.
ಕಟ್ಟಡ ಕಾರ್ಮಿಕರಿಗೆ ಸರಕಾರ ಕೋವಿಡ್ ಪ್ಯಾಕೇಜ್ ಘೋಷಿಸಿದೆ. ಆದರೆ ಈ ಪ್ಯಾಕೇಜುಗಳನ್ನು ಪಡೆಯಲು ಅವರು ಮಾರ್ಚ್ 2020ರ ಮೊದಲು ಕರ್ನಾಟಕ ಸರಕಾರದ ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿತರಾಗಬೇಕಿತ್ತು. ಬಹುತೇಕ ಕಾರ್ಮಿಕರು ಅನಗತ್ಯ ಪರಿಶ್ರಮವೆಂದು ಪರಿಗಣಿಸಿ ನೋಂದಾವಣೆಯನ್ನು ಬದಿಗಿಟ್ಟಿದ್ದರು. ಕೋವಿಡ್ ಬರುತ್ತದೆಂಬ ಅರಿವಿರುತ್ತಿದ್ದರೆ, ಮುಂದೆ ಸರಕಾರ ಘೋಷಿಸ ಬಹುದಾದ ಪಾಕೇಜುಗಳಿಗೆ ನೋಂದಾವಣೆ ಕಡ್ಡಾಯವಾಗಬಹುದೆಂಬ ಊಹೆಯಿರುತ್ತಿದ್ದರೆ ನೋಂದಾವಣೆ ಮಂದಗತಿಯಲ್ಲಿರುತ್ತಿರಲಿಲ್ಲ. ಹೆಮ್ಮಕ್ಕಳ ಮದುವೆಗೆ ಆಗುವಗಲೋ, ಮಕ್ಕಳು ಉನ್ನತ ವ್ಯಾಸಂಗ ಮಾಡುವಾಗಲೋ ಸರಕಾರ ನೀಡಬಹುದಾದ ಧನಸಹಾಯಕ್ಕೆ ಈಗಲೇ ಯಾಕೆ ನೋಂದಾಯಿಸ ಬೇಕು? ಅಗತ್ಯ ಬಂದಾಗ ನೋಂದಾಯಿಇದರಾಯ್ತು ಎಂಬ ಔದಾಸೀನ್ಯವೂ ನಮ್ಮ ಅನೇಕ ಕಟ್ಟಡ ಕಾರ್ಮಿಕರನ್ನು ನೋಂದಾಯಿತರಾಗದೇ ಕತ್ತಲೆಯಲ್ಲೇ ಇರಿಸಿತ್ತು.
ಕಾರ್ಮಿಕ ಇಲಾಖೆಯಲ್ಲಿ ನೋಂದಾವಣೆಗೆ ತೊಂಭತ್ತು ದಿನಗಳ ಕೆಲಸ ಮಾಡಿರಲೇ ಬೇಕೆಂಬ ನಿರ್ಬಂಧವೂ ಇದೆ. ವರ್ಷದಲ್ಲಿ ತೊಂಭತ್ತು ದಿನ ಕಾರ್ಮಿಕಾರಾಗಲು ಅಸಮರ್ಥರಾದವರಿಗೆ ಕಾರ್ಮಿಕ ಇಲಾಖೆಯಲ್ಲಿ ಹೆಸರನ್ನು ನೊಂದಾಯಿಸುವುದು ಕನಸಿನ ಮಾತು. ವಿದ್ಯುತ್ ಸಂಪರ್ಕ, ಪ್ಲಂಬಿಂಗ್, ಬಣ್ಣ ಬಳಿಯುವುದು, ಟೈಲ್ಸ್ ಹಾಸುವುದು, ಗ್ರಿಲ್ ವರ್ಕ್ ಮುಂತಾದ ಕೆಲಗಳಿಗೆ ತೊಂಭತ್ತು ದಿನಗಳು ಬೇಡ. ಹತ್ತರಿಂದ ಹದಿನೈದು ದಿನಗಳಲ್ಲಿ ಕೆಲಸ ಪೂರೈಸಿದವರಿಗೆ ನೋಂದಾವಣೆ ಕಷ್ಟ ಸಾಧ್ಯ. ಆದರೂ ಅವರು ಬೇರೆ ಬೇರೆ ಕಡೆಗಳಲ್ಲಿ ಮಾಡಿದ ಕೆಲಸಗಳನ್ನು ಒಟ್ಟಾಗಿ ದಾಖಲಿಸಿ ಕಾರ್ಮಿಕ ಇಲಾಖೆಯಲ್ಲಿ, ತಾನು ಕಟ್ಟಡ ಕಾರ್ಮಿಕ ಎಂದು ನೋಂದಾಯಿಸಲು ಅವಕಾಶವಿದೆ. ಆದರೆ ಈ ಬಗ್ಗೆ ಬಹುತೇಕ ಕಾರ್ಮಿಕರಿಗೆ ಮಾಹಿತಿಯ ಕೊರತೆಯಿದೆ. ಅರ್ಜಿ ನಮೂನೆಯಲ್ಲಿ ಕಾರ್ಮಿಕರಾಗಿ ದುಡಿದ ಕಟ್ಟಡ ಕಾರ್ಮಿಕರ ವಿವರಗಳನ್ನು ತುಂಬಿ ಕೊನೇಯದಾಗಿ ದುಡಿಸಿದರಿಂದ ದೃಢೀಕರಣ ನೀಡಿದರೆ ನೋಂದಾವಣೆ ಸಾಧ್ಯ ಎಂಬುದು ಬಹಳಷ್ಟು ಕಾರ್ಮಿಕರಿಗೆ ಗೊತ್ತೇ ಇಲ್ಲ.
ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ 63,736 ನೋದಾಯಿತ ಕಟ್ಟಡ ಕಾರ್ಮಿಕರಿದ್ದು ಇವರಲ್ಲಿ ಮಾರ್ಚ್ 2020ರ ಪೂರ್ವದಲ್ಲಿ ನೋಂದಾವಣೆಯಾಗಿದ್ದ 53725 ಕಾರ್ಮಿಕರಿಗೆ ಸರಕಾರವು ನೀಡಿದ ಕೋವಿಡ್ ಪ್ಯಾಕೇಜ್ ಸೌಲಬ್ಯ ದೊರೆತಿದೆ ಆದರೆ ಉಳಿದವರ ಗತಿ? ಕೇವಲ ಸರಕಾರದ ಪ್ಯಾಕೇಜ್ ಕಟ್ಟಡ ಕಾರ್ಮಿಕರಿಗೆ ದೊರೆತರೆ ಬದುಕಿನ ಎಲ್ಲ ಅಗತ್ಯಗಳು ನಿಭಾಯಿಸಲ್ಪಡುವುದಿಲ್ಲ. ಕಟ್ಟಡ ಕಾರ್ಮಿಕರಿಗೆ ಮತ್ತೆ ದುಡಿಮೆಯ ಅವಕಾಶ ಮುಕ್ತವಾಗಬೇಕು. ಇಂದು ಹೊಯಿಗೆಯ ಕೊರತೆಯ ನೆಪ ಹೇಳಿ ಮಾಲಕರು ಕಾರ್ಮಿಕರನ್ನು ಕೆಲಸಕ್ಕೆ ಕರೆಯುತ್ತಿಲ್ಲ ಎನ್ನುವುದೂ ಕಟ್ಟಡ ಕಾರ್ಮಿಕರಿಗೆ ನುಂಗಲಾಗದ ತುತ್ತು ಮುಂದುವರಿಯುತ್ತದೆ…

ರಮೇಶ ಎಂ. ಬಾಯಾರು ಎಂ.ಎ, ಬಿಎಡ್,
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here