ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಳು- ಕನ್ನಡ- ಬಹುಭಾಷೆಯ ಚಲನಚಿತ್ರವನ್ನು ಚಿತ್ರ ಪ್ರೇಮಿಗಳಿಗೆ ನೀಡುತ್ತಿದ್ದ ಚಿತ್ರಮಂದಿರ (ಟಾಕೀಸ್) ಮರೆಯಾಗುತ್ತಿದೆ.. ಬರಡಾಗುತ್ತಿದೆ.. ಧರಾಶಾಯಿಯಾಗುತ್ತಿದೆ..! ಎಲ್ಲರೂ ಎಲ್ಲರಳೊಂದಾಗಿ ಸಂಸಾರ ಸಮೇತ ನೋಡುತ್ತಿದ್ದ ಚಲನಚಿತ್ರ ಮಂದಿರ ಇಂದು ಯಾರಿಗೂ ಬೇಡವಾಗಿದೆ.!
ಟಾಕೀಸು ಕೆಲವು ಉಳಿದಿದೆ, ಕೆಲವು ಉರುಳಿದೆ, ಬಾಕಿಯವು ಗೊಡೌನ್ ಆಗಿದೆ. ಮೂಖಿ ಚಿತ್ರವನ್ನು ತೋರಿಸಿ, ಕಪ್ಪು ಬಿಳುಪು ಚಿತ್ರವನ್ನು ಆಟವಾಡಿಸಿ, ವರ್ಣ ಚಲನಚಿತ್ರಗಳನ್ನು ಬೆಳ್ಳಿಪರದೆಯಲ್ಲಿ ತೋರಿಸಿದ ಜಿಲ್ಲೆಯ ಚಿತ್ರಮಂದಿರಗಳು ಮರೆಯಾಗುತ್ತಿದೆ. ನೆಲ- ಬೆಂಚುಗಳಲ್ಲಿ ಕುಳಿತು ಅಣ್ಣಾವ್ರ ಅಕ್ಕಾವ್ರ ಚಿತ್ರ ವೀಕ್ಷಿಸಿದ ಪ್ರೇಮಿಗಳು.. ನಂತರ ಸುಖಾಸೀನದಲ್ಲಿ ಕುಳಿತು ಚಿತ್ರ ವೀಕ್ಷೀಸಿ ಇಂದಿನ ಆಧುನಿಕತೆಗೆ ಬೆಸೆದೆವು.
ಆಂದಿನ ಚಿತ್ರಮಂದಿರ ಇಂದು ಇತಿಹಾಸ.. ಕೊರೊನಾ ಸಂಕಷ್ಟದ ಈ ದಿನಗಳಲ್ಲಿ ಇನ್ನು ಚಿತ್ರ ಮಂದಿರ ನೆನಪು ಮಾತ್ರ.!
ಯಾಕೆ..!? ಹಿಗಾಯಿತು..!?
ಚಿತ್ರರಂಗ ಬಲಶಾಲಿಯಾಗಿದೆ. ಚಿತ್ರ ವೀಕ್ಷಕರ ಮನಸ್ಸು ಬದಲಾವಣೆಯಾಗಿದೆ. ಚಿತ್ರ ನಿರ್ಮಾಣದಲ್ಲಿ ಹೊಸ ಅವಿಷ್ಕಾರವಾಗಿದೆ.. ವೀಕ್ಷಕರು ಹೊಸ ಕಲಾವಿದರ ನವ ಚಿತ್ರಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅದಕ್ಕಾಗಿ ಚಿತ್ರರಂಗ ಹಳೆ ಸೀರೆಯ ಸುಟ್ಟು ಹೊಸ ಸೀರೆಯ ಉಟ್ಟು ಮಡಿವಂತಿಕೆಯನ್ನು ತೊಟ್ಟು ವಿಜ್ರಂಭಿಸಿದರೂ.. ಚಿತ್ರ ಮಂದಿರ ದೂರವಾಗುತ್ತಿದೆ.
ಟೂರಿಂಗ್ ಟಾಕೀಸ್ ಎಂದು ಆರಂಭವಾದ ಅಂದಿನ ಮೂಖಿ ಚಿತ್ರದ ಯುಗದಿಂದ, ಇಂದಿನ ಆಧುನಿಕ ಚಿತ್ರರಂಗದ ವೀಕ್ಷಣೆಯನ್ನು ಕಂಡವರು ನಾವು, ಅದೆಷ್ಟೋ ಏಳು ಬೀಳುಗಳ ಮಧ್ಯೆ ನವ ಆಯಾಮಗಳ ಜತೆಯಲ್ಲಿ ಬೆಸೆದೆವು. ಕನ್ನಡ ರಂಗಭೂಮಿಯ ಹೊಂಗನಸಲ್ಲಿ ಸಾಮಾಜಿಕ, ಪೌರಾಣಿಕ, ಚಾರಿತ್ರಿಕ, ನಾಟಕಗಳನ್ನು ಟೆಂಟ್ ಹಾಕಿ‌, ತಾತ್ಕಾಲಿಕ ಕ್ಯಾಂಪಲ್ಲಿ ಹೆಸರಾಂತ ರಂಗ ತಂಡಗಳ ಜಿಲ್ಲೆಯ ನಂದಿಕೇಶ್ವರ, ಉತ್ತರ ಕನ್ನಡದ ಪ್ರಸಿದ್ಧ ಹೆಸರಾಂತ ತಂಡಗಳ ನಾಟಕಗಳನ್ನು ರಂಗಭೂಮಿ, ಚಲನಚಿತ್ರ ಕಲಾವಿದರ ಅಭಿನಯದಲ್ಲಿ ಕಂಡವರು ನಾವು. ಅದೇ.. ವ್ರತ್ತಿ ರಂಗಭೂಮಿ ಕಲಾವಿದರಿಂದ ಚಲನ ಚಿತ್ರ ರಂಗಕ್ಕೆ ಹೊಸ ರೂಪ ಪಡೆಯಿತು. ನಟಸಾರ್ವಬೌಮ ಡಾ| ರಾಜ್ ಕುಮಾರ್, ಉದಯ್ ಕುಮಾರ್, ಲೀಲಾವತಿ, ಬಾಲಕೃಷ್ಣ, ಕಲ್ಯಾಣ್ ಕುಮಾರ್, ಚಿಂದೋಡಿ ಲೀಲಾ, ಇತ್ಯಾದಿ ಹೆಸರಾಂತ ಕಲಾವಿದರಿಂದ ಬೆಳಗಿದ ಚಿತ್ರರಂಗಕ್ಕೆ ಜಿಲ್ಲೆ ರಾಜ್ಯದ ಚಿತ್ರಮಂದಿರಗಳು ದೇವಾಲಯವಾಗಿತ್ತು.
ಚಿತ್ರಮಂದಿರಗಳಲ್ಲಿ ದಿನಂಪ್ರತಿ ನಾಲ್ಕು ದೇಖಾವೆ.. ಆದಿತ್ಯವಾರ ಮತ್ತು ವಿಶೇಷ ರಜಾದಿನಗಳಲ್ಲಿ ಐದು ದೇಖಾವೆ..(ಪ್ರದರ್ಶನ) ಅದಕ್ಕೂ ಹೆಸರಿತ್ತು , ಮಾರ್ನಿಂಗ್- ಮ್ಯಾಟನಿ- ಇವಿನಿಂಗ್- ನೈಟ್ ಶೋ
ಅದರ ಪ್ರಚಾರಕ್ಕೂ ಅಟೊರಿಕ್ಷದಲ್ಲಿ ಎನೌನ್ಸ್ ! ಅಂದಿನ ನೆನಪುಗಳೇ ಮಧುರ. ಚಿತ್ರ ಪ್ರದರ್ಶನದ ಅರ್ಧ ಗಂಟೆ ಮುಂಚಿತವಾಗಿ ತಾಲೂಕು. ಗ್ರಾಮೀಣ ಪ್ರದೇಶದ ಚಿತ್ರ ಮಂದಿರಗಳಲ್ಲಿ *ಗಜ ಮುಖನೇ ಗಣಪತಿಯೇ ನಿನಗೆ ವಂದನೆ….* ಎನ್ನುವ ಪ್ರಾರ್ಥನಾ ಧ್ವನಿ ಮುದ್ರಿಕೆ ಇದು ಕರೆಯಾಗಿ ಆಗ ಸಿನಿಮಾ ನೋಡಲು ಜನರನ್ನು ಆಕರ್ಷೀಸುತ್ತಿತ್ತು , ಜನ ಮುಗಿಬಿದ್ದು ಟಿಕೆಟ್ ಪಡೆದು ಚಿತ್ರಮಂದಿರ ತುಂಬುತಿತ್ತು. ಮುಂಗಡ ಬುಕ್ಕಿಂಗು ಅಂದಿನ ದಿನಗಳಲ್ಲಿ ಇರಲಿಲ್ಲ.
ಟಾಕೀಸ್ ನಲ್ಲಿ ಚಿತ್ರ ನೋಡುವುದೇ ಅಂದು ಹೆಗ್ಗಳಿಕೆ, ದಿನದಲ್ಲಿ ಹಲವಾರು ಚಿತ್ರಮಂದಿರಕ್ಕೆ ಹೋಗಿ ಒಂದರಿಂದ ಮೂರು ಚಿತ್ರ ನೋಡಿದವರೂ ಇದ್ದಾರೆ, ಒಂದೇ ಚಿತ್ರವನ್ನು ಐವತ್ತು ಭಾರಿ ನೋಡಿ ದಾಖಲೆ ಮಾಡಿದವರು ಇದ್ದಾರೆ.ಅಂದು ಚಿತ್ರಮಂದಿರ ಮಾಲಕರ ವ್ಯವಹಾರ ಕೇಂದ್ರವಾಗಿತ್ತು. ಶ್ರೀಮಂತ ವರ್ಗದ ಪೇಟೆ, ನಗರದ ಒಳಗಿನ ಜಾಗದಲ್ಲಿ ತಲೆ ಎತ್ತಿ ನಿಂತ ಚಿತ್ರ ಮಂದಿರ ಸಂಪಾದನೆಗೆ ಆಶ್ರಯ ಆಗಿತ್ತು, ಚಿತ್ರ ಪ್ರೇಮಿಗಳಿಗೆ ಮನರಂಜನೆಯ ಮಂದಿರವಾಗಿತ್ತು. ಯಾವ ಟಾಕೀಸ್ ನಲ್ಲಿ ಯಾವ ಚಿತ್ರವಿದೆ ಎಂದು ಹೋಗಿ ನೋಡುವ ಮನಸ್ಸಿತ್ತು.
ಯುವ ಪ್ರೇಮಿಗಳು ಮತ್ತು ಕ್ಷಣ ಜತೆಗಾರರು ಟಾಕೀಸಿಗೆ ಹೋಗಿ ಟಾಕ್(ಮಾತು) ಕಿಸ್(ಮುತ್ತು) ಗೆ ಈ ಕತ್ತಲ ಚಿತ್ರ ಮಂದಿರ ಆಸರೆಯಾಗಿತ್ತು. ಇಂದು ಚಿತ್ರಮಂದಿರ ಮರೆಯಾಗಿ ಬಿಟ್ಟಿತು. ಕೋವಿಡ್ -19 ಎನ್ನುವ ಮಹಾಮಾರಿಯಲ್ಲಿ ಟಾಕೀಸ್ ಎಲ್ಲರಿಂದಲೂ ದೂರವಾಗಿ ಹೋಯಿತು.
ಆಧುನಿಕತೆಯಲ್ಲಿ ಅಂದಿನ ಚಿತ್ರಮಂದಿರ ಬದಲಾಗಿ.. ಕಳೆದ ಹತ್ತು-ಹದಿನೈದು ವರ್ಷಗಳ ಹಿಂದೆ ಬಂದ ಮಲ್ಟಿ ಪ್ಲೆಕ್ಸ್ ಸ್ಕ್ರೀನ್‌ ಎನ್ನುವ ಥಿಯೇಟರ್ ಮಹಾನಗರದ ದೊಡ್ಡ ದೊಡ್ಡ ಮಾಲ್ ಗಳಲ್ಲಿ ಒಂದಷ್ಟು ಬೆಳ್ಳಿತೆರೆಗಳಲ್ಲಿ ಕನಿಷ್ಠ ಆಸನವನ್ನು ಇಟ್ಟು ದುಭಾರಿ ಮೊತ್ತದಲ್ಲಿ ಆಧುನಿಕತೆಯಲ್ಲಿ ಚಲನಚಿತ್ರವನ್ನು ಬಹಳಷ್ಟು ಸುಂದರವಾಗಿ ಕಣ್ಣಿಗೆ ರಂಗೇರುವಂತೆ ನೋಡುವ ಭಾಗ್ಯವೂ ಶ್ರೀಮಂತ ನಗರ ವಾಸಿಗಳಿಗಾಯಿತು. ಹಳ್ಳಿ ಗ್ರಾಮೀಣ ಮಂದಿ ಚಿತ್ರ ವೀಕ್ಷಣೆಯಿಂದ ದೂರವಾದರು.
ಬಂಟ್ವಾಳ ತಾಲೂಕೇ ಚಿತ್ರ ಮಂದಿರ ಇಲ್ಲದ ತಾಲೂಕಾಯಿತು, ಅದೆಷ್ಟೋ ಟಾಕೀಸುಗಳಿದ್ದ ಇಂದು ಚಿತ್ರ ರಂಗ ಮಂದಿರ ಇಲ್ಲದ ಊರಾಯಿತು.. ಟಾಕೀಸ್ ಇದ್ದ ಊರುಗಳ ಟಾಕೀಸ್ ಕೊರೊನಾದಿಂದಾಗಿ ಜೇಡನ ಬಲೆ ಯಲ್ಲಿ ಕಗ್ಗತ್ತಲ ರಾತ್ರಿಯಲ್ಲಿ,  ಮುಚ್ಚಿದ ಬಾಗಿಲಲ್ಲಿ, ಚಿತ್ರ ವಿಚಿತ್ರ ವಾಗಿರಬಹುದು.!
ಅಂದು ಚಿತ್ರ ಟಾಕೀಸ್ ನಿಂದ ಟಾಕೀಸ್ ಗೆ ಬಾಕ್ಸ್ ನಲ್ಲಿ ಬರುತ್ತಿತ್ತು ರೀಲ್ ನ ಮೂಲಕ ಬೆಳ್ಳಿ ತೆರೆಯಲ್ಲಿ ರಿಯಲ್ ಆಗುತ್ತಿತ್ತು ನಂತರ ಸೆಟ್ ಲೈಟ್ ಪ್ರವೇಶವಾಯಿತು, ಇಂದು ಅದೆಲ್ಲವೂ ಮರೆಯಾಗಿ ಮನೆಯ ಟಿ.ವಿ.ಯಲ್ಲಿ, ಬೊಗಸೆಯ ಮೊಬೈಲ್ ನಲ್ಲಿ ಹಳೆ-ನವ ಚಿತ್ರಗಳನ್ನು ವೀಕ್ಷಿಸುವ ಅವಕಾಶವಿರುವಾಗ ಯಾರಿಗೆ ಬೇಕು? ಯಾತಕೆ ಬೇಕು ಆ ಹಳೆಯ ಚಿತ್ರ ಮಂದಿರ ಅಲ್ಲವೇ!?
ಅಂದು ಚಿತ್ರಮಂದಿರ ಹಗಲಿನಲ್ಲಿ ಮದುವೆಯ ಕಲ್ಯಾಣ ಮಂಟಪವಾಗಿತ್ತು, ಅದೆಷ್ಟೋ ನವ ಜೋಡಿಗಳನ್ನು ಮಾಂಗಲ್ಯ ಧಾರಣೆಯಲ್ಲಿ ಬೆಸೆದಿತ್ತು. ಊರಲ್ಲಿ ಒಂದು ಟಾಕೀಸ್ ಇದ್ದರೆ ಆ ಪೇಟೆಯ ಗೋಡೆಯಲ್ಲಿ ಚಲನಚಿತ್ರದ ಕಲರ್ ಪುಲ್ ಪೊಸ್ಟರ್ ಅಲಂಕಾರ ವಾಗುತ್ತಿತ್ತು. ಬರತ್ತಿದೆ…. ಪ್ರದರ್ಶನವಾಗುತ್ತಿದೆ.. ಕೊನೆಯ ಕೆಲವು ದಿನಗಳು ಮಾತ್ರ….ಇಂತಹ ಬಹು ವರ್ಣದ ಪೊಸ್ಟರ್ ಗಳಿಂದ ಕೆಲವರಿಗೆ ಉದ್ಯೋಗವು ಆಗಿತ್ತು.
ಪತ್ರಿಕೆಯಲ್ಲಿ ಶುಕ್ರವಾರ ಚಿತ್ರರಂಗಕ್ಕೆ ಮೀಸಲು.. ಯಾವ ಟಾಕೀಸ್ ನಲ್ಲಿ ಯಾವ ಚಿತ್ರ ಎನ್ನುವ ಕುತೂಹಲದಿಂದ ವಾರಕ್ಕೊಮ್ಮೆ ಪತ್ರಿಕೆ ಖರೀದಿಸುವ ಜನರೂ ಇದ್ದರು, ಸಾದಾರಣ ಪುಟಗಳು ಚಿತ್ರ ಚಿತ್ರ ನಟರ, ಚಿತ್ರ ಮಂದಿರದ ಸುದ್ದಿ ವಿಚಾರಕ್ಕೆ ಮೀಸಲಾಗಿತ್ತು.
ಚಿತ್ರ ರಂಗವೂ ಕಳೆಗುಂದಿದೆ.. ಅಂದಿನ ಕತೆ ಸಂದೇಶದ ಚಿತ್ರಗಳು ಮರೆಯಾಗಿದೆ, ಆ ಚಿತ್ರಗಳನ್ನು ನೋಡುತ್ತಿದ್ದ ಚಿತ್ರಮಂದಿರಗಳು ಮರೆಯಾಗುವುದು ನಾವು ನಮ್ಮ ಹಿರಿಯರನ್ನು ಕಳೆದು ಕೊಳ್ಳುವಂತಹ ನೋವು ನೀಡುತ್ತಿದೆ.
ಜಿಲ್ಲಾ ಕೇಂದ್ರ ಮಂಗಳೂರಿನ ಹ್ರದಯ ಭಾಗದಲ್ಲಿದ್ದ ಸೆಂಟ್ರಲ್ ಟಾಕೀಸ್, ಪ್ಲಾಟಿನಂ ಧರೆಗುರುಳಿದೆ ಇನ್ನುಳಿದ ಚಿತ್ರಮಂದಿರಗಳು ಅದರದರ ಮಾಲಕರ ಶ್ರೇಯೋಭಿವ್ರದ್ದಿಗಾಗಿ ಏನಾಗಿ ತಲೆ ಎತ್ತುತ್ತದೋ ಗೊತ್ತಿಲ್ಲ.
ಇದೀಗ ಎಲ್ಲಾ ಚಲನಚಿತ್ರಗಳು, ರಂಗ ಪ್ರದರ್ಶನಗಳು, ನಾಟಕ, ನಗುವಿನ ಮುತ್ತಿನ ತೋರಣಗಳು ಆಧುನಿಕ ತಂತ್ರಜ್ಞಾನದಲ್ಲಿ ಜನಿಸಿದ OTT. Flat… Amazone Prime ಮುಂತಾದ ಆ್ಯಪ್ ನಲ್ಲಿ ಟಿಕೇಟ್ ರೀಚಾರ್ಜ್ ಮೂಲಕ ನೋಡುವ ಸ್ಥಿತಿಯ ವರೆಗೆ ನಾವು ಬಂದಿದ್ದೇವೆ.
ಇಲ್ಲಾ ಇನ್ನು ಚಿತ್ರ ಮಂದಿರಗಳಲ್ಲಿ ಚಲನಚಿತ್ರ ನೂರುದಿನಗಳ ಶತಮಾನೋತ್ಸವ ಕಾಣುವುದೂ ಇಲ್ಲ.. ಚಿತ್ರ ನಟರು ಬರುವುದೂ ಇಲ್ಲ.. ಬಂದರೆ ನಮ್ಮ ಕೈಯೊಳಗಿನ ಮೊಬೈಲ್ ನೊಳಗೆ!.
ಬದಲಾವಣೆ ಜಗದ ನಿಯಮ ನಿಯಮದೊಂದಿಗೆ ಬದಲಾವಣೆಯಾಗೋದು ನಮ್ಮ ಕರ್ತವ್ಯ… ಏನಂತೀರಾ..!?
✍️ಬರಹ: ಎಚ್ಕೆ ನಯನಾಡು

      ಚಿತ್ರ: ಕಿಶೋರ್ ಪೆರಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here