ಮೂಡುಬಿದಿರೆ: ವಿಶ್ವ ಪರಂಪರೆಯ ಪವಿತ್ರ ತಾಣಗಳಲ್ಲಿ ಒಂದಾಗಿರುವ ಮೂಡುಬಿದಿರೆಯ ಸಾವಿರ ಕಂಬದ ಬಸದಿ ತ್ರಿಭುವನ ತಿಲಕ ಚೂಡಾಮಣಿ ಎಂದೇ ಪ್ರಸಿದ್ದವಾದ ಜೈನ ಬಸದಿಯು ದೇಶದ ಪ್ರಮುಖ ಜೈನ ಬಸದಿಗಳ ವಾಸ್ತುಶಿಲ್ಪದ ಅಚ್ಚರಿಗಳ ಪೈಕಿ ಇದೀಗ ಮೂರನೇ ಸ್ಥಾನವನ್ನು ಪಡೆದಿದೆ ಎಂದು ಶ್ರೀ ಜೈನ ಮಠಾದೀಶ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಅತ್ಯಂತ ಸೂಕ್ಷ್ಮ ಕೆತ್ತನೆಯ ತೀರ್ಥಂಕರ ಜಿನ ಬಿಂಬಗಳು, ಮತ್ತು ಸರ್ವ ಧರ್ಮ ಸಮನ್ವಯದ ಅನೇಕ ಕಲ್ಲಿನ ಕೆತ್ತನೆಗಳು, ಬೆಡಗಿನ ಭಿತ್ತಿಚಿತ್ರಗಳುಳ್ಳ ವಾಸ್ತು ವೈಭವದ ಬಸದಿಗಳ ಪಟ್ಟಿಯಲ್ಲಿ ಸಾವಿರ ಕಂಬದ ಬಸದಿಯು ರಾಜಸ್ಥಾನದ ರಣಾಕ್ ಪುರ ಬಸದಿ, ದಿಲ್ ವಾರಾ ದೇಗುಲದ ಅನಂತರದ ಸ್ಥಾನದಲ್ಲಿ ಗುರುತಿಸಲ್ಪಟ್ಟಿರುವುದು ದಿಲ್ಲಿಯ ಜೈನ ಸನ್ಸ್ ಮೂಲಕ ಖಚಿತವಾಗಿದೆ ಎಂದು ತಿಳಿಸಿದ್ದಾರೆ.
ದೇಶದ 13 ಇತರ ಬಸದಿಗಳಲ್ಲಿ 4ನೇ ಸ್ಥಾನವನ್ನು ಕಾರ್ಕಳದ ಚತುರ್ಮುಖ ಬಸದಿ ಗಳಿಸಿದೆ ಎಂದರು.
ಸಾವಿರ ಕಂಬದ ಬಸದಿಗೆ ಪ್ರತಿ ವರ್ಷ ವಿಶ್ವದೆಲ್ಲೆಡೆಯಿಂದ ಅನೇಕ ಸಂಖ್ಯೆಯಲ್ಲಿ ಕಲಾಪ್ರಿಯರು, ಯಾತ್ರಿಕರು ಭೇಟಿ ನೀಡುತ್ತಿರುತ್ತಾರೆ. ಆದರೆ ಈ ಬಾರಿ ಕೊರೊನಾ ಸಂಕಷ್ಟದಿಂದ ಬಸದಿಗೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ ಕಡಿಮೆಯಾಗಿದೆ. ಇದೀಗ ಈ ಪರಿಸ್ಥಿತಿಯಲ್ಲಿ ಬಸದಿಯಲ್ಲಿ ನಿತ್ಯ ತ್ರಿಕಾಲ ಪೂಜೆಯ ವ್ಯವಸ್ಥೆ ಮಾಡಲಾಗಿದ್ದು, ಆ ಸಮಯದಲ್ಲಿ ಮಾತ್ರ ಬಸದಿಯನ್ನು ತೆರೆಯಲಾಗುತ್ತಿದೆ. ಕೊರೊನಾದ ಆತಂಕ ಕಡಿಮೆಯಾದ ಬಳಿಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ಸ್ವಾಮೀಜಿಯವರು ತಿಳಿಸಿದ್ದಾರೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here