ಕೆದರಿದ ನೆರೆಗೂದಲು
ಬಸಿದ ಪೀಚಲು ಎದೆ
ಹಗಲಿರುಳೂ ಸಣ್ಣಗೇ
ನವೆಯುತ್ತಲೇ ಇದ್ದಾಳೆ!
ನಮಗೋ ನಿತ್ಯ ಅತಿ
ಸಂಭ್ರಮದ ಹೋಳಿ
‘ಅವ್ವ’ಈಜು ಬಂದರೂ
ಈಜಲಾಗದ ಬಾತುಕೋಳಿ!

ಹರಿಸುತ್ತಲೇ ಇದ್ದಾಳೆ
ಮಮತೆಯ ಹೊಳೆಯ
ಮರೆತು ತನ್ನೆಲ್ಲ ಮುಗಿಯದ
ನೋವು ಸಂಕಟ ದುಃಖ!
ಮಾಸಿದ ಸೆರಗನೆ ಹೊದಿಸಿ
ತನ್ನ ಕುಡಿಗಳ ಬೆಳಗಿಸಿ
ಅವುಗಳ ಹರಸುತಿಹಳು
ಕತ್ತಲೆಯ ಕತ್ತನೊತ್ತಿ !

ತನ್ನ ಸಂತತಿಯನೆಲ್ಲ
ತೆಕ್ಕೆಯಲಿ ಒಗ್ಗೂಡಿಸಿ
ತಾನು ಚೂರುಚೂರಾಗಿ
ಕೃಶವಾಗುತಿಹಳು!
ಛಿದ್ರ ಛಿದ್ರವಾದ ತಾಯಿ
ಕರಗುತಿಹಳು ಕೊರಗುತ
ಕದನ ಹೊಡೆದಾಟದಲೇ
ಸದಾ ನಿರತರು ನಾವು!

ಮನೆಯೊಂದಿಗೇ ಹಂಚ
ಲ್ಪಟ್ಟಳು ಮಾತೆಯೂ
ತನ್ನ ಕರುಳ ಬಳ್ಳಿಯ
ಅಪಾರ ಕರುಣೆಯಿಂದ!
ಜೊತೆಯಿದ್ದ ದಾರವೇ
ಸಂಗ ತೊರೆದ ಮೇಲೆ
ನೆಲಕಚ್ಚುತಿಹಳು ಸೂತ್ರ
ಹರಿದ ಗಾಳಿಪಟದಂತೆ !

ಆಡಲಿಲ್ಲ ಒಮ್ಮೆಯೂ ಕಟು
ಶಬ್ಜವ ಬಿರು ನುಡಿಗಳ
ಪೋಣಿಸುತ್ತಿದ್ದಾಳೆ ಈಗಲೂ
ಕಂಗಳಲ್ಲೇ ಮುತ್ತುಗಳ!
ಅದಾವ ಆಸೆ ಇದೆಯೋ
ಆ ಬಿಗಿದ ಕಂಠದಲಿ?
ಹೆಣೆಯುತ್ತಲೇ ಇದ್ದಾಳೆ
ಭಾವಗಳೊಂದಿಗೆ ಬಿಂಬಗಳ!

ನೀ.ಶ್ರೀಶೈಲ ಹುಲ್ಲೂರು

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here