ಬೆಂಗಳೂರು: ಮಹಾಮಾರಿ ಕೋವಿಡ್-19 ನಿಂದಾಗಿ ಈ ವರ್ಷ ಹಲವಾರು ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಎಲ್ಲಾ ಸಮಾರಂಭಕ್ಕೂ ನಿರ್ಬಂಧಗಳಿವೆ.

ಅದೇ ರೀತಿ ವಿಶ್ವವಿಖ್ಯಾತ ಮೈಸೂರು ದಸರದ ಮೇಲೂ ಕೊರೋನಾ ವಕ್ರದೃಷ್ಟಿ ಬೀರಿದ್ದು, ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಈ ಬಾರಿ ಅವಕಾಶವಿರಲ್ಲ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ನಾಡಹಬ್ಬ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ.

ದಸರಾ ಹಬ್ಬಕ್ಕೆ ಇನ್ನು ಎರಡು ತಿಂಗಳ ಬಾಕಿ ಇದ್ದರೂ, ಆಚರಣೆ ಕುರಿತಂತೆ ಸರ್ಕಾರ ಈವರೆಗೂ ಯಾವುದೇ ರೀತಿಯ ಸಿದ್ದತೆಗಳನ್ನಾಗಲಿ ಹಾಗೂ ಈ ಸಂಬಂಧ ಅಧಿಕಾರಿಗಳ ಸಭೆಯನ್ನಾಗಲಿ ನಡೆಸಿಲ್ಲ.

ಇನ್ನು ಈ ಬಾರಿ ಸರಳ ದಸರಾ ಆಚರಣೆ ಮಾಡಿದರೂ ದಸರಾ ಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ವಿಶ್ವ ವಿಖ್ಯಾತ ಜಂಬೂ ಸವಾರಿ ನಡೆಯುವ ಬಗ್ಗೆ ಅನುಮಾನವಿದೆ.

ಏಕೆಂದರೆ ಜಂಬೂ ಸವಾರಿಯನ್ನು ಕಣ್ತುಂಬಿಸಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತಿರುವ ಹಿನ್ನೆಲೆ ಜಂಬೂ ಸವಾರಿಗೆ ಸರ್ಕಾರ ಅವಕಾಶ ನೀಡುವ ಸಾಧ್ಯತೆಗಳು ತೀರ ಕಡಿಮೆ ಎನ್ನಬಹುದು.

ಬಹುತೇಕ ಎಲ್ಲಾ ಹಬ್ಬಗಳನ್ನು ಸರಳವಾಗಿ ಆಚರಣೆ ಮಾಡಬೇಕೆಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ. ಕೇಂದ್ರ ಸರ್ಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕಿರುವುದರಿಂದ ಯಾವುದೇ ಹಬ್ಬ ಹರಿದಿನಗಳನ್ನು ಅದ್ದೂರಿಯಾಗಿ ಆಚರಣೆ ಮಾಡುವಂತಿಲ್ಲ. ಮೂಲಗಳ ಪ್ರಕಾರ ಹಬ್ಬ ಆಚರಿಸಬೇಕೆ? ಬೇಡವೆ ಎಂಬ ಬಗ್ಗೆ ಸರ್ಕಾರದಲ್ಲಿ ಗೊಂದಲ ಮೂಡಿದೆ. ಹಬ್ಬವನ್ನು ಸಂಪೂರ್ಣವಾಗಿ ನಿಲ್ಲಿಸಿದರೆ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಅದ್ಧೂರಿಯಾಗಿ ಆಚರಿಸುವ ಬದಲು ಸರಳವಾಗಿಯಾದರೂ ಹಬ್ಬವನ್ನು ಆಚರಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.

ಈ ಸಲದ ಗಣೇಶ ಚತುರ್ಥಿ ಹಬ್ಬವನ್ನು ಕೂಡ ಸಾರ್ವಜನಿಕವಾಗಿ ಸರಳ ರೀತಿಯಲ್ಲಿ ಆಚರಿಸಲು ಸರ್ಕಾರ ಅನುಮತಿ ನೀಡಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here