ಬರಹ : ಎಚ್ಕೆ. ನಯನಾಡು 

ತುಳುನಾಡು ಮಾತ್ರವಲ್ಲ ದೇಶದಾದ್ಯಂತ.. ಜಗತ್ತಿಗೇ ಭಕ್ತಿಯನ್ನು ಪಸರಿಸಿದ ಹಿಂದೂ ಧರ್ಮದ ಪವಿತ್ರ ಹಾಗೂ ಆಡಂಬರದ, ಧಾರ್ಮಿಕತೆಯ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ಅರ್ಥಪೂರ್ಣ ಪುಣ್ಯ ಪಾವನ ಹಬ್ಬ “ಗಣೇಶ ಚತುರ್ಥಿ”!! ಭಾರತೀಯ ಜನಮಾನಸದಲ್ಲಿ ಸರ್ವ ಧರ್ಮವನ್ನು ಸಾರುವ ರಾಷ್ಟ್ರೀಯ ಹಬ್ಬವಾಗಿ ಎಲ್ಲರೂ ಬೆಸೆದು ಬೆರೆಯುವ ಸಂಭ್ರಮಿಸುವ ಗಣಪತಿ ಹಬ್ಬ- ಚೌತಿ.


ಜಿಲ್ಲೆ- ರಾಜ್ಯ-ದೇಶಗಳಲ್ಲಿ ಏಕ ಸಂಖ್ಯೆಯನ್ನು ಹಿಡಿದು ತಿಂಗಳು- ಅರ್ಧತಿಂಗಳುಗಳ ಕಾಲ ದೀರ್ಘಾವಧಿಯ ಕಾಲ ಸಾರ್ವಜನಿಕ ಪೂಜೆಯನ್ನು ಪಡೆಯುತಿದ್ದ ಸಾರ್ವಜನಿಕ ಗಣೇಶೋತ್ಸವ ಈ ವರ್ಷ ವಿಘ್ನೇಶ್ವರ ಮೋದಕ ಪ್ರಿಯ ಸಂಕಷ್ಟಕ್ಕೆ ಸಿಲುಕಿದ್ದಾನೆ..! ದಿನದ ಕಟ್ಟು ನಿಟ್ಟಿನ ಪೂಜೆ ಪುರಸ್ಕಾರವನ್ನು ಪಡೆದು ಬಂದಷ್ಟೇ ವೇಗದಲ್ಲಿ ಹಿಂದಕ್ಕೆ ಹೋಗಿ ವಿಸರ್ಜನೆಯಲ್ಲಿ‌ ಮರೆಯಾಗಲಿದ್ದಾನೆ.
ಇಲ್ಲಾ.. ಜನ ಜಂಗುಳಿ ಸೇರುವಂತಿಲ್ಲ, ಭಯ ಭಕ್ತಿಯ ಪೂಜಾ ಕೈಂಕರ್ಯವಿಲ್ಲ, ನಮ್ಮ ಬದುಕಿನ ನೋವ ಕಳೆಯುವ, ಸಮಾಜ, ರಾಜ್ಯ, ದೇಶ, ಲೋಕ ಕಲ್ಯಾಣದ ವಿಘ್ನ ನಿವಾರಿಸುವ ಮಹಾಗಣಪನಿಗೇ ಈ ಪುಣ್ಯ ನೆಲದಲ್ಲಿ ನಿಲ್ಲುವ ಅವಕಾಶವೇ ಇಲ್ಲ.. ಇದು ದುರಂತ..!
ಮೊದಲೊಂದಿಪೆ ನಿನಗೇ ಗಣನಾಥ... ಎಂದು ಅಂದು ತೊದಲು ನುಡಿಯಲ್ಲಿ ಭಜಿಸಿದ ಭಜನೆಯಲ್ಲಿಯೇ ಈ ವರ್ಷ ವಿಭಜನೆಯಾದಿಯಲ್ಲೋ ಲಂಭೋಧರ. ಪರ್ವಾಗಿಲ್ಲ ಭಕ್ತ ಜನ ಸಾಗರದ ಅಹಂಕಾರಕ್ಕೆ ನೀನು ಕೊಟ್ಟ ಶಿಕ್ಷೆಯೋ? ನಿನಗಿದು ಬೇಕಾಗಿತ್ತು ಎನ್ನುವ ನಿನ್ನಿಚ್ಚೆಯೋ? ಆದರೆ ಆಸ್ತಿಕರಿಗೆ ಮನದ ದೇವರಿಗೆ ನಮಿಸೋ ಅವಕಾಶವಿಲ್ಲ. ನಾಸ್ತಿಕರಿಗೆ ನಿನ್ನ ಮಹಿಮೆ ಬಣ್ಣಿಸುವ ಸದಾವಕಾಶವಿಲ್ಲ.! ಎಲ್ಲವನ್ನೂ ಕೊರೋನಾ ನುಂಗಿ ಬಿಟ್ಟಿದೆ. ಸಾರ್ವಜನಿಕ ಗಣೇಶೋತ್ಸವ ಸಂಘಟನೆಯನ್ನು ಸರ್ವ ಧರ್ಮದೊಂದಿಗೆ ಒಗ್ಗೂಡಿಸಿದ ಕ್ರಿಯಾಶೀಲ ಭಕ್ತಿ ಧರ್ಮದ ಕಾರ್ಯಕ್ರಮವೆನ್ನುವುದು ಆಡಳಿತವೂ ಮರೆತು ಬಿಟ್ಟಿದೆ.
ಇದೆಲ್ಲಾ ಯಾಕಾಗಿ!?- ಒಂದು ಕಡೆ ಕೊರೋನಾ ಎನ್ನುವ ಮಹಾಮಾರಿ ಸಾಂಕ್ರಾಮಿಕ ರೋಗದ ಭೀತಿ.. ಇತ್ತ ಸಮಸ್ಯೆಗಳನ್ನು ಎಳೆದು ಹಾಕಲಾಗದೆ, ಪ್ರಜೆಗಳನ್ನು ಕಾಪಾಡಲು ಸರ್ಕಾರದ ಸಂದಿಗ್ಧ ಪರಿಸ್ಥಿತಿಯ ನೀತಿ. ಇಲ್ಲೇ ಆಗಿದೆ, ಸಂಭ್ರಮ ಪಡೆವ, ಎಲ್ಲರೂ ಬೆಸೆವ, ಹಿಂದೆಂದೂ ಆಗದ ಮೊನ್ನೆಯ ಅಷ್ಟಮಿ, ಇಂದಿನ ಚೌತಿ. ಗಣೇಶ ಚತುರ್ಥಿ!.
ಬುದ್ದಿ ತಿಳಿದಾಗಿನಿಂದ ಮನೆಯಲ್ಲಿ ಚೌತಿ ಆಚರಿಸಿ, ಸಂಸಾರ ಕುಟುಂಬದಲ್ಲಿ ಚೌತಿ ಹಬ್ಬವ ಬಡಿಸಿ ಸಿಹಿ ಉಂಡು, ವ್ಯಂಗ್ಯ ದೇಹದ- ಅರ್ಥಪೂರ್ಣ ಧ್ಯೇಯದ ಬೆನಕನಿಗೆ ಬೆನ್ನ ಬಾಗಿಸಿ ಶಿರಭಾಗಿ ನಮಿಸಿ ಒಂದಷ್ಟು ದಿನ ಶಾಲೆ, ಮೈದಾನ, ಖಾಸಗಿ ಸ್ಥಳ, ಸರಕಾರಿ, ಸಾರ್ವಜನಿಕ ಮೈದಾನದಲ್ಲಿ ಕಷ್ಟವಾ? ಸುಖವಾ? ಎಂದು ಸಮಿತಿ ರಚಿಸಿ ಪಕ್ಷ ಭೇದವಿಲ್ಲದೆ ಆಚರಿಸಿ, ಸರ್ವರನ್ನು ಸೇರಿಸಿ ಇಷ್ಟು ವರ್ಷ ಮಾಡಿದ ಸಾರ್ವಜನಿಕ ಗಣೇಶೋತ್ಸವ ಈ ವರ್ಷ ಮನೆ ಮನಗೆ ಸೀಮಿತವಾಗಿ.. ಸಾರ್ವಜನಿಕರ ಸಂಭ್ರಮಕ್ಕೆ ವಿಘ್ನವಾಗಿ ಬಿಟ್ಟನೇ ನಮ್ಮ ಡೊಳ್ಳೊಟ್ಟೆಯ ಗಣಪತಿ.
ನಾವು ಮರೆಯದ,ಮರೆಯಲಾಗದ ವರ್ಷವಾಯಿತು ಟ್ವೆಂಟಿ ಟ್ವೆಂಟಿ. ಈ ವರ್ಷ ನಮ್ಮ ಬದುಕಿನ ಎಲ್ಲಾ ಮಜಲುಗಳಲ್ಲೂ ಹೋರಾಟದ ಪರ್ವಕಾಲ ವಾಯಿತು ‌ಯಾಕೆ ಹೀಗಾಯಿತು ಶಿವ ಪುತ್ರ!?
ಅಂದು 1893 ರಲ್ಲಿ ಬಾಲ ಗಂಗಾಧರ ತಿಲಕರು ಮಹಾರಾಷ್ಟ್ರದಲ್ಲಿ ಸಂಘಟನೆಯ ದೂರ ದ್ರಷ್ಟಿಯಲ್ಲಿ‌ ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವ ರಾಷ್ಟ್ರೀಯ ವರ್ಚಸ್ಸನ್ನು ಪಡೆದು ದೇಶದ ಹಬ್ಬವಾಯಿತು!.ಅಂಗಣದಲ್ಲಿ ಮೆರೆವ ಚೆಂದನದ ಗಣಪ ಕಂಗಣಗಳಿಗೆ ಭಕ್ತಿಯ ಕಂಪನ್ನು ನೀಡಿ ಭಾರತೀಯರ ಭಾರತೀಯತೆಯನ್ನು ಜಗತ್ತಿನ ಉದ್ದಗಲಕ್ಕೂ ಭಕ್ತಿ ಸಾಗರದಲ್ಲಿ ಪಸರಿಸಿದ ಮುದ್ದು ಗಣಪ ಕಲೆ, ಸಾಹಿತ್ಯ, ಸಾಂಸ್ಕೃತಿಕ, ಹಾಸ್ಯದ ಹೊನಲಿನ ವೇದಿಕೆಯನ್ನಾಗಿಯೂ ಗಣನಾಯಕನ ಅನುಬಲದಲ್ಲಿ‌ ಗಣಪತಿಯ ಸಾರ್ವಜನಿಕ ಉತ್ಸವ ಸಂಪನ್ನವಾಗಿ.. ಕಲಾ ಪ್ರಕಾರಗಳಲ್ಲಿ ಸರ್ವ ಧರ್ಮಗಳ ಭಕ್ತರ- ಕಾರ್ಮಿಕರ- ಕಲಾವಿದರ ಇಚ್ಛಾಶಕ್ತಿಗಳೊಂದಿಗೆ ಸಮಾಪನ ವಾಗುತಿತ್ತು!.
ಗಣೇಶ ಹಬ್ಬವೆಂದರೆ ಎಳೆಯ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಸಡಗರ, ಪಠ್ಯೇತರ, ಕ್ರೀಡಾ ಸ್ಪರ್ಧೆಗಳ ಅನಾವರಣ. ಇಲ್ಲಿದೆ ಎಲ್ಲರ ವ್ಯವಹಾರಗಳ ಮೂಲ. ಭಕ್ತಿಯಿಂದ ಪೂಜಿಸುವ ಮನಗಳ ಜತೆಯಲ್ಲಿ ದೇಣಿಗೆಯ ರೂಪದಲ್ಲಿ ನಮ್ಮೂರ ಗಣಪತಿ ಮೆರೆಯಬೇಕು ಎನ್ನುವ ಇಚ್ಚೆ.! ನಂಬಿದ ಮನಕ್ಕೆ ಇಂಬುಗೆಯ ಅರಿಕೆಯಲ್ಲಿ “ವಕ್ರದಂತನಿಗೆ” ಬೆಳ್ಳಿ ಬಂಗಾರದ ಹರಕೆ! ಕಾರ್ಯಕರ್ತರಿಗೆ ಉಲ್ಲಾಸ! ಸ್ವಯಂ ಸೇವಕರಿಗೆ ಉತ್ಸಾಹ! ಸಮಿತಿಗೆ ಸುಸೂತ್ರವಾಗಿ ನಡೆಸುವ ಜವಾಬ್ದಾರಿ! ಹೂವು ಮಾರುವ ವ್ಯವಹಾರಸ್ಥ, ಕಬ್ಬು ಮಾರುವ, ಪಟಾಕಿ ಗರ್ನಾಲು ಸಿಡಿಸುವ, ನಾಟಕ, ಯಕ್ಷಗಾನ, ನ್ರತ್ಯ, ಇತ್ಯಾದಿ ಕಲಾ ರಂಗು ನೀಡುವ ಕಲಾವಿದರ, ಟ್ಯಾಬ್ಲೋ ಕಲಾವಿದರ, ವಾಹನ ಚಾಲಕ ಮಾಲಕರ, ಕಾರ್ಯಕ್ರಮ ನಿರೂಪಕರ,ಹುಲಿ ವೇಷ ಮತ್ತಿನಿತರ ವೇಷಗಾರರ, ವೇಷ ಭೂಷಕರ, ತಾಲೀಮು, ನಾಸಿಕ್ ಬ್ಯಾಂಡ್, ಲೈಟ್ ಸೌಂಡ್ಸ್, ಬ್ಯಾಂಡ್‌ ವಾಧ್ಯ ವಾದಕರ ವ್ರತ್ತಿ ಬದುಕಿಗೂ ಸಂಚಕಾರವಾಯಿತು. ಅದಕ್ಕಿಂತಲೂ ಮಿಗಿಲಾಗಿ ಭಕ್ತಿ ಸಂಭ್ರಮದಲ್ಲಿ ಪಾಲ್ಗೊಳ್ಳುವ ಭಕ್ತರ ವರ್ಷದ ಸೇವೆಗೆ ವಿಘ್ನವಾಯಿತು.
ಕೊರೋನಾದ ಮಹಿಮೆಯಿಂದ ಗಣೇಶೋತ್ಸವದ ಮಹಿಮೆ ಸರಕಾರದ ಅಭೀಷ್ಟೆಯಲ್ಲಿ ನೀತಿಯಲ್ಲಿ ಸಡಿಲಿಕೆಯ ನಿಯಮಗಳಲ್ಲಿ ನಡೆಯಲಿ..
ಆಚರಣೆ ನಮ್ಮದಾಗಲಿ.‌ ನಿಯಮ‌ ಪಾಲನೆ ಈ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಲಿ. ಎಲ್ಲರಿಗೂ ಮಹಾಗಣಪತಿಯ ದಯೆ ಇರಲಿ. ಮುಂದಿನ ವರ್ಷ ಈ ದಿನದಂತಿರದೆ ಎಂದಿನಂತೆ ಭಕ್ತಿಯ ಸಂಭ್ರಮದ ಹಬ್ಬವಾಗಲಿ…!

 

ಚಿತ್ರ: ಕಿಶೋರ್ ಪೆರಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here