



ಉಪ್ಪಿನಂಗಡಿ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಬಡ್ಕಿನಹಳ್ಳ ಎಂಬಲ್ಲಿ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ ಲಾರಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು ಬೆಳಿಗ್ಗೆ ನಡೆದಿದೆ ಎಂದು ವರದಿಯಾಗಿದೆ.
ಲಾರಿಗೆ ಬೆಂಕಿ ಕಾಣಿಸಿಕೊಂಡ ಹಿನ್ನಲೆ ಚಾಲಕ ಮತ್ತು ಇನ್ನೋರ್ವ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಲಾರಿಯು ಸಿಮೆಂಟ್ ತುಂಬಿಕೊಂಡು ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದು, ಬಡ್ಕಿನಹಳ್ಳ ಬಳಿ ಲಾರಿಯ ಎಡಬದಿಯ ಚಕ್ರದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಬಳಿಕ ಲಾರಿಯ ಮೇಲ್ಬಾಗಕ್ಕೆ ಹಬ್ಬಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಿಷಯ ತಿಳಿದ ನೆಲ್ಯಾಡಿ ಹೊರ ಠಾಣಾ ಪೊಲೀಸರು ಹಾಗೂ ಸ್ಥಳೀಯರು, ಪುತ್ತೂರು ವಿಭಾಗದ ಅಗ್ನಿ ಶಾಮಕ ದಳದವರ ನೆರವಿನಿಂದ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ.






