ಬಂಟ್ವಾಳ: ಸಾಧಿಸುವ ಛಲವಿದ್ದರೆ ಬಡತನ ಅಡ್ಡಿಯಾಗದು ಎಂಬುದಕ್ಕೆ ಇಲ್ಲೊಬ್ಬಳು ವಿದ್ಯಾರ್ಥಿನಿ ಸಾಕ್ಷಿಯಾಗಿದ್ದಾರೆ.
ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದ ನೀರಪಾದೆ ಚೆಂಡೆಮನೆಯ ನಿವಾಸಿ, ಶಂಬೂರು ದಿ. ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಜೀವಿತಾ ಬಡತನದಲ್ಲೂ ಎಸೆಸ್ಸೆಲ್ಸಿಯಲ್ಲಿ 600 ಅಂಕಗಳಿಸಿ (ಶೇ.96)ಈ ಸಾಧನೆ ಮಾಡಿದ್ದಾರೆ.
ತಂದೆ ಚೆನ್ನಪ್ಪ ಪೂಜಾರಿ ಕೂಲಿ ಕಾರ್ಮಿಕರಾಗಿದ್ದು, ತಾನು ದುಡಿದರಷ್ಟೆ ಮನೆಯವರ ಹೊಟ್ಟೆ ತುಂಬಿಸುವ ಸ್ಥಿತಿಯಲ್ಲಿಯೂ ಮಗಳ ವಿದ್ಯಾರ್ಜನೆಗೆ ಪಣ ತೊಟ್ಟಿದ್ದಾರೆ. ತಾಯಿ ರಾಜೀವಿ ಸ್ವಲ್ಪ ಮಟ್ಟಿನ ಅನಾರೋಗ್ಯದಿಂದಿದ್ದು ಕೆಲಸ ಮಾಡಿ ಸಂಪಾದಿಸಲು ಅಸಮರ್ಥರಾಗಿದ್ದಾರೆ. ಸ್ವಂತ ಸೂರು ಬೇಕೆಂಬ ಆಶಯದಲ್ಲಿ ಸರಕಾರಿ ಯೋಜನೆಯಲ್ಲಿ ಮನೆ ನಿರ್ಮಿಸಲು ಮುಂದಾಗಿದ್ದು, ಸದ್ಯ ನಿರ್ಮಾಣ ಹಂತದಲ್ಲಿದೆ. ಗುಡಿಸಲಿನಂತಿರುವ ಮನೆಯಲ್ಲಿ ಜೀವಿತಾ ಮನೆಗೆಲಸದಲ್ಲಿ ತಾಯಿಗೆ ಸಹಕರಿಸುವುದರೊಂದಿಗೆ ಎಸೆಸ್ಸೆಲ್ಸಿಯನ್ನು ಉತ್ತಮ ಮಟ್ಟದಲ್ಲಿ ಪೂರ್ಣಗೊಳಿಸಿ ಹೆತ್ತವರ ಕನಸಿನ ಸಾಕಾರಕ್ಕೆ ಶ್ರೀಕಾರ ಹಾಕಿದ್ದಾರೆ.
ಆದರೆ ಬಡತನ ಜೀವಿತಾಳ ವಿಜ್ಞಾನ ವಿಷಯದ ಓದಿಗೆ ಸಹಕಾರಿಯಾಗಿಲ್ಲ. ಸಾವಿರಾರು ರೂ. ಖರ್ಚು ಮಾಡುವ ಸ್ಥಿತಿಯಲ್ಲಿ ಹೆತ್ತವರಿಲ್ಲ. ಜೀವಿತಾಳ ಉನ್ನತ ಶಿಕ್ಷಣದ ಕನಸು ನನಸಾಗಲು ಪ್ರೋತ್ಸಾಹ ದೊರಕಬೇಕು. ಈ ಸಾಧಕಿಯ ಕನಸು ನನಸಾಗಲಿ, ಉತ್ತಮ ಶಿಕ್ಷಣ ಪಡೆಯುವಂತಾಗಲಿ ಎಂದು ನಮ್ಮ ಹಾರೈಕೆಗಳು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here