Wednesday, October 18, 2023

ಪ್ರಜ್ಞಾವಂತ ಪ್ರಜೆಗಳಿಂದಲೇ ಆದರ್ಶ ರಾಷ್ಟ್ರ: ಒಡಿಯೂರು ಶ್ರೀ

Must read

ವಿಟ್ಲ:  ದಾಸ್ಯದಿಂದ ಮುಕ್ತವಾಗಿರುವುದೇ ಸ್ವಾತಂತ್ರ್ಯ. ಸ್ವಾತಂತ್ರ್ಯ ಸ್ವೇಚ್ಛೆಯಾಗಬಾರದು. ಸುವ್ಯವಸ್ಥಿತವಾದ ಆಡಳಿತ ನೋಡಬೇಕಾದರೆ ಪ್ರಜ್ಞಾವಂತ ಪ್ರಜೆಗಳಿರಬೇಕು. ಆಗಲೇ ಆದರ್ಶ ರಾಷ್ಟ್ರವಾಗುವುದು. ಧರ್ಮದಂಡದ ಮೂಲಕ ಆಡಳಿತ ನಡೆಸಿದಾಗ ಅಹಂಕಾರವಿರುವುದಿಲ್ಲ. ರಾಜ ದಂಡ, ಧರ್ಮದಂಡ ಎರಡೂ ಅವಶ್ಯಕ. ಧರ್ಮವನ್ನು ಮರೆತ ರಾಜನಿಗೂ ಉಳಿಗಾಲವಿಲ್ಲ. ದೇಶದ ಬಲಿಷ್ಠತೆಗೆ, ಸಂರಕ್ಷಣೆಗೆ ನಾವೆಲ್ಲರೂ ಬದ್ಧರಾಗಿರಬೇಕು. ಭಾರತದ ದೇಶದ ಅಡಿಪಾಯವೇ ಅಧ್ಯಾತ್ಮಿಕತೆ. ಇದರಿಂದಾಗಿ ಭಾರತಕ್ಕೆ ಯಾವುದೇ ಅಪಾಯವಿಲ್ಲ. ಇದಕ್ಕೆ ಪೂರಕವಾಗಿ ಮಕ್ಕಳಲ್ಲಿ ಧಾರ್ಮಿಕತೆಯೊಂದಿಗೆ ರಾಷ್ಟ್ರೀಯತೆಯನ್ನು ಬೆಳೆಸಬೇಕು. ಬದುಕು ಶಿಕ್ಷಣವನ್ನು ಕೊಡಿಸಬೇಕು. ಸತ್ಸಂಕಲ್ಪದ ಭವಿಷ್ಯದ ರಾಷ್ಟ್ರ ನಿರ್ಮಾಣಕ್ಕೆ ಕಂಕಣಬದ್ಧರಾಗಿರುವ ಪ್ರಧಾನಿ ಮೋದಿಜೀಯವರ ಭಾರತೀಯತೆಯನ್ನೊಳಗೊಂಡ ಏಕರೂಪೀ ಶಿಕ್ಷಣ ನೀತಿ ಜಾರಿಗೆ ತರುವಂತಹುದು ಪ್ರಶಂಸನೀಯ. ಸ್ವಾರ್ಥವನ್ನು ಬಿಟ್ಟು ನಿಸ್ವಾರ್ಥದ ಪಥದಲ್ಲಿ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳೋಣ ಎಂದು ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಗಳವರು ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದಲ್ಲಿ ೭೪ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಧ್ವಜಾರೋಹಣಗೈದು ಆಶೀರ್ವಚನ ನೀಡಿದರು.


ಈ ಸಂದರ್ಭ ಸಾಧ್ವಿ ಶ್ರೀ ಮಾತಾನಂದಮಯೀ ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಯಶವಂತ ವಿಟ್ಲ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಯೋಜನಾ ನಿರ್ದೇಶಕ ಕಿರಣ್ ಉರ್ವ, ಶ್ರೀ ಸಂಸ್ಥಾನದ ಕಾರ್ಯನಿರ್ವಾಹಕ ಪದ್ಮನಾಭ ಒಡಿಯೂರು, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ತಾರಾನಾಥ ಶೆಟ್ಟಿ ಭಾಗವಹಿಸಿದ್ದರು.

ಪ್ರೌಢಶಾಲಾ ಮುಖ್ಯ ಶಿಕ್ಷಕ ಜಯಪ್ರಕಾಶ್ ಶೆಟ್ಟಿ ಎ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಂಚಾಲಕ ಗಣಪತಿ ಭಟ್ ಸೇರಾಜೆ ಪೂಜ್ಯ ಶ್ರೀಗಳವರನ್ನು ಸ್ವಾಗತಿಸಿ ಗೌರವಿಸಿದರು. ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರೇಣುಕಾ ಎಸ್.ರೈ, ಶಿಕ್ಷಕಿಯರಾದ  ನಿವೇದಿತಾ ಹಾಗೂ ನಯನಾ ಇವರು ಧ್ವಜಗೀತೆ ಹಾಗೂ ರಾಷ್ಟ್ರಗೀತೆ ಹಾಡಿದರು. ದೈಹಿಕ ಶಿಕ್ಷಕ ಉದಯಕುಮಾರ್ ರೈ ಧ್ವಜವಂದನೆ ಮಾಡಿಸಿದರು. ಶಾಲಾ ಅಧ್ಯಾಪಕ ವೃಂದದವರು ಪಾಲ್ಗೊಂಡಿದ್ದರು.

More articles

Latest article