



ಅಯೋಧ್ಯೆ: ಅಯೋಧ್ಯೆ ವಿಮಾನ ನಿಲ್ದಾಣವನ್ನು ಜಾಗತಿಕ ದರ್ಜೆಗೆ ಏರಿಸಲಾಗುವುದು ಹಾಗೂ ವಿಮಾನ ನಿಲ್ದಾಣಕ್ಕೆ ಶ್ರೀರಾಮನ ಹೆಸರನ್ನು ಇಡಲಾಗುವುದು ಎಂದು ಅಯೋಧ್ಯೆಗೆ ಭೇಟಿ ನೀಡಿದ್ದ ಉತ್ತರ ಪ್ರದೇಶದ ನಾಗರಿಕ ವಿಮಾನಯಾನ ಸಚಿವ ನಂದಗೋಪಾಲ್ ಗುಪ್ತಾ ನಂದಿ ತಿಳಿಸಿದ್ದಾರೆ.
ಈ ಹಿಂದೆ ವಿಮಾನ ನಿಲ್ದಾಣ ಅಭಿವೃದ್ದಿಗೆ 85 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಆದರೆ ಇದೀಗ 600 ಎಕರೆಗೆ ವಿಮಾನ ನಿಲ್ದಾಣ ವಿಸ್ತರಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಈಗಾಗಲೇ ಅಯೋಧ್ಯೆ ಏರ್ಪೋರ್ಟ್ಗೆ 525 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಅಗಸ್ಟ್ ೫ರಂದು ಅಯೋಧ್ಯೆ ಭೂಮಿ ಪೂಜೆ ನಡೆದ ಬಳಿಕ ಉತ್ತರ ಪ್ರದೇಶ ಸರಕಾರ ಹೊಸ ಯೋಚನೆಯನ್ನು ರೂಪಿಸಿದ್ದು, ಅಯೋಧ್ಯೆ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೆ ಏರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ರಾಮಮಂದಿರ ನಿರ್ಮಾಣದೊಂದಿಗೆ ವಿಮಾನ ನಿಲ್ದಾಣದ ಮೊದಲ ಹಂತದ ಯೋಜನೆಗಳೂ ಪೂರ್ಣಗೊಳ್ಳಲಿದ್ದು, ವಿದೇಶದ ಪ್ರಮುಖ ನಗರಗಳಿಗೆ ವಾಯುಸಂಪರ್ಕ ಕಲ್ಪಿಸಲಾಗುತ್ತದೆ ಜೊತೆಗೆ 777 ಬೋಯಿಂಗ್ ಮತ್ತು ಡಬಲ್ ಡೆಕ್ಕರ್ ವಿಮಾನಗಳಿಗೆ ಲ್ಯಾಂಡಿಂಗ್ ಸೌಲಭ್ಯವಿರಲಿದೆ ಎಂದು ತಿಳಿಸಿದ್ದಾರೆ.






