ಬಂಟ್ವಾಳ: “ರೋಡ್ ಡೈವರ್ಟೆಡ್ ” ಹೀಗೊಂದು ನಾಮಫಲಕ ಹಾಕಿದ್ದು ಎಲ್ಲಿ ಅಂತ ಕೇಳುತ್ತೀರಾ?
ಹಾಗಾದರೆ ಇಲ್ಲಿ ನೋಡಿ…
ಇದು ಮಂಗಳೂರು-ಬೆಂಗಳೂರು ರಸ್ತೆಯ ಮಧ್ಯೆ ಬಿ.ಸಿ.ರೋಡು ಸಿಟಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾಕಿರುವ ನಾಮಫಲಕ.

ಬಿ.ಸಿ.ರೋಡು ಜಂಕ್ಷನ್ ನಲ್ಲಿ ಬಿದ್ದಿರುವ ಹೊಂಡಗಳಿಂದ ವಾಹನ ಸವಾರರು ಬಚಾವ್ ಆಗಲು ಹೆದ್ದಾರಿ ಮಧ್ಯದಲ್ಲಿ ಬ್ಯಾರಿಕೇಡ್ ಆಳವಡಿಸಿ ಬಳಿಕ ರಸ್ತೆ ವಿಭಜಿಸಲಾಗಿದೆ ಎಂದು ರಸ್ತೆ ಮಧ್ಯೆಯೇ ಬೋರ್ಡ್ ಹಾಕಲಾಗಿದೆ.
ಈ ಬೋರ್ಡ್ ಯಾರು ಹಾಕಿದ್ದಾರೆ ಎಂಬ ವಿಚಾರ ತಿಳಿದಿಲ್ಲ.
ಆದರೆ ಈ ಬೋರ್ಡ್ ಮಾತ್ರ ಹೆದ್ದಾರಿಯಲ್ಲಿ ಸಂಚರಿಸುವ ಜನರನ್ನು ತಲೆತಗ್ಗಿಸುವಂತೆ ಮಾಡಿದೆ.


ಹೆದ್ದಾರಿ ಯುದ್ದಕ್ಕೂ ಹೊಂಡಗುಂಡಿ:
ಬಿಸಿರೋಡಿನಿಂದ ಮಾಣಿವರೆಗೂ ಹೆದ್ದಾರಿಯಲ್ಲಿ ಹೊಂಡ ಗುಂಡಿಗಳದ್ದೇ ಕಾರುಬಾರು. ಈ ಹೊಂಡಗಳಿಂದ ತಪ್ಪಿಸಿಕೊಂಡು ಹೋಗಲು ವಾಹನ ಸವಾರರು ಪಡುವ ಕಷ್ಟ ಅಷ್ಟಿಷ್ಟಲ್ಲ. ದ್ವಿ ಚಕ್ರ ವಾಹನ ಸವಾರರು ಅಂತು ಈ ಗುಂಡಿಗಳಿಗೆ ಬಿದ್ದು ಗಾಯಗೊಂಡವರು ಅನೇಕರು.ಆಸ್ಪತ್ರೆಗೆ ದಾಖಲಾದವರು ಇನ್ನಷ್ಟು ಜನ. ಅತಿಯಾದ ಮಳೆಯಾದರೆ ಪ್ರತಿವರ್ಷ ಈ ಹೆದ್ದಾರಿ ಸಮಸ್ಯೆ ಹೇಳತೀರದು. ಕಳೆದ ವರ್ಷವೂ ಇದೇ ರೀತಿ ಹೊಂಡಗುಂಡಿಗಳು ಬಿದ್ದು ರಸ್ತೆಯಲ್ಲಿ ಸಂಚಾರ ಅಸಾಧ್ಯ ಎಂಬ ಸ್ಥಿತಿ ನಿರ್ಮಾವಾಗಿತ್ತು.
ಬಳಿಕ ಮಾಜಿ ಸಚಿವ ಬಿ.ರಮಾನಾಥ ರೈ ನೇತ್ರತ್ವದಲ್ಲಿ ರಸ್ತೆ ರಿಪೇರಿ ಮಾಡಿ ಕೊಡಿ ಎಂದು ಪ್ರತಿಭಟನೆ ಕೂಡ ಮಾಡಿದ್ದರು.
ಚತುಷ್ಪತ ಕಾಮಗಾರಿ ಅವಾಂತರ:
ಬಿಸಿರೋಡು – ಅಡ್ಡಹೊಲೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಿನ್ನೆಲೆಯಲ್ಲಿ ರಸ್ತೆಯನ್ನು ಅಗೆದು ಹಾಕಲಾಗಿತ್ತು. ಬಳಿಕ ಸರಕಾರ ಮತ್ತು ಗುತ್ತಿಗೆ ವಹಿಸಿಕೊಂಡ ಕಂಪೆನಿ ಮಧ್ಯೆ ತಾಂತ್ರಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಕಾಮಗಾರಿ ಅರ್ಧದಲ್ಲಿ ಬಾಕಿಯಾಗಿದೆ. ಈ ಸಂದರ್ಭದಲ್ಲಿ ಅರ್ಧಕ್ಕೆ ನಿಲ್ಲಿಸಿದ ಕಾಮಗಾರಿಯಿಂದಾಗಿ ಹೆದ್ದಾರಿ ಬದಿಯಲ್ಲಿನ ಚರಂಡಿಗಳು ಮುಚ್ಚಿ ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿದೆ. ರಸ್ತೆಯ ಮಧ್ಯೆ ಮಳೆ ನೀರು ಹರಿದು ಹೋಗುವುದರಿಂದ ರಸ್ತೆಯೆಲ್ಲಾ ಗುಂಡಿಯಾಗಿದೆ.
ಬಂಟ್ವಾಳ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಅವರ ನೇತ್ರತ್ವದಲ್ಲಿ ಬಿ.ಸಿ.ರೋಡಿನ ಕೆಲವೊಂದು ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಲಾಗಿತ್ತು. ಆದರೂ ರಸ್ತೆಯಲ್ಲಿ ನೀರು ಹರಿದು ಹೋಗಿ ಮತ್ತೆ ಗುಂಡಿಗಳಾಗಿವೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here