ವ್ಯಕ್ತಿಗೊಂದು ವ್ರತ್ತಿ ವ್ರತ್ತಿ ಜತೆಯಲ್ಲಿ ಪ್ರವ್ರತ್ತಿ, ಸರಕಾರಿ ಕೆಲಸದಲ್ಲಿ ನಿವ್ರತ್ತಿ, ಇದು ಸರಕಾರಿ ನೆಲೆಯಲ್ಲಿ ಇರುವ ಪರಿಸ್ಥಿತಿ. ಸರಕಾರದ ಕೆಲಸ ದೇವರ ಕೆಲಸ ಎನ್ನುವ ಸಂಕಲ್ಪದಲ್ಲಿ ದುಡಿಯುವ ನೌಕರರು ಅದೆಷ್ಟೋ ಮಂದಿ..! ನಾನಿಂದು ಹೇಳಲಿರುವ ಸರಕಾರಿ-ಸಹಕಾರಿ ವ್ಯಕ್ತಿತ್ವದ “ಪವರ್ ನ ಜತೆ ಹೋರಾಡುವ ಟವರ್ ನಲ್ಲಿ ನೇತಾಡುವ ಅಂದಿನ ಲೈನ್ ಮ್ಯಾನ್! ಇಂದಿನ ಪವರ್ ಮ್ಯಾನ್ ಗೇ- ಅವರ ಕರ್ತವ್ಯಕ್ಕೆ.. ಶರಣಾಗಲೇ ಬೇಕು.
ಮೊದಲೊಂದು ಉದ್ಯೋಗವಾಗಬೇಕಿತ್ತು.. ಸರಕಾರಿ ಕೆಲಸದ ಅಂಕಿತದಲ್ಲಿ ಸಮವಸ್ತ್ರಧಾರಿಯಾಗಿ ರಾತ್ರಿ ಹಗಲು- ಮಳೆಗಾಲ ಬೇಸಿಗೆ ಕಾಲದಲ್ಲಿ ಸಾರ್ವಜನಿಕರಿಗೆ ಸಂವಹನವಾಗಿ ನೋವನ್ನು ಉಂಡು ಬೈಗುಳವನ್ನು ತಿಂದು, ಹೊಗಳಿಕೆ ಇಲ್ಲದ ತೆಗಳಿಕೆಯಲ್ಲಿಯೇ.. ಸವಾಲು ಅಪಾಯದಲ್ಲಿಯೇ ದಿನ ಕಳೆಯುವ, ವ್ರತ್ತಿ ಬದುಕಿನಲ್ಲಿ ನೆಮ್ಮದಿ ಪಡೆದು ಜನರ ಜತೆ ಬೆಸೆಯುವ ಒಂದು ಇಲಾಖೆಯೇ.. ಮೆಸ್ಕಾಂ! ಅದರೊಂದಿಗೆ ಬದುಕು ರೂಪಿಸಿ ಕಾರ್ಯ ನಿರ್ವಹಿಸುವ ” ಪವರ್ ಮ್ಯಾನ್”
ಅಂದು ಕೆ.ಇ.ಬಿ ಆಗಿದ್ದ ಇಲಾಖೆ ಇಂದು ಮೆಸ್ಕಾಂ ಆಗಿದೆ, ಲೈನ್ ಮ್ಯಾನ್ ಮರೆಯಾಗಿ ಪವರ್ ಮ್ಯಾನ್ ಆಗಿದ್ದಾನೆ. ಆದರೆ ಅವನ ಕರ್ತವ್ಯ, ಅಪಾಯವೆಲ್ಲವೂ ಯಾರಿಗೂ ತಿಳಿಯದಾಗಿದೆ…!
ಅಂದು ವಿಧ್ಯಾಭ್ಯಾಸ ಕಲಿಯಲಾಗದ ಕಷ್ಟ ಪರಿಸ್ಥಿತಿ, ಕಲಿತರೂ ಮುಂದಿನ ಜೀವನದ ದುಸ್ಥಿತಿ ಆಗಿನ ಮನೋಸ್ಥಿತಿಗೆ, ಬದುಕ ಯಾತ್ರೆಗೆ.. ಜೀವನ ಸಾಗಿಸಲು ಕನಿಷ್ಠ ವಿದ್ಯಾಭ್ಯಾಸದಲ್ಲಿ ನೇರ ನೇಮಕಾತಿಯಲ್ಲಿ ಸಿಗುತಿದ್ದ ಸರಕಾರಿ ಕೆಲಸವೇ ಲೈನ್ ಮ್ಯಾನ್! ಅದರಲ್ಲೂ ಹಲವಾರು ವರ್ಗಗಳು, ದರ್ಜೆಗಳು ಆದರೂ ಸರಕಾರಿ ಕೆಲಸವಾದುದರಿಂದ ಸಂಸಾರಕ್ಕೆ ಆಸರೆಯಾಗಿತ್ತು, ಕುಟುಂಬಕ್ಕೆ ಪ್ರೋತ್ಸಾಹವಿತ್ತು.. ಮಕ್ಕಳ ವಿದ್ಯಾಭ್ಯಾಸ ಅವರ ಬದುಕಿನ ಹಾದಿಗೆ ನೆರಳಾಗಿತ್ತು.
ನನ್ನ ಹಿರಿಯ ಸಂಬಂದಿ ಬಂಧು ಶಿವಪ್ಪಣ್ಣ ಮರ ಹತ್ತುವಂತೆ ಲೈಟ್ ಕಂಬ ಏರುತ್ತಾ ತನ್ನ 50ರ ಹರೆಯದಲ್ಲಿ ಕಂಬದಿಂದ ಜಾರಿಬಿದ್ದ ಅವಘಡ, ಅವರ ಸಾವು… ಸಂಸಾರದ ನೋವು… ಇದು ಸಮಾಜಕ್ಕೆ ಅವರು ಸಮರ್ಪಿಸಿದ ತ್ಯಾಗ. ಅಂದು ಇಂದಿನಂತೆ ಆಧುನಿಕ ವ್ಯವಸ್ಥೆ ಇಲ್ಲದಿದ್ದರೂ ಕರೆಂಟ್ ಎನ್ನುವ ಬೆಂಕಿಯ ಜೊತೆಗಿನ ಸರಸ ಇಂದಿಗೂ ಅಪಾಯದ ಅಹ್ವಾನ.
ಹೌದು..! ಇಂದಿನ ಮೆಸ್ಕಾಂ ಇಲಾಖೆಯ ಬಯಲಲ್ಲಿ ಕಂಬ-ವಯರ್ ನಲ್ಲಿ ಹೋರಾಡುತ್ತಿರುವ, ಗಾಳಿ ಮಳೆ ಬಿಸಿಲು ಲೆಕ್ಕಿಸದೆ ದುಡಿಯುವ ನಮ್ಮ ಪವರ್ ಮ್ಯಾನ್ ಗಳು ನಮ್ಮ ಮನೆ ಬೆಳಗಿಸುವ ಯೋಧರು, ಅಂದಿನ ಲೈನ್ ಮ್ಯಾನ್ ಗಳು ಹೇಳಿದ ತಕ್ಷಣ ಲೈಟ್ ಕಂಬದ ಬಳಿಗೆ ಬಂದು ಸಮಸ್ಯೆಯ ವಯರನ್ನು ನಡೆಸುವ ಶಿಸ್ತಿನ ಸಿಪಾಯಿಯಂತಹ ವೈಧ್ಯರು. ನಮ್ಮ ಮನೆ ಬೆಳಗಬೇಕಾದರೆ ಯಾವ ಸಂದರ್ಭದಲ್ಲೂ ಓಡೋಡಿ ಬಂದು ತನ್ನ ಜೀವ ಮುಡಿಪಾಗಿಟ್ಟು ತನ್ನ ಮನೆ ಬೆಳಕು ನಂದಿದರೂ ಪರ್ವಾಗಿಲ್ಲ ನಿಮ್ಮ ಮನೆ ಬೆಳಗಲಿ ಎನ್ನುವ ನಂದಾದೀಪಗಳು ಮೆಸ್ಕಾಂ ನ ಪವರ್ ಮ್ಯಾನ್ ಗಳು.ಅವರ ಜತೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಂಬವನ್ನು ನೆಟ್ಟು ವಯರ್ ಜೋಡಿಸಿ ವಿದ್ಯುತ್ ಪ್ರವಹಿಸುವ ಜೀವನದ ಗ್ಯಾರಂಟಿ ಇಲ್ಲದೆ ದುಡಿಯುವ ದಿನಗೂಲಿ ಕಾರ್ಮಿಕರು.!
ನೀವು ಹೇಳಬಹುದು ಇದೀಗ ಕಾಲ ಬದಲಾಗಿದೆ ಆಧುನಿಕ ತಂತ್ರಜ್ಞಾನಗಳಿದೆ ಎಂದು ಹೇಳಿದರೂ ಅವರ ಅದೇ ಪವರ್ ಇಂದಿಗೂ ತೋರಿಸುತ್ತದೆ. ಅವರ ಕಾರ್ಯ ವೈಖರಿ, ಒಗ್ಗೂಡಿ ಮಾಡುವ ಕೆಲಸ, ನಂಬಿಕೆ ವಿಶ್ವಾಸ, ಸೇವೆ ತ್ಯಾಗ..ಎಲ್ಲರೂ ಮೆಚ್ಚುವಂತದ್ದು.ಟೀಂ ವರ್ಕೆ ಅವರ ಯಶಸ್ಸಿಗೆ ಹಾದಿ.
ಮನೆಯ ಒಳ್ಳೆಯ ಕಾರ್ಯಕ್ರಮದಲ್ಲಿ ವಿದ್ಯುತ್ ಕೈ ಕೊಟ್ಟಾಗ ಲೈನ್ ಮ್ಯಾನ್ ಸತ್ತ, K.E.B ಗ್ ಬಾಂಬ್ ದೀವೊಡು ಎಂದು ಬೈಗುಳ ಉಣ ಬಡಿಸುವ ನಾವುಗಳು ನಮ್ಮ ಕರ್ತವ್ಯವನ್ನು ಎಷ್ಟು ನಿಭಾಯಿಸುತ್ತೇವೊ ಗೊತ್ತಿಲ್ಲ. ಆದರೆ ಕರೆಂಟ್ ಜನತೆಗೆ ಅನಿವಾರ್ಯವಾಗಿ ವಿದ್ಯುತ್ ಸೇವಕರು ಸೇವೆಗೆ ಲಭಿಸಿದರೆ ಸೇವಕರು. ಪ್ರತಿಕೂಲ ಪರಿಸ್ಥಿತಿಯಲ್ಲಿ ಸಿಗದಿದ್ದರೆ ಅವರಿಗೆ ಮಾತ್ರವಲ್ಲ ಸಂಸಾರ ಕುಟುಂಬಕ್ಕೂ ಬೈಗುಳಗಳ ಸಂಚಕಾರ..!
ಈ ಕಾಯಕವೇ ಅಪಾಯದ ಅಂಚು. ಮನೆಯಿಂದ ಹೊರಬರುವಾಗ ಬರುತ್ತೇನೆ ಎಂದು ಹೇಳುವ ಧೈರ್ಯವಿಲ್ಲದ, ಬಂದರೆ ಬಂದೆ ಎನ್ನುವ ಅಡ್ಡ ಗೋಡೆಯಲ್ಲಿ ದೀಪವಿಡುವ ಬದುಕು ಜೀವದ ಸವಾಲಿನ ಕರ್ತವ್ಯವಿದು. ಪ್ಯಾನಿನಡಿ ಕುಳಿತು ಲೆಡ್ಜರ್ ತೆಗೆದು ಮಡಚುವ, ವಿದ್ಯುತ್ ಬಿಲ್ಲನ್ನು ಸೂಕ್ಷ್ಮ ಕಣ್ಣುಗಳಲ್ಲಿ ನೋಡಿ ಎಣಿಸುವ, ಕಂಪ್ಲೈಂಟ್ ಗಳಿಗೆ ಕಿವಿಯಾಗುವ, ಮೀಟರ್ ನೋಡಿ ಕಮ್ಮಿಯೋ? ಜಾಸ್ತಿಯೋ? ಬಿಲ್ಲನ್ನು ಬಾಗಿಲ ಚಿಲಕಕ್ಕೆ ಸಿಕ್ಕಿಸಿ ಹೋಗುವ ಅರಾಮ ಉದ್ಯೋಗಕ್ಕಿಂತ , ಬಿಲ್ಲ್ ಕಟ್ಟದೆ ಇದ್ದರೆ ಫ್ಯೂಸ್ ತೆಗೆವ ಕಟ್ಟು ನಿಟ್ಟಿನಲ್ಲಿ 24×7 ದುಡಿಯುವ ಪವರ್ ಮ್ಯಾನ್ ಗಳ ಕರ್ತವ್ಯಕ್ಕೆ ಭೇಷ್ ಎನ್ನಲೇ ಬೇಕು.
ಅವರಿಗೂ ಸವಾಲಿನ ಜೊತೆ ಹೋರಾಟ, ವಿದ್ಯುತ್ ಜತೆ ಒಡನಾಟ, ಯಾವ ಹೊತ್ತು ಯಾವ ಕ್ಷಣ ಏನಾಗುತ್ತದೆ ಎನ್ನುವ ಆಕಸ್ಮಿಕ ಘಟನೆಗೆ ಮೈ ಒಡ್ಡುವ ಕಾರ್ಯತತ್ಪರತೆ ಮೆಸ್ಕಾಂನ ಪವರ್ ಮ್ಯಾನ್ ಗಳಿಗೆ.
ಅವಘಡಗಳು ಇಲ್ಲದಿಲ್ಲ ದುರಸ್ತಿ ಕಾರ್ಯ ನಡೆಯುವಾಗ ವಿದ್ಯುತ್ ಗೆ ಬಲಿಯಾಗಿ ಕಂಬದಲ್ಲೆ ನೇತಾಡಿದ ಜೀವಗಳು, ವಿದ್ಯುತ್ ಸ್ಪರ್ಶವಾಗಿ ಮೇಲಿಂದ ಬಿದ್ದು ಒದ್ದಾಡಿ ಬದುಕುತ್ತಿರುವ ಕೋಮಾ ಜೀವಗಳು, ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ನೌಕರರು. ಆದರೂ ಉಳ್ಳವರ ಪಾಲಿಗೆ ಅವರು ಸಾಮಾನ್ಯ ಕೆಲಸಗಾರರು.. ವಿದ್ಯುತ್ ಇಲ್ಲದಾಗ ಬೈಗುಳ ತಿನ್ನುವವರು.
ಎಲ್ಲರ ಮನೆ, ಮನ, ಕ್ರಷಿ,ವಿದ್ಯೆ ಉದ್ಯಮಗಳಿಗೆ ಬೆಳಕು ಚೆಲ್ಲುವ ಪವರ್ ಮ್ಯಾನ್ ನ ಬದುಕಿನ ಬೆಳಕು ನಂದಿದಾಗ ಯಾರಿಗೂ ನೆನಪಾಗುವುದೇ ಇಲ್ಲ. ಆದರೆ ನಮ್ಮ ಮನೆಯ ವಿದ್ಯುತ್ ಬೆಳಕು‌ ಆರಿದಾಗ ಪವರ್ ಮ್ಯಾನ್ ನ ಮೊಬೈಲ್ ನಂಬರ್ ನೆನಪಾಗಿ ಅವನಿಂದ ಮನೆ ಮತ್ತೊಮ್ಮೆ ಪ್ರಕಾಶಮಾನವಾಗುತ್ತದೆ..
ಪವರ್ ಮ್ಯಾನ್ ಮನೆಯಿಂದ ಹೊರಡುವುದು ಮಾನವ ರೂಪದ ಉಗ್ರರ ಜತೆ ಹೋರಾಡಲು ಅಲ್ಲ.. ಕಣ್ಣಿಗೂ ಕಾಣದ ವಿದ್ಯುತ್ ಎನ್ನುವ ತನ್ನ ಸಂಗಾತಿಯ ಜತೆ ಸೇವೆಗೈಯಲು.. ಅವರು ನಮ್ಮ ಮನೆ ಬೆಳಗಿಸುವಂತೆ..ಅವರ ಮನೆ ಮನವೂ ಬೆಳಗಲಿ‌ ಎಂದು ಆಶೀರ್ವದಿಸಿ.. ಸಹಕರಿಸಿ.
✍️ಬರಹ: ಎಚ್ಕೆ ನಯನಾಡು
       ಚಿತ್ರ: ಕಿಶೋರ್ ಪೆರಾಜೆ

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here