


ಬಂಟ್ವಾಳ: ಕಾಲಿನ ಬೆರಳು ಮೂಲಕ ಪರೀಕ್ಷೆ ಬರೆದು ರಾಜ್ಯ ಶಿಕ್ಷಣ ಸಚಿವರ ಗಮನ ಸೆಳೆದಿದ್ದ ಬಂಟ್ವಾಳ ತಾಲೂಕಿನ ಕೌಶಿಕ್ ಪ್ರಥಮ ಶ್ರೇಣಿಯ ಲ್ಲಿ ಉತ್ತೀರ್ಣರಾಗಿದ್ದು ಶಾಲೆಗೆ, ಬಂಟ್ವಾಳ ತಾಲ್ಲೂಕಿಗೆ ಮತ್ತು ರಾಜ್ಯಕ್ಕೆ ಹೆಮ್ಮೆ ತಂದಿದ್ದಾನೆ. ಎಸ್.ಎಸ್.ಎಲ್. ಸಿ.ಪರೀಕ್ಷೆಯಲ್ಲಿ 424 ಅಂಕ ಪಡೆಯುವ ಮೂಲಕ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾನೆ.
ಬಂಟ್ವಾಳ ತಾಲೂಕಿನ ಕಂಚಿಕಾರ ಪೇಟೆ ನಿವಾಸಿ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ಆಚಾರ್ಯ ಅವರ ಎರಡನೇ ಮಗ ಕೌಶಿಕ್. ಈತ ಹುಟ್ಟಿನಿಂದಲೇ ಎರಡು ಕೈಗಳಿಲ್ಲದೆ ಬದುಕಿಗೆ ಅಡಿಯಿಟ್ಟವನು. ಆದರೂ ಯಾವುದೇ ಅಂಜಿಕೆಯಿಲ್ಲದೆ ಯಾರಿಗೂ ಕಡಿಮೆಯಿಲ್ಲದ ರೀತಿಯಲ್ಲಿ ಈತ ಪ್ರತಿಭಾನ್ವಿತ ಬಾಲಕ. ಬಂಟ್ವಾಳ ಎಸ್.ವಿ.ಎಸ್.ಕನ್ನಡ ಮಾದ್ಯಮ ಶಾಲೆಯ ವಿದ್ಯಾರ್ಥಿ. ಈ ಬಾರಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾಗಿದ್ದ. ಶಾಲೆಯಲ್ಲಿ ಪಾಠದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಕೌಶಿಕ್ ಮುಂದಿದ್ದ. ಕಾಲಿನ ಮೂಲಕ ಪರೀಕ್ಷೆ ಬರೆದು ಪ್ರಥಮ ಶ್ರೇಣಿಯ ಲ್ಲಿ ಉತ್ತೀರ್ಣನಾದ ಕೌಶಿಕ್ ಇತರರಿಗೆ ಮಾದರಿಯಾಗಿದ್ದಾನೆ.
ಪಾಠದ ಜೊತೆಯಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿಯೂ ಬಾಲಕ ಎತ್ತಿದ ಕೈ. ಈತ ಒಂದನೇ ತರಗತಿಯಿಂದಲೇ ಕಾಲಿನ ಬೆರಳಿನ ಮೂಲಕ ಪರೀಕ್ಷೆ ಬರೆಯಲು ಆರಂಬಿಸಿದ ಕಾರಣ ಎರಡು ಕೈಗಳಿಲ್ಲದ ಕೌಶಿಕ್ ನಿಗೆ ಆತನ ಕಾಲುಗಳೇ ಕೈಯಾಗಿತ್ತು. ಓದಿನ ಜೊತೆ ಕೌಶಿಕ್ ಡ್ಯಾನ್ಸ್, ಡ್ರಾಯಿಂಗ್, ಈಜು, ಕ್ರಿಕೆಟ್ ಹೀಗೆ ಎಲ್ಲ ಆಟದಲ್ಲಿಯೂ ಎತ್ತಿದ ಕೈ. ಈತನಿಗೆ ಆಟೋಟಗಳಲ್ಲಿ ಅನೇಕ ಬಹುಮಾನಗಳು ದೊರೆತಿವೆ.





