ಬಂಟ್ವಾಳ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಭೂಕುಸಿತ ಸಂಭವಿಸಿ ಲಕ್ಷಾಂತರ ರೂ. ಮೌಲ್ಯದ ಮನೆ ಕುಸಿಯುವ ಭೀತಿಯಲ್ಲಿದೆ.
ಕಳ್ಳಿಗೆ ಗ್ರಾ.ಪಂ. ವ್ಯಾಪ್ತಿಯ ತೊಡಂಬಿಲ ಅನಿಲ್ ಮೊಂತೆರೋ ಅವರ ಮನೆ ಕುಸಿತದ ಭೀತಿ ಎದುರಿಸುತ್ತಿದೆ. ಮನೆಯ ಒಂದು ಪಾರ್ಶ್ವದಲ್ಲಿ ಭೂಕುಸಿತ ಕಂಡು ಬಂದಿದ್ದು, ಮನೆಗೆ ತಾಗಿಕೊಂಡಿದ್ದ ನಾಯಿಗೂಡು ಈಗಾಗಲೇ ಕುಸಿದು ಬಿದ್ದಿದೆ. ಮನೆಯ ಅಡಿಪಾಯದವರೆಗೂ ಭೂಕುಸಿತ ಕಂಡು ಬಂದಿದ್ದು, ಯಾವುದೇ ಕ್ಷಣದಲ್ಲಿಯೂ ಮನೆ ಸಂಪೂರ್ಣ ಕುಸಿದು ಬೀಳುವ ಹಂತದಲ್ಲಿ ಇದೆ. ಮನೆಯೊಳಗಿದ್ದ ಎಲ್ಲಾ ಸಾಮಾಗ್ರಿಗಳನ್ನು ಸ್ಥಳಾಂತರ ಮಾಡಲಾಗಿದೆ.


ತಾತ್ಕಾಲಿಕವಾಗಿ ಮನೆಯವರನ್ನು ಅಲ್ಲಿಯೇ ಸಮೀಪದಲ್ಲಿರುವ ಅನಿಲ್ ಅವರ ತಾಯಿ ಮನೆಗೆ ಸ್ಥಳಾಂತರ ಮಾಡಲಾಗಿದೆ. ಸ್ಥಳಕ್ಕೆ ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್. ಆರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಸರ್ಕಾರದ ಕಡೆಯಿಂದ ಸಿಗುವ ಪೂರ್ಣ ಮನೆ ಪರಿಹಾರ ಮೊತ್ತವನ್ನು ದೊರಕಿಸಿಕೊಡುವ ಭರವಸೆ ನೀಡಿದರು. ಯಾವುದೇ ಕಾರಣಕ್ಕೂ ಈ ಪರಿಸರಕ್ಕೆ ಆಗಮಿಸದಂತೆ ಎಚ್ಚರಿಕೆಯೂ ನೀಡಿದರು.

ಜಿ.ಪಂ.ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ ಸ್ಥಳದಲ್ಲಿದ್ದು ಕಾರ್ಯಚರಣೆಗೆ ಸೂಕ್ತವಾದ ಮಾರ್ಗದರ್ಶನ ನೀಡಿದರು. ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಸರ್ಕಾರದ ಕಡೆಯಿಂದ ಗರಿಷ್ಠ ಪರಿಹಾರಕ್ಕೆ ಒತ್ತಡ ಹೇರುವುದಾಗಿ ಭರವಸೆ ನೀಡಿದರು. ಗ್ರಾ.ಪಂ.ಮಾಜಿ ಸದಸ್ಯರಾದ ವಿಜಯ ಡಿ. ಸೋಜ, ರಮೇಶ್, ಪ್ರಕಾಶ್ ಶೆಟ್ಟಿ, ಶ್ರೀಶೈಲ ತುಂಬೆ, ಸಂಜಿತ್ ತುಂಬೆ, ದಿವಾಕರ ಪಂಬದಬೆಟ್ಟು, ಸ್ಥಳಕ್ಕೆ ಭೇಟಿ ನೀಡಿದರು.

ಘಟನಾ ಸ್ಥಳಕ್ಕೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಎ.ಇ.ಇ.ತಾರನಾಥ ಸಾಲಿಯಾನ್, ಕಂದಾಯ ನಿರೀಕ್ಷಿಕ ರಾಮಕಾಟಿ ಪಳ್ಳ, ಗ್ರಾ.ಪಂ. ಕಾರ್ಯದರ್ಶಿ ಸೇರಿದಂತೆ ವಿವಿಧ ಅಧಿಕಾರಿಗಳು ಭೇಟಿ ನೀಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here