


ಬಂಟ್ವಾಳ: ಮೊಡಂಕಾಪು ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ನಗದು ಕಳವು ಮಾಡಿದ ಆರೋಪಿಯನ್ನು ಬಂಟ್ವಾಳ ನಗರ ಪೊಲೀಸರು ಅಮ್ಟಾಡಿ ಗ್ರಾಮದ ಗೋರೆಮಾರ್ನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬಿ.ಮೂಡ ಗ್ರಾಮದ ಪಲ್ಲಮಜಲು ನಿವಾಸಿ ಇಕ್ಕ ಯಾನೆ ಮಹಮ್ಮದ್ ಇಕ್ಬಾಲ್ ಬಂಧಿತ ಆರೋಪಿ. ಆತ ಆ. 7 ರಂದು ಮೊಂಡಕಾಪು ಹಾಲು ಉತ್ಪಾದಕರ ಸಹಕಾರಿ ಸಂಘದಿಂದ 1100 ರೂ.ಕಳವು ನಡೆಸಿದ್ದನು. ಕಳವಿನ ಕುರಿತು ಸಂಘದ ಕಾರ್ಯದರ್ಶಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದರು.
ಬಂಟ್ವಾಳ ನಗರ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್ಐ ಕಲೈಮಾರ್ ಹಾಗೂ ಸಿಬ್ಬಂದಿ ಶನಿವಾರ ಗಸ್ತು ತಿರುಗುತ್ತಿದ್ದ ವೇಳೆ ಗೋರೆಮಾರ್ನಲ್ಲಿ ಆರೋಪಿಯು ಪೊಲೀಸರನ್ನು ಕಂಡು ಮರೆಯಾಗಲು ಯತ್ನಿಸಿದ್ದು, ಆಗ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವಿನ ವಿಚಾರ ತಿಳಿದು ಬಂದಿದೆ.
ಆರೋಪಿಯ ವಿರುದ್ಧ ಬಂಟ್ವಾಳ ನಗರ ಠಾಣೆ ಸೇರಿದಂತೆ ಬಂಟ್ವಾಳ ಗ್ರಾಮಾಂತರ, ಮಂಗಳೂರು ಉತ್ತರ, ಮಂಗಳೂರು ಪೂರ್ವ ಪೊಲೀಸ್ ಠಾಣೆ, ಉಡುಪಿ ನಗರ, ಮಲ್ಪೆ, ಹಿರಿಯಡ್ಕ, ಕಾರ್ಕಳ ನಗರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿದ್ದು, 15 ದಿನಗಳ ಹಿಂದೆಯಷ್ಟೇ ಜೈಲಿನಿಂದ ಹೊರಬಂದಿದ್ದ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಸುರೇಶ್, ಲೋಕೇಶ್, ಉಸ್ಮಾನ್ ವಾಲಿಕಾರ, ಶ್ರೀಕಾಂತ, ಬಸಪ್ಪ, ವಿವೇಕ, ಕುಮಾರ ಭಾಗವಹಿಸಿದ್ದರು.





