ವಿಟ್ಲ: ಸಂಕಷ್ಟ ಹಾಗೂ ಸಂದಿಗ್ಧ ಪರಿಸ್ಥಿತಿಯನ್ನು ಸರಕಾರ ಸಮರ್ಥವಾಗಿ ಎದುರಿಸುತ್ತಿದ್ದು, ಕೊರೊನಾ ತಡೆಗೆ ನಾನಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಸರಕಾರದೊಂದಿಗೆ ವರ್ತಕರು, ಉದ್ಯಮ ಮಾಲೀಕರು, ಕಾರ್ಮಿಕರು ಜನಸಾಮಾನ್ಯರು ಸಹಕರಿಸಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧಿ ಸೇವನೆಯೊಂದಿಗೆ ಸ್ವಯಂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಅವರು ವಿಟ್ಲ ಸರಕಾರಿ ಮಾದರಿ ಶಾಲೆಯ ಸಭಾಂಗಣದಲ್ಲಿ ಮಂಗಳವಾರ ಕೊರೊನಾ ಜಾಗೃತ ಸಮಿತಿ ಆಶ್ರಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಮಾತನಾಡಿ ಕೊರೊನಾದೊಂದಿಗೆ ನಾವು ಮುಂದಿನ ದಿನಗಳಲ್ಲಿ ಬದುಕಬೇಕಾದ ಪರಿಸ್ಥಿತಿಯಿದೆ. ಪ್ರತಿಯೊಬ್ಬರು ತಮ್ಮ ರಕ್ಷಣೆಯೊಂದಿಗೆ ಸಮಾಜದ ರಕ್ಷಣೆ ಮಾಡಬೇಕಾಗಿದೆ. ಕೊರೊನಾದ ಬಗ್ಗೆ ಜನರಿಗೆ ಇರುವ ತಪ್ಪು ಭಾವನೆಗಳನ್ನು ಹೋಗಲಾಡಿಸಬೇಕು. ಕಾರ್ಖಾನೆಗಳಲ್ಲಿರುವ ಕಾರ್ಮಿಕರಿಗೆ ಕೊರೊನಾ ಬಾಧಿಸದಂತೆ ಮುಂಜಾಗ್ರತೆ ವಹಿಸಲು ಮಾಲೀಕರು ಸಹಕರಿಸಬೇಕು. ಸರಕಾರದಿಂದ ಸಿಗುವ ಉಚಿತ ರ್‍ಯಾಪಿಡ್ ಆಂಟಿಜೆನ್ ಟೆಸ್ಟ್‌ಗೆ ಒಳಪಡುವಲ್ಲಿ ಸಹಕರಿಸುವಂತೆ ಸಲಹೆ ನೀಡಿದರು.
ಬಂಟ್ವಾಳ ತಾಲೂಕು ದಂಡಾಧಿಕಾರಿ ರಶ್ಮಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ವಿಟ್ಲ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ವಿಟ್ಲ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ವೇದಾವತಿ ಸಂವಾದದಲ್ಲಿ ವರ್ತಕರ, ಉದ್ಯಮಿಗಳ ಸಂದೇಹಗಳಿಗೆ ಉತ್ತರಿಸಿದರು. ವಿಟ್ಲ ಹೋಬಳಿ ಕಂದಾಯ ನಿರೀಕ್ಷಕ ದಿವಾಕರ, ಪ.ಪಂ. ಕಂದಾಯ ನಿರೀಕ್ಷಕ ಪಕೀರ ಮೂಲ್ಯ ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here