ವಿಟ್ಲ:  ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ನಡೆಯುವ ಭೂಮಿ ಪೂಜೆ ಸಂದರ್ಭ ದೇಶಕ್ಕೆ ಅತ್ಯಂತ ಶ್ರೇಷ್ಠವೆನಿಸಿದ ಕ್ಷಣವಾಗಿದೆ. ಸಹಸ್ರಾರು ವರ್ಷ ಕಾಲದ ಇತಿಹಾಸದ ಘಟನೆಯೊಂದು ವರ್ತಮಾನದಲ್ಲಿ ಭವ್ಯಮಂದಿರದೊಂದಿಗೆ ಮಹಾಸಾಕ್ಷಿಯಾಗಲಿದೆ. ಅಸಂಖ್ಯಾತ ಶ್ರೀರಾಮ ಸೇವಕರ ಹೋರಾಟ ಭವ್ಯ ಮಂದಿರ ನಿರ್ಮಾಣದೊಂದಿಗೆ ಸುಖಾಂತ್ಯವಾಗಿ ಜಗತ್ತಿನಲ್ಲಿಯೇ ಪ್ರಕಾಶಿಸಲಿದೆ ಎಂದು ಹಿರಿಯ ಆರೆಸ್ಸೆಸ್ ಕಾರ್ಯಕರ್ತ, ಕ್ಯಾಂಪ್ಕೋ ಸಹಕಾರಿ ಸಂಸ್ಥೆಯ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್. ತಿಳಿಸಿದರು.
ಅವರು ಪುಣಚ ಶ್ರೀ ಮಹಿಷಮರ್ದಿನಿ ದೇಗುಲದ ವಠಾರದ ಶ್ರೀದೇವಿ ಭವನದಲ್ಲಿ ಬುಧವಾರ ಅಯೋಧ್ಯೆ ಕರಸೇವಕರಾಗಿ ಭಾಗವಹಿಸಿದ ಶ್ರೀರಾಮ ಭಕ್ತರಿಗೆ ಗೌರವ ಸಮರ್ಪಿಸಿ ಮಾತನಾಡಿದರು. ಶ್ರೀರಾಮನ ಜೀವನ ಆದರ್ಶ ಜಗತ್ತಿನ ಸಮಸ್ತ ಜನರಿಗೂ ಮಾರ್ಗದರ್ಶಕವಾಗಿದ್ದು, ಪ್ರತಿಯೊಬ್ಬರೂ ಸಹ ಶ್ರೀರಾಮನ ಆದರ್ಶದೊಂದಿಗೆ ಬದುಕಬೇಕು ಎಂದು ತಿಳಿಸಿದರು.
ಹಿರಿಯ ಕರಸೇವಕ ಚ.ಕೃಷ್ಣಶಾಸ್ತ್ರಿ ಮಣಿಲ ದೇವರು, ಮಣ್ಣು ನಾವಿರುವ ದೇಶದ ಧರ್ಮದ ಭಾಗವಾಗಿದೆ. ದೇವರನ್ನು ನಂಬುವ ಭಕ್ತರ ಹೃದಯಕ್ಕೆ ನೋವಾದಾಗ ಸಾಮಾನ್ಯನೂ ಸಹ ಪ್ರಾಣಕ್ಕೆ ಭಯಭೀತನಾಗುವುದಿಲ್ಲ ಎಂದರು.
ಸಮಾರಂಭದಲ್ಲಿ ೧೭ ಕರಸೇವಕರಿಗೆ ಗೌರವ ಸಲ್ಲಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಕೃಷ್ಣ ಬನ್ನಿಂತಾಯ, ಶ್ರೀದೇವಿ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಶ್ರೀರಾಮಚಂದ್ರ ಭಟ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ನಡೆಯಿತು. ಪುಣಚ ಪೇಟೆಯೆಲ್ಲೆಡೆ ಸಿಹಿ ಹಂಚಲಾಯಿತು. ರಾಮಕೃಷ್ಣ ಮೂಡಂಬೈಲು ಸ್ವಾಗತಿಸಿ, ಪ್ರಸ್ತಾವನೆಗೈದರು. ರಾಜೇಂದ್ರ ರೈ ವಂದಿಸಿದರು. ಅಜಯ ಶಾಸ್ತ್ರಿ ಮಲೆತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here