ಬಹುತೇಕ ದೇವಾಲಯಗಳು ಕೋವಿಡ್-19ರ ಪ್ರಹಾರಕ್ಕೆ ಬಲಿಯಾಗಿವೆ. ದೇವಾಲಯಗಳನ್ನು ತೆರೆಯಬಾರದು; ಪ್ರಸಾದ, ತೀರ್ಥ ಮತ್ತು ಭೋಜನಗಳನ್ನು ದೇವಾಲಯಗಳಲ್ಲಿ ಏರ್ಪಡಿಸಬಾರದು; ಇದು ಕೋವಿಡ್‌ನಿಂದ ಸುರಕ್ಷತೆ ಹೊಂದಲು ಸರಕಾರದ ಮುನ್ನೆಚ್ಚರಿಕಾ ಸುತ್ತೋಲೆಯ ಪ್ರಮುಖಾಂಶಗಳು. ರಾಜ ಮಹಾರಾಜರ ಆಶ್ರಯಿತ ಕಾಲದಲ್ಲಿ ದೇವಾಲಯಗಳಿಗೆ ರಾಜಸ್ವ ಬರುತ್ತಿತ್ತು ಮತ್ತು ಉಂಬಳಿಯಾಗಿ ಕೃಷಿ ಭೂಮಿಯನ್ನೂ ನೀಡಲಾಗಿತ್ತು. ಆದರೆ ಇಂದು ಸರಕಾರದ ವಶದಲ್ಲಿರುವ ದೇವಾಲಯಗಳೇ ಅಧಿಕ. ಮುಜರಾಯಿ ಇಲಾಖೆಯು ಕೊಡುವ ಅನುದಾನ ಬೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆ ಎಂಬಂತೆ ಬಹಳ ಕಡಿಮೆ. ಉಂಬಳಿ ಭೂಮಿ ಉಳುವವನಿಗೆ ಹಂಚಿಕೆಯಾಗಿದೆ. ಅರ್ಚಕರು, ದೇವತಾ ಸೇವಕರು, ಪಾಕಶಾಲಾ ಪರಿಶ್ರಮಿಗಳು ಸ್ವಚ್ಛತಾ ಕಾರ್ಮಿಕರು, ಪರಿಚಾರಕರಾದ ವಾಲಗದವರು, ಘಂಟಾ ವಾದಕರು, ಚೆಂಡೆ ವಾದಕರು ಇವರ ವೇತನಗಳನ್ನು ಮುಜರಾಯಿ ಇಲಾಖೆಯೇ ಎಲ್ಲಾ ಕಡೆ ನೀಡುತ್ತಿಲ್ಲ. ನೀಡಿದರೂ ಅದು ದೇವಾಲಯದ ಆದಾಯವನ್ನೂ ಅವಲಂಬಿಸಿರುತ್ತದೆ. ದೇವಾಲಯಗಳ ಆದಾಯದಿಂದ ಪಾವತಿಯಾಗುವ ಸಂದರ್ಭಗಳಲ್ಲಿ ಆದಾಯ ಶೂನ್ಯವಾದಾಗ ವೇತನ ಬಟವಾಡೆ ಹೇಗೆ ಸಾಧ್ಯ? ಭಕ್ತರಿಲ್ಲ ಎಂದಾದಾಗ ಸೇವೆಗಳಿಲ್ಲ, ಹುಂಡಿ ಕಾಣಿಕೆಗಳಿಲ್ಲ, ಪ್ರಸಾದ, ತೀರ್ಥ, ಅರ್ಚನೆ, ಬಲಿವಾಡು, ಹಣ್ಣುಕಾಯಿ ಮುಂತಾದುವುಗಳಿಂದ ಬರುವ ಹಣಕಾಸಿಗೆ ಕೋವಿಡ್ ಅಡ್ಡಗಾಲು ಹಾಕಿದಂತೆಯೇ ಅಲ್ಲವೇ? ಆದಾಯ ಇಲ್ಲ ಎಂದಾದಾಗ ದೇವಾಲಯಗಳ ನಿರ್ವಹಣೆ ಬಡವಾಯಿತು.
ಬಹಳ ಗ್ರಾಮೀಣ ಮತ್ತು ಆದಾಯ ರಹಿತ ದೇವಾಲಯಗಳು ವಿದ್ಯುತ್ ಬಿಲ್ ಪಾವತಿಸಲೂ ತಡಕಾಡಿವೆ. ಹಾಗಿರುವಾಗ ಯಾರದೇ ಮತ್ತೂ ಯಾವುದೇ ವೇತನ ಬಟವಾಡೆ ಅಸಾಧ್ಯದ ಮಾತೇ ಅಲ್ಲವೇ? ಇಂತಹ ಸಂದಿಗ್ಧತೆಯನ್ನು ಹೆಚ್ಚಿನ ಆರಾಧನಾಲಯಗಳೂ ದೈವಸ್ಥಾನಗಳೂ ಅನುಭವಿಸಿವೆ. ಆದರೆ ದೇವಾಲಯಗಳಿಗೆ ಬಿದ್ದ ಹೊಡೆತವೇ ಅಗಾಧ. ಇನ್ನು ಪರಿಚಾರಕರು ಅರ್ಚಕರ ಭಾಗಕ್ಕೆ ಇಣುಕಿದರೆ ಅವರ ವೈಯಕ್ತಿಕ ಬದುಕೂ ಡೋಲಾಯಮಾನವೇ ಸರಿ. ದೇವಾಲಯಗಳನ್ನು ಬಿಡುವಂತಿಲ್ಲ, ಬೇರೆ ಕೆಲಸ ಮಾಡುವಂತಿಲ್ಲ, ಕುಟುಂಬ ಪೋಷಣಾ ಆದಾಯ ಗಳಿಕೆಗೆ ಅನ್ಯ ಕ್ರಮಗಳನ್ನು ಅನುಸರಿಸುವಂತಿಲ್ಲ ಎಂಬಂತೆ ಅಡಕತ್ತರಿಯೆಡೆಗೆ ಸಿಕ್ಕಿ ನಜ್ಜು-ಗುಜ್ಜು ಬದುಕು ನಡೆಸುವ ಬವಣೆ ಅವರೆಲ್ಲರ ಪಾಲಿಗೆ. ಕೋವಿಡ್ ನೀಡಿದ ಮರ್ಮಾಘಾತ ಬಲು ವೇದನೀಯ.
ಅರ್ಚಕರು, ಅಡುಗೆಯವರೂ ಸೇರಿದಂತೆ ದೇವಾಲಯದ ಪರಿಚಾರಕರೆಲ್ಲರಿಗೂ ಖಾಸಗಿ ಬದುಕೊಂದಿದೆ. ಬ್ಯಾಂಕ್ ಲೇವಾದೇವಿಯಿದೆ. ಕೃಷಿ, ಮಕ್ಕಳ ವಿದ್ಯಾಭ್ಯಾಸ, ಮದುವೆ, ಮುಂಜಿಗಳಿಗಾಗಿ ಬ್ಯಾಂಕುಗಳಿಂದಲೋ ಸಹಕಾರಿ ಸಂಘಗಳಿಂದಲೋ, ಆಪ್ತೇಷ್ಟರಿಂದಲೋ ಸಾಲ ಮಾಡಿರುತ್ತಾರೆ. ಕೆಲವರು ಮನೆ ನಿರ್ಮಾಣಕ್ಕೆಂದು ಲಕ್ಷಾಂತರ ರೂಪಾಯಿಗಳ ಸಾಲವನ್ನೂ ಮಾಡಿರುತ್ತಾರೆ. ಕುಡಿಯುವ ನೀರಿಲ್ಲವೆಂದು ಕೊಳವೆ ಬಾವಿ ಮಾಡಿಸಲೂ ಸಾಲ ಪಡೆದವರಿದ್ದಾರೆ. ಮನೆಯಲ್ಲಿದ್ದ ಆಭರಣಗಳನ್ನು ಒತ್ತೆಯಿಟ್ಟು ವಾಯಿದೆ ದಾಟಿದ ಅಡವು ಸಾಲಗಾರರೂ ಇದ್ದಾರೆ. ಇವೆಲ್ಲವುಗಳಿಗೆ ಸಕಾಲದ ಪಾವತಿಗಳು ನಡೆಯಬೇಕು ತಾನೇ? ವೇತನವಿಲ್ಲದೇ, ಬೇರಾವ ಆದಾಯ ಮೂಲಗಳೂ ಇರದೆ ಇರುವ ಇಂತಹವರ ಬಗ್ಗೆ ಯೋಚಿಸಿದಾಗ, ಮನಸ್ಸು ಅಳುತ್ತದೆ. ಇಂತಹವರ ಬೆಂಬಲಕ್ಕೆ ಮಹಾ ಮಹಾ ದಾನಿಗಳು ಒದಗಿಬಂದ ಪ್ರಕರಣಗಳು ಬಹಳ ಕಡಿಮೆಯೆಂದೇ ಹೇಳಬೇಕು. ಭಕ್ತ ಜನರ ಸಂಪರ್ಕದಲ್ಲೇ ಆಯುಷ್ಯ ಕಳೆಯುವ ಇವರಿಗೆ ಕೋವಿಡ್ ೧೯ ಯಾವುದೇ ಭಕ್ತನು ಸಂಪರ್ಕಿಸದಂತೆ ನಿರ್ಬಂಧಿಸಿದೆ. ಲೋಕಾಃ ಸಮಸ್ತಾ ಸುಖಿನೋ ಭವಂತು ಎಂದು ನಿತ್ಯ ದೇವರನ್ನು ಬೇಡುವ ದೇವಾಲಯದ ಪರಿಚಾರಕರಿಗೆ ಮಾತ್ರ ಕೋವಿಡ್ ದುಃಖಿಗಳನ್ನಾಗಿ ಮಾಡಿರುವುದು ಅತ್ಯಂತ ವೇದನೀಯ. ಮುಂದಿನ ದಿನಗಳಲ್ಲಿಯಾದರೂ ಇವರ ಉದ್ಯೋಗ ಮತ್ತು ಆದಾಯಕ್ಕೆ ಅಗತ್ಯವಾದ ಭದ್ರತೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರಕಾರ ಮತ್ತು ಸಮುದಾಯ ಚಿಂತನೆ ಮಾಡಬೇಕು ಮತ್ತು ಸೂಕ್ತವಾದ ಸಾರ್ವಕಲಿಕ ಪಾಲನೀಯ ಕ್ರಮಗಳನ್ನು ಅನುಷ್ಠಾನಿಸಬೇಕು.

— ಮುಂದುವರಿಯುವುದು

ರಮೇಶ ಎಂ. ಬಾಯಾರು ಎಂ.ಎ, ಬಿಎಡ್,
ರಾಜ್ಯಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರು
’ನಂದನ’ ಕೇಪು- 574243

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here