


ವಿಟ್ಲ: ಪೇಟೆಯ ಹೆಚ್ಚಿನ ಭೂಭಾಗವೂ ಅರಮನೆಗೆ ಸಂಬಂಧ ಪಟ್ಟ ಜಾಗವಾಗಿದ್ದು, ನಾನಾ ರೀತಿಯಲ್ಲಿ ಜಾಗದ ಮಾಲಕತ್ವ ಪಡೆದುಕೊಂಡಿರಬಹುದು. ಆದರೆ ಅರಮನೆಯ ಮೂಲ ಸ್ಥಳ ಎಂಬ ನಿಟ್ಟಿನಲ್ಲಿ ಅರಸರಿಗೆ ಗೌರವ ಸೂಚಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಾಬು ಕೆ. ವಿ. ಹೇಳಿದರು.
ಅವರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ವಿಟ್ಲ ಅರಮನೆಯ ಹಿರಿಯರಾದ ಜನಾರ್ದನ ವರ್ಮ ಅವರ ನಿಧನಕ್ಕೆ ಸಂತಾಪ ಸೂಚಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಬಾಲಕೃಷ್ಣ ಕಾರಂತ ಎರುಂಬು ಮಾತನಾಡಿ, ಅರಸರು ಇಲ್ಲ ಎಂದು ಹೇಳುವಾಗ ಊರು ಸಂಕಷ್ಟದಲ್ಲಿ ಇದೆ ಎಂಬ ಅರ್ಥ ಬರುವಂತದ್ದು. ಊರು ಸಮೃದ್ಧಿಯಾಗುವ ನಿಟ್ಟಿನಲ್ಲಿ ಪ್ರತಿಯೊಂದು ವ್ಯವಸ್ಥೆಗಳು ನಡೆಯಬೇಕು. ಅರಸರ ಆಳ್ವಿಕೆಯ ಸಮಯದಲ್ಲಿಯೂ ಗರ್ವವನ್ನು ತೋರಿಸಿದವರಲ್ಲ. ಅರಮನೆ ಸಂಬಂಧದಲ್ಲಿ ಎಲ್ಲಾ ದೈವ ದೇವಸ್ಥಾನಗಳಿದ್ದು, ಪರಂಪರೆಯನ್ನು ಉಳಿಸಿಕೊಳ್ಳುವ ಕಾರ್ಯ ನಡೆಯಬೇಕು ಎಂದರು.
ಸದಾಶಿವ ಆಚಾರ್ಯ ಕೈಂತಿಲ, ರಮಾನಾಥ ವಿಟ್ಲ ನುಡಿನಮನ ಸಲ್ಲಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ರಾಮದಾಸ ಶೆಣೈ, ರವೀಶ್, ಸಂಘದ ಕಾರ್ಯದರ್ಶಿ ಕ್ಲಿಫರ್ಡ್ ವೇಗಸ್ ಮತ್ತಿತರರು ಉಪಸ್ಥಿತರಿದ್ದರು. ವಿಟ್ಲ ಪೇಟೆ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಸಂತಾಪ ಸೂಚಿಸಿದರು. ಇತ್ತೀಚೆಗೆ ನಿಧನರಾದ ವರ್ತಕರ ಸಂಘದ ಹಿರಿಯ ಸದಸ್ಯರಾದ ವಿ. ಸೀತಾರಾಮ ಹಾಗೂ ವಿ. ಮಹಮ್ಮದ್ ಜೋಗಿಮಠ ಅವರಿಗೂ ಸಂತಾಪ ಸೂಚಿಸಲಾಯಿತು.





