ವಿಟ್ಲ: ಕಾಯಿಲೆಗಳು ಹಳ್ಳಿಯಿಂದ ನಗರಕ್ಕೆ ಎಂಬ ಅಪವಾದವಿತ್ತು, ಆದರೆ ಶ್ರೀಮಂತರು, ಬುದ್ಧಿವಂತರು ನಗರದಿಂದ ಹಳ್ಳಿಗಳಿಗೆ ಕರೋನಾ ಹಬ್ಬಿಸುವ ಕಾರ್ಯ ಆಗುತ್ತಿದೆ ಎಂದರೆ ತಪ್ಪಾಗಲಾರದು. ಮಾಸ್ಕ್ ಇಲ್ಲದೇ ಪೇಟೆಯಲ್ಲಿ ಸುತ್ತಾಡುವವರಿಗೆ ಹಾಗೂ ಅಂಗಡಿ ಮಾಲಕರು ಸಾಮಾಜಿಕ ಅಂತರಕ್ಕೆ ಮಹತ್ವ ನೀಡದೇ ಹೋದಲ್ಲಿ ದಂಡ ವಿಧಿಸುವ ಕಾರ್ಯವಾಗಬೇಕು ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು.
ಅವರು ಮಂಗಳವಾರ ವಿಟ್ಲ ಅತಿಥಿ ಗೃಹದಲ್ಲಿ ವಿಟ್ಲ ಪ್ರದೇಶದಲ್ಲಿ ಕರೋನಾ ಮುನ್ನೆಚ್ಚರಿಕೆಯ ನಿಟ್ಟಿನಲ್ಲಿ ಸರಕಾರಿ ಹಾಗೂ ಖಾಸಗಿ ವೈದ್ಯರ ಸಭೆ ನಡೆಸಿ ಮಾತನಾಡಿದರು.
ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್. ಆರ್. ಮಾತನಾಡಿ, ಸರಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಕಡಿಮೆ ಆದರೆ, ಪ್ರತ್ಯೇಕವಾದ ವ್ಯವಸ್ಥೆಗೆ ಈಗಾಗಲೇ ಸ್ಥಳಗಳನ್ನು ಗುರುತಿಸಿಕೊಳ್ಳಲಾಗಿದೆ. ವಿಟ್ಲ ಭಾಗದಲ್ಲಿ ಹಾಸ್ಟೆಲ್‌ಗಳನ್ನು ಗೊತ್ತು ಪಡಿಸಲಾಗಿದೆ ಎಂದರು.
ತಾಲೂಕು ಆರೋಗ್ಯ ಅಧಿಕಾರಿ ದೀಪಾ ಪ್ರಭು ಮಾತನಾಡಿ 60 ವರ್ಷದಿಂದ ಮೇಲ್ಪಟ್ಟವರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. 1100 ಜನಕ್ಕೆ ರಾಪಿಡ್ ಆಂಟಿಜೆನ್ ಟೆಸ್ಟ್ ಮಾಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದ ವಿಟ್ಲ ಹೋಬಳಿ ಭಾಗದಲ್ಲಿ 58 ಪ್ರಕರಣ ಬೆಳಕಿಗೆ ಬಂದಿದ್ದು, ಸಕ್ರೀಯವಾಗಿ 32 ಪ್ರಕರಣಗಳಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲೇ 3 ನಿಧನವಾಗಿದೆ. 26 ಮಂದಿಗೆ ಹೋಮ್ ಐಸೋಲೇಶನ್ ಮಾಡಲಾಗಿದೆ ಎಂದರು.

ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ಹರಿಪ್ರಸಾದ್ ಯಾದವ್, ಕಂದಾಯ ನಿರೀಕ್ಷಕ ದೀವಾಕರ ಮುಗುಳ್ಯ, ಗ್ರಾಮ ಕರಣಿಕರ ಪ್ರಕಾಶ್, ಪಟ್ಟಣ ಪಂಚಾಯಿತಿ ಸದಸ್ಯರಾದ ಅರುಣ್ ವಿಟ್ಲ, ರಾಮದಾಸ ಶೆಣೈ, ಲೋಕನಾಥ ಶೆಟ್ಟಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ ಉಪಸ್ಥಿತರಿದ್ದರು.

 

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here